ಪುಣೆ: ಕರ್ನಾಟಕದ ಈಜುಪಟುಗಳಾದ ಶ್ರೀಹರಿ ನಟರಾಜ್, ಸಂಜಯ್ ಜಯಕೃಷ್ಣನ್ ಮತ್ತು ಎಸ್.ಪಿ.ಲಿಖಿತ್ ಅವರು ಇಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಯೂತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳಿಗೆ ಕೊರಳೊಡ್ಡಿದ್ದಾರೆ. ಮೊದಲ ದಿನ ಕರ್ನಾಟಕದ ಖಾತೆಗೆ ಒಟ್ಟು ಹತ್ತು ಪದಕಗಳು ದಾಖಲಾದವು. ಇದರಲ್ಲಿ ನಾಲ್ಕು ಚಿನ್ನ ಮತ್ತು ತಲಾ ಮೂರು ಬೆಳ್ಳಿ ಹಾಗೂ ಕಂಚಿನ ಪದಕಗಳು ಸೇರಿವೆ.
ಗುರುವಾರ ನಡೆದ 21 ವರ್ಷದೊಳಗಿನವರ ಬಾಲಕರ ಫ್ರೀಸ್ಟೈಲ್ ವಿಭಾಗದಲ್ಲಿ ಶ್ರೀಹರಿ ಮೊದಲಿಗರಾಗಿ ಗುರಿ ಮುಟ್ಟಿದರು. ಅವರು 1 ನಿಮಿಷ 53.22 ಸೆಕೆಂಡುಗಳಲ್ಲಿ ಸ್ಪರ್ಧೆ ಪೂರ್ಣಗೊಳಿಸಿದರು.
ಇದೇ ವಿಭಾಗದಲ್ಲಿದ್ದ ಕರ್ನಾಟಕದ ಮತ್ತೊಬ್ಬ ಸ್ಪರ್ಧಿ ಅವಿನಾಶ್ ಮಣಿ (1:59.36ಸೆ.) ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು.
21 ವರ್ಷದೊಳಗಿನವರ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಎಸ್.ಪಿ.ಲಿಖಿತ್ ಚಿನ್ನದ ಪದಕ ಜಯಿಸಿದರು. ಅವರು 1 ನಿಮಿಷ 04.19 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು.
ಬಾಲಕಿಯರ 100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಹರ್ಷಿತಾ ಜಯರಾಮ್ (1:19.47ಸೆ.) ಕಂಚಿನ ಪದಕಕ್ಕೆ ತೃಪ್ತರಾದರು.
800 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಭಾಗವಹಿಸಿದ್ದ ಎಚ್.ಎಂ.ಪ್ರೇಕ್ಷಾ ಮತ್ತು ಎಸ್.ವಿ.ನಿಖಿತಾ ಪದಕ ಗೆಲ್ಲಲು ವಿಫಲರಾದರು. ಪ್ರೇಕ್ಷಾ (10:03.37ಸೆ.) ಮತ್ತು ನಿಖಿತಾ (10:27.98ಸೆ.) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಕಾಣಿಸಿಕೊಂಡರು.
17 ವರ್ಷದೊಳಗಿನವರ ಬಾಲಕರ 200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಕಣಕ್ಕಿಳಿದಿದ್ದ ಸಂಜಯ್ ಜಯಕೃಷ್ಣನ್ 1 ನಿಮಿಷ 59.06 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸಂಭ್ರಮಿಸಿದರು. ಇದೇ ವಿಭಾಗದಲ್ಲಿದ್ದ ರಾಜ್ಯದ ಶಾಂಭವ್ (2:01.61 ಸೆ.) ಐದನೇ ಸ್ಥಾನ ಗಳಿಸಿದರು.
100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಪಿ.ಕುಶಾಲ್ (1:09.96ಸೆ.) ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು. ಲಿತೀಶ್ ಎಸ್.ಗೌಡ (1:11.64ಸೆ.) ಮತ್ತು ನೀಲ್ ಮಸ್ಕರೆನ್ಹಾಸ್ (1:12.55ಸೆ.) ಕ್ರಮವಾಗಿ ಆರು ಮತ್ತು ಏಳನೇ ಸ್ಥಾನಗಳನ್ನು ಪಡೆದರು.
50 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಚ್ಯುತ್ ರಾಚುರ್ (27.14ಸೆ.) ಮತ್ತು ಹಿತೇನ್ ಮಿತ್ತಲ್ (27.22ಸೆ.) ಕ್ರಮವಾಗಿ ಏಳು ಮತ್ತು ಎಂಟನೇ ಸ್ಥಾನಗಳನ್ನು ಪಡೆದರು.
ಬಾಲಕಿಯರ ವಿಭಾಗದ 200 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಖುಷಿ ದಿನೇಶ್ (2:12.55ಸೆ.) ಬೆಳ್ಳಿಯ ಪದಕ ಗೆದ್ದರು. 800 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಖುಷಿ (9:51.94ಸೆ.) ನಾಲ್ಕನೇ ಸ್ಥಾನ ಗಳಿಸಿದರು. ಸಮನ್ವಿತಾ ರವಿಕುಮಾರ್ (10:33.30ಸೆ.) ಎಂಟನೇ ಸ್ಥಾನ ಪಡೆದರು.
100 ಮೀಟರ್ಸ್ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಕಣದಲ್ಲಿದ್ದ ರಚನಾ ಎಸ್.ಆರ್.ರಾವ್ (1:20.15ಸೆ.) ಕಂಚಿನ ಪದಕ ಪಡೆದರು. ಗುಣ ಮಠ್ (1:22.73ಸೆ.) ನಾಲ್ಕನೇ ಸ್ಥಾನದೊಂದಿಗೆ ಹೋರಾಟ ಮುಗಿಸಿದರು.
ನೀನಾಗೆ ಚಿನ್ನ: 50 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ ಸ್ಪರ್ಧಿಸಿದ್ದ ನೀನಾ ವೆಂಕಟೇಶ್ ಚಿನ್ನದ ಪದಕ ಜಯಿಸಿದರು. ಅವರು 29.39 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ವಿಭಾಗದ ಬೆಳ್ಳಿಯ ಪದಕ ಸುವನ ಸಿ.ಭಾಸ್ಕರ್ (29.58ಸೆ.) ಅವರ ಪಾಲಾಯಿತು. ಮಯೂರಿ ಲಿಂಗರಾಜ್ (30.81ಸೆ.) ಏಳನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು.
ಕರ್ನಾಟಕಕ್ಕೆ ಜಯ: ಫುಟ್‌ಬಾಲ್ ಸ್ಪರ್ಧೆಯಲ್ಲಿ 17 ವರ್ಷದೊಳಗಿನವರ ಬಾಲಕರ ತಂಡ ಗೆದ್ದಿತು.
ಕರ್ನಾಟಕ ತಂಡ 4–1 ಗೋಲುಗಳಿಂದ ಮಿಜೋರಾಂ ತಂಡವನ್ನು ಪರಾಭವಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.