ಸುರಪುರ: ತಾಲ್ಲೂಕಿನ ದೇವಪುರ ಗ್ರಾಮದ ಕಾಸೀಮಸಾಬ್ ರಜೀಬಸಾಬ್ ಮಕಾನದಾರ ಥ್ರೋಬಾಲ್ ಆಟದಲ್ಲಿ ಅದ್ವಿತೀಯ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಹರಿಯಾಣದಲ್ಲಿ ನಡೆದ ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡ ರನ್ನರ್ ಅಪ್ ಆಗಲು ಇವರ ಅಮೋಘ ಆಟ ಕಾರಣವಾಗಿದೆ.
ದೇವಪುರದಲ್ಲಿ ಐದಾರು ವರ್ಷಗಳಿಂದ ಬಿಲ್ಲುವಿದ್ಯೆ ತರಬೇತಿ ನಡೆಯುತ್ತಿದೆ. ತರಬೇತುದಾರ ಮೌನೇಶಕುಮಾರ ಅವರಿಗೆ ಎಲ್ಲ ಆಟಗಳ ಮೇಲೆ ಹುಚ್ಚು ಪ್ರೀತಿ. ಅವರ ಸ್ನೇಹಿತ ಥ್ರೋಬಾಲ್ ಬಗ್ಗೆ ಪೇಪರ್‌ನಲ್ಲಿ ಬಂದ ಪ್ರಕಟಣೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳಿಸಿದ್ದು ಕಾಸೀಮಸಾಬ ಅವರಲ್ಲಿದ್ದ ಪ್ರತಿಭೆ ಅರಳಲು ಕಾರಣವಾಗಿದೆ.
ಕರ್ನಾಟಕ ಥ್ರೋಬಾಲ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ ಕೊತತ್ತಿ ಈ ಪ್ರಕಟಣೆ ನೀಡಿದ್ದರು. ರಾಜ್ಯ ಮಟ್ಟದ ಅಯ್ಕೆಯಲ್ಲಿ ಭಾಗವಹಿಸಲು ಒಂದು ವಾರದ ಕಾಲಾವಕಾಶ ಇತ್ತು. ತಕ್ಷಣ ದೇವಪುರದ 7- 8 ಹುಡುಗರ ತಂಡ ಕಟ್ಟಿದ ಮೌನೇಶಕುಮಾರ ಐದಾರು ದಿನ ತರಬೇತಿ ನೀಡಿ ಸೆಪ್ಟೆಂಬರ್‌ನಲ್ಲಿ ಮಂಡ್ಯ ನಗರಕ್ಕೆ ಆಯ್ಕೆಗೆ ಕರೆದುಕೊಂಡು ಹೋದರು. ಅಲ್ಲಿ ಉತ್ತಮ ಸಾಧನೆ ತೋರಿದ ಕಾಸೀಮಸಾಬ್ ಮಾತ್ರ ರಾಜ್ಯ ತಂಡಕ್ಕೆ ಆಯ್ಕೆಯಾದರು.
ಪುತ್ತೂರು ತಾಲ್ಲೂಕಿನ ಸವಣೂರಿನಲ್ಲಿ 9 ದಿನ ತರಬೇತಿ ಮುಗಿಸಿಕೊಂಡು ಹರ್ಯಾಣಕ್ಕೆ ತೆರಳಿದ ಸಬ್ ಜೂನಿಯರ್ ತಂಡದಲ್ಲಿ ಕಾಸೀಮಸಾಬ್ ಸ್ಥಾನ ಪಡೆದರು. 30 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ದೆಹಲಿ, ಮಹಾರಾಷ್ಟ್ರ, ಮುಂಬೈ, ಗೋವಾ, ತೆಲಂಗಾಣ, ಪಂಜಾಬ, ಆಂಧ್ರಪ್ರದೇಶ ತಂಡವನ್ನು ಸೋಲಿಸಿದ ಕರ್ನಾಟಕ ಫೈನಲ್‍ಗೆ ಪ್ರವೇಶಿಸಿತು. ಫೈನಲ್‍ನಲ್ಲಿ ಹರಿಯಾಣ ತಂಡದೊಂದಿಗೆ ತೀವ್ರ ಸೆಣಸಾಟ ನೀಡಿ 22-25, 20-25 ಅಂಕಗಳೊಂದಿಗೆ ರನ್ನರ್ ಅಪ್ ಆಯಿತು. ಅತ್ಯುತ್ತಮ ಪ್ರದರ್ಶನ ನೀಡಿದ ಕಾಸೀಮಸಾಬ್ ಉತ್ತಮ ಆಟಗಾರ ಪ್ರಶಸ್ತಿಗೆ ಭಾಜನರಾದರು.
‘ನಾನು ಪ್ರಾಥಮಿಕ ಶಾಲಾ ದಿನಗಳಲ್ಲಿ ಥ್ರೋಬಾಲ್ ಆಡುತ್ತಿದ್ದೆ. ನನಗೆ ಗ್ರಾಮದ ಶಾಂತಗೌಡ ಪಾಟೀಲ ಪ್ರೋತ್ಸಾಹ ನೀಡಿದರು. ಮೌನೇಶಕುಮಾರ ಅಗತ್ಯ ತರಬೇತಿ ನೀಡಿದರು. ಇದು ನನಗೆ ಸಾಧನೆ ಮಾಡಲು ನೆರವಾಯಿತು. ನನಗೆ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸಿದೆ’ ಎನ್ನುತ್ತಾರೆ ಕಾಸೀಮಸಾಬ್.
ಚಾಕಚಕ್ಯತೆಯ ಕ್ರೀಡೆ
ಥ್ರೋಬಾಲ್ ಚಾಕಚಕ್ಯತೆಯ ಆಟ. ಒಂದು ತಂಡದಲ್ಲಿ 7 ರಿಂದ 9 ಆಟಗಾರರು ಇರುತ್ತಾರೆ. ಎರಡು ತಂಡಗಳ ನಡುವೆ ನೆಟ್ ಇರುತ್ತದೆ. ಎದುರಾಳಿ ಎಸೆದ ಚಂಡನ್ನು ಎರಡೂ ಕೈಗಳಿಂದ ಹಿಡಿದು ತಕ್ಷಣ ಎದುರಾಳಿ ತಂಡದ ಕಡೆಗೆ ಥ್ರೋ ಮಾಡಬೇಕು. ಎಸೆಯಲು ಸಿಗುವ ಅವಧಿ 3 ಸೆಕೆಂಡ್. ಸಮಯ ಮೀರಿದರೆ ಎದುರಾಳಿ ತಂಡಕ್ಕೆ ಅಂಕ.
ಎಡಕ್ಕೆ ಬಂದರೆ ಎಡಗೈಯಿಂದ ಬಲಕ್ಕೆ ಬಂದರೆ ಬಲಗೈಯಿಂದ ಥ್ರೋ ಮಾಡಬೇಕು. ಎದುರಾಳಿ ಹಿಡಿಯದಿದ್ದರೆ ಅಂಕ ಲಭಿಸುತ್ತದೆ. ಆಟಗಾರನಿಗೆ ಬುದ್ಧಿ ಕ್ಷಮತೆ, ಸಮಯ ಪ್ರಜ್ಞೆ, ಫಿಟ್‍ನೆಸ್ ಅವಶ್ಯ. ಆಟ ವೀಕ್ಷಿಸಲೂ ಬಲು ಚೆಂದ.
*
ಕಾಸೀಮಸಾಬ್ ಪ್ರತಿಭಾನ್ವಿತ ಆಟಗಾರ. ಸೂಕ್ತ ತರಬೇತಿ ದೊರೆತರೆ, ನಿರಂತರ ಅಭ್ಯಾಸ ಮಾಡಿದರೆ ಏಷ್ಯನ್ ಗೇಮ್ಸ್‌ನಲ್ಲಿ ಆಡುವ ಅವಕಾಶ ಸಿಗಬಹುದು.
- ಪ್ರಕಾಶ ಕೊತತ್ತಿ, ಅಧ್ಯಕ್ಷ, ಕರ್ನಾಟಕ ಥ್ರೋಬಾಲ್ ಅಸೋಸಿಯೇಶನ್
*
ಥ್ರೋಬಾಲ್ ಅನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಿಲ್ಲ. ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದರೆ ರಾಜ್ಯ ಸರ್ಕಾರ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುತ್ತದೆ.
- ಮೌನೇಶಕುಮಾರ ಚಿಕ್ಕನಳ್ಳಿ, ತರಬೇತುದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.