ADVERTISEMENT

ವಿಶ್ವ ಚೆಸ್‌ ಫೈನಲ್‌ ಪಂದ್ಯದಂತೆ ಅನಿಸುತ್ತಿಲ್ಲ: ಕ್ಯಾಸ್ಪರೋವ್

ಚಾಂಪಿಯನ್‌ ಪಟ್ಟಕ್ಕೆ ಗುಕೇಶ್‌– ಲಿರೆನ್‌ ಪೈಪೋಟಿ

ಪಿಟಿಐ
Published 1 ನವೆಂಬರ್ 2024, 15:09 IST
Last Updated 1 ನವೆಂಬರ್ 2024, 15:09 IST
<div class="paragraphs"><p>ಕ್ಯಾಸ್ಪರೋವ್‌ </p></div>

ಕ್ಯಾಸ್ಪರೋವ್‌

   

-ಎಎಫ್‌ಪಿ ಚಿತ್ರ

ನವದೆಹಲಿ: ‘ಭಾರತದ ಡಿ.ಗುಕೇಶ್ ಮತ್ತು ಚೀನಾದ ಡಿಂಗ್ ಲಿರೆನ್ ನಡುವಣ ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯವು ತಮಗೆ ಫೈನಲ್‌ನಂತೆ ಕಾಣಿಸುತ್ತಿಲ್ಲ. ಐದು ಬಾರಿಯ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್‌ ಗೈರುಹಾಜರಿಯಲ್ಲಿ ಇದನ್ನು ವಿಶ್ವ ಚಾಂಪಿಯನ್‌ಷಿಪ್ ಫೈನಲ್ ಎಂದು ತಾವು ಪರಿಗಣಿಸುವುದಿಲ್ಲ’ ಎಂದು ರಷ್ಯಾದ ಚೆಸ್‌ ದಂತಕತೆ ಗ್ಯಾರಿ ಕ್ಯಾಸ್ಪರೋವ್ ಹೇಳಿದ್ದಾರೆ.

ADVERTISEMENT

ನಾರ್ವೆಯ ಚೆಸ್‌ ಚತುರ ಕಾರ್ಲ್‌ಸನ್ ಅವರು ಹೋದ ವರ್ಷ ಪ್ರಶಸ್ತಿ ಪಂದ್ಯದಿಂದ ಹಿಂದೆಸರಿಯುವ ಮೂಲಕ ವಿಶ್ವ ಚಾಂಪಿಯನ್ನರ ದೀರ್ಘ ಪಟ್ಟಿ ಕೊನೆಗೊಂಡಿದೆ ಎಂದು ಕ್ಯಾಸ್ಪರೋವ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಕಾರ್ಲ್‌ಸನ್‌ ಫೈನಲ್‌ನಲ್ಲಿ ಆಡಿರಲಿಲ್ಲ. ಇಂಥ ದೀರ್ಘ ಮಾದರಿಯಲ್ಲಿ ಆಡಲು ಮೊದಲಿನ ಪ್ರೇರಣೆ ಕಳೆದುಕೊಂಡಿರುವುದಾಗಿ ಅವರು ಹೇಳಿದ್ದರು. ಅವರು ಹಿಂದೆಸರಿದ ಕಾರಣ  ಲಿರೆನ್‌ ಮತ್ತು ರಷ್ಯಾದ ನಿಪೊಮ್‌ನಿಷಿ ನಡುವೆ ಕಳೆದ ವರ್ಷ ಫೈನಲ್ ನಡೆದಿತ್ತು. ಲಿರೆನ್ ಈ ಸೆಣಸಾಟದಲ್ಲಿ ಗೆದ್ದು ವಿಶ್ವ ಚಾಂಪಿಯನ್ ಆಗಿದ್ದರು.

ವಿಶ್ವದ ಅತಿ ಶ್ರೇಷ್ಠ ಆಟಗಾರನನ್ನು ಒಳಗೊಂಡಿರುವ ಫೈನಲ್ ನನ್ನ ಪ್ರಕಾರ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಎನಿಸುತ್ತದೆ ಎಂದು ಕ್ಯಾಸ್ಪರೋವ್ ಅವರು ಸೇಂಟ್ ಲೂಯಿ ಚೆಸ್‌ ಕ್ಲಬ್‌ನ ಯು ಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಕಾರ್ಲ್‌ಸನ್‌ ಅವರವರೆಗೆ,  16 ವಿಶ್ವ ಚಾಂಪಿಯನ್ನರು ತಮ್ಮ ಕಾಲದ ಶ್ರೇಷ್ಠ ಆಟಗಾರರ ವಿರುದ್ಧ  ಸೆಣಸಾಟವನ್ನು ಗೆದ್ದು ಆ ಪಟ್ಟಕ್ಕೇರಿದ್ದರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಈ ಬಾರಿಯ ಪೈಪೋಟಿಯಲ್ಲಿ ಗುಕೇಶ್ ಅವರು ಗೆಲ್ಲುವ ನೆಚ್ಚಿನ ಆಟಗಾರ ಎಂದು ಕ್ಯಾಸ್ಪರೋವ್ ಹೇಳಿದ್ದಾರೆ. ಲಿರೆನ್‌ ಅವರು ಗುಕೇಶ್ ವಿರುದ್ಧ ಆಡುತ್ತಿರುವುದು ಮಹತ್ವದ ಪಂದ್ಯದಲ್ಲಿ. ಇದನ್ನು ಫಿಡೆ ನಡೆಸುತ್ತಿದೆ. ಗುಕೇಶ್ ಅವರು ‍ಪ್ರಶಸ್ತಿ ಗೆಲ್ಲುವ ಫೆವರೀಟ್‌. ಲಿರೆನ್ ಅವರು ಇತ್ತೀಚಿನ ದಿನಗಳಲ್ಲಿ ಆಡುತ್ತಿರುವ ರೀತಿ ನೋಡಿದರೆ ಅವರು ನಾವು ನೆನಪಿಡುವ ಹಿಂದಿನ ಲಿರೆನ್ ಅವರಂತೆ ಕಾಣದೇ ಅವರ ನೆರಳಿನಂತೆ ಕಾಣುತ್ತಿದ್ದಾರೆ ಎಂದಿದ್ದಾರೆ.

‘ಅವರ (ಲಿರೆನ್‌) ಆಟದಲ್ಲಿ ಪವಾಡದ ರೀತಿ ಚೇತರಿಕೆ ಕಂಡರೆ ಮಾತ್ರ ಹೋರಾಟ ಕುತೂಹಲಕರವಾಗಲಿದೆ. ಏನೇ ಇರಲಿ, ಈ ಪಂದ್ಯವು ಲೋಕದ ಅತಿ ಶ್ರೇಷ್ಠ ಆಟಗಾರನನ್ನು ನಿರ್ಧರಿಸುವ ಮೂಲ ಆಶಯಕ್ಕೆ ಸಮನಾಗುವುದಿಲ್ಲ’ ಎಂದಿದ್ದಾರೆ ಕ್ಯಾಸ್ಪರೋವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.