ಸೋಲ್ : ಅಗ್ರಶ್ರೇಯಾಂಕದ ಆಟಗಾರ ಕೆಂಟೊ ಮೊಮೊಟಾ ಅವರು ಭಾನುವಾರ ಕೋರಿಯಾ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದುಕೊಂಡರು.
ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಜಪಾನ್ ಆಟಗಾರ ಕೆಂಟೊ 21–19, 21–17ರಿಂದ ತೈವಾನ್‌ನ ಚೌ ಟೀನ್ ಚೆನ್ ವಿರುದ್ಧ ಜಯಿಸಿದರು.
53 ನಿಮಿಷಗಳ ಫೈನಲ್ ಹಣಾಹಣಿಯ ಮೊದಲ ಗೇಮ್‌ನಲ್ಲಿ ತೈವಾನ್ ಆಟಗಾರ ಟೀನ್ ಕಠಿಣ ಪ್ರತಿರೋಧ ಒಡ್ಡಿದರು. ಚುರುಕಾದ ಸರ್ವ್ ಮತ್ತು ಸ್ಮ್ಯಾಷ್‌ಗಳ ಆಟದ ಮೂಲಕ ಕೆಂಟೊ ಮೈಲುಗೈ ಸಾಧಿಸಿದರು. ಕೇವಲ ಎರಡು ಪಾಯೀಂಟ್‌ಗಳ ಅಂತರದಲ್ಲಿ ಟೀನ್ ಸೋತರು.
ಎರಡನೇ ಗೇಮ್‌ನಲ್ಲಿ ಪುಟಿದೇಳುವ ಟೀನ್ ಪ್ರಯತ್ನವನ್ನು ಕೆಂಟೊ ವಿಫಲಗೊಳಿಸಿದರು. ಬಿರುಸಿನ ಸ್ಮ್ಯಾಷ್‌ಗಳ ಮೂಲಕ ಪಾಯಿಂಟ್ಸ್ ಗಳಿಸಿದ ಕೆಂಟೊ ಜಯ ಸಾಧಿಸಿದರು.
ಅವರು ಗಳಿಸಿದ 300ನೇ ಜಯ ಇದಾಗಿದೆ. ಕೆಂಟೊ ಅವರ ವೃತ್ತಿಜೀವನದಲ್ಲಿ ಇದು ಮಹತ್ವದ ಜಯವಾಗಿದೆ.ಮುಂದಿನ ವರ್ಷ ಅವರದೇ ದೇಶದಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ.
2016ರಲ್ಲಿ ಅವರು ಅಕ್ರಮ ಕ್ಯಾಸಿನೊಗೆ ಹೋಗಿದ್ದ ಆರೋಪದಲ್ಲಿ ಅಮಾನತಾಗಿದ್ದರು. ಆದ್ದರಿಂದ ಆ ವರ್ಷ ರಿಯೊ ಒಲಿಂಪಿಕ್ಸ್‌ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದರು. ಆಗ ಅವರು ವಿಶ್ವ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದ್ದರು. ಈಗ ಅವರು ಅಗ್ರಸ್ಥಾನದಲ್ಲಿದ್ದಾರೆ.
ಬಿಂಗ್‌ಜಿಯಾವೊಗೆ ಪ್ರಶಸ್ತಿ: ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಚೀನಾದ ಹೀ ಬಿಂಗ್‌ಜಿಯಾವೊಗೆ ಪ್ರಶಸ್ತಿ ಒಲಿಯಿತು.
ಫೈನಲ್ ನಲ್ಲಿ ಬಿಂಗ್‌ಜಿಯಾವೊ 18–21, 24–22, 21–17 ಗೇಮ್‌ಗಳಿಂದ ಥಾಯ್ಲೆಂಡ್‌ನ ರಚನಾಕ್ ಇಂಟನಾನ್ ವಿರುದ್ಧ ಜಯಿಸಿದರು.
ಮಹಿಳೆಯರ ಡಬಲ್ಸ್‌ನಲ್ಲಿ ದಕ್ಷಿಣ ಕೊರಿಯಾ ಪಾರಮ್ಯ ಮೆರೆಯಿತು. ಕಿಮ್ ಸೊ ಯಂಗ್ ಮತ್ತು ಕಾಂಗ್ ಹೀ ಯಾಂಗ್ ಜೋಡಿಯು 13–21, 21–19, 21–17ರಿಂದ ತಮ್ಮದೇ ದೇಶದ ಲೀ ಸೊ ಹೀ ಮತ್ತು ಶಿನ್ ಸೆಯಾಂಗ್ ಚಾನ್ ವಿರುದ್ಧ ಗೆದ್ದಿತು.
ಪುರುಷರ ಡಬಲ್ಸ್‌ನಫೈನಲ್‌ನಲ್ಲಿ ಇಂಡೊನೇಷ್ಯಾದ ಫಜರ್ ಅಲ್ಫೈನ್ ಮತ್ತು ಮೊಹಮ್ಮದ್ ರಿಯಾನ್ ಆರ್ಡೆಂಟೊ 21–16, 21–17ರಿಂದ ಜಪಾನ್‌ನ ಟಕೇಶಿ ಕಮುರಾ ಮತ್ತು ಕೀಗೊ ಸೊನೊಡಾ ಜೋಡಿಯು ಗೆದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.