ADVERTISEMENT

Union Budget: ಖೇಲೊ ಇಂಡಿಯಾಕ್ಕೆ ಮತ್ತೊಮ್ಮೆ ಸಿಂಹಪಾಲು

ಕ್ರೀಡಾ ಸಚಿವಾಲಯಕ್ಕೆ ₹3,442 ಕೋಟಿ ಹಂಚಿಕೆ

ಪಿಟಿಐ
Published 23 ಜುಲೈ 2024, 14:05 IST
Last Updated 23 ಜುಲೈ 2024, 14:05 IST
Khelo India games begin in UP today
Khelo India games begin in UP today   

ನವದೆಹಲಿ: ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಸಚಿವಾಲಯಕ್ಕೆ ನಿಗದಿಪಡಿಸಿದ ಮೊತ್ತದಲ್ಲಿ ಖೇಲೊ ಇಂಡಿಯಾ ಯೋಜನೆಗೆ ಸಿಂಹಪಾಲು ದೊರಕಿದೆ. ತಳಮಟ್ಟದಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಈ ಯೋಜನೆ ಜಾರಿಗೊಳಿಸಲಾಗಿದೆ.

ಬಜೆಟ್‌ನಲ್ಲಿ ಕ್ರೀಡಾ ಸಚಿವಾಲಯಕ್ಕೆ ₹3,442 ಕೋಟಿ ನಿಗದಿಪಡಿಸಿದ್ದು, ಇದರಲ್ಲಿ ₹900 ಕೋಟಿ ಮೊತ್ತ ಖೇಲೊ ಇಂಡಿಯಾಕ್ಕೆ ಹಂಚಿಕೆ ಮಾಡಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಈ ಯೋಜನೆಗೆ ₹880 ಕೋಟಿ ನೀಡಲಾಗಿತ್ತು.

ಒಲಿಂಪಿಕ್ಸ್‌ ಹತ್ತಿರದಲ್ಲೇ ಇರುವುದರಿಂದ ಮತ್ತು ಮುಂದಿನ ಪ್ರಮುಖ ಕ್ರೀಡಾಕೂಟಗಳಿಗೆ (ಏಷ್ಯನ್ ಗೇಮ್ಸ್‌ ಮತ್ತು ಕಾಮನ್ವೆಲ್ತ್‌ ಗೇಮ್ಸ್‌) ಎರಡು ವರ್ಷಗಳು ಇರುವ ಕಾರಣ ಸಚಿವಾಲಯಕ್ಕೆ ಹಂಚಿಕೆ ಮಾಡಿರುವ ಮೊತ್ತದಲ್ಲಿ ಅಲ್ಪ ಏರಿಕೆಯಷ್ಟೇ ಆಗಿದೆ. ಕ್ರೀಡಾ ಸಚಿವಾಲಯಕ್ಕೆ ಈ ಬಾರಿ ನಿಗದಿಪಡಿಸಿದ ಮೊತ್ತ ಕಳೆದ ಬಾರಿಗಿಂತ ₹45.36 ಕೋಟಿ ಹೆಚ್ಚು.

ಖೇಲೊ ಇಂಡಿಯಾ ಯೋಜನೆಗೆ ಕೇಂದ್ರ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಮೊತ್ತ ನೀಡುತ್ತ ಬಂದಿದೆ.

ADVERTISEMENT

ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೆ ನೀಡಲಾಗುವ ನೆರವಿನಲ್ಲಿ ₹15 ಕೋಟಿ ಹೆಚ್ಚಳವಾಗಿದೆ. 2023–24ರಲ್ಲಿ ₹325 ಕೋಟಿ ಹಂಚಿಕೆ ಮಾಡಿದ್ದರೆ, ಈ ಸಲ ₹340 ಕೋಟಿ ನಿಗದಿಪಡಿಸಲಾಗಿದೆ.

ತನಗೆ ವಹಿಸಿರುವ ಕ್ರೀಡಾಂಗಣಗಳನ್ನು ಮತ್ತು ‘ಟಾಪ್ಸ್‌’ (ಟಾರ್ಗೆಟ್‌ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್‌) ಯೋಜನೆಯನ್ನು ನಿರ್ವಹಿಸುವ ಭಾರತ ಕ್ರೀಡಾ ಪ್ರಾಧಿಕಾರಕ್ಕೆ ನಿಗದಿಪಡಿಸಿರುವ ಮೊತ್ತದಲ್ಲೂ ₹28 ಕೋಟಿ ಏರಿಕೆ ಆಗಿದೆ. ಈ ಸಲ ₹822.60 ಕೋಟಿ (ಕಳೆದ ಸಲ ₹795.77 ಕೋಟಿ) ಹಂಚಿಕೆ ಮಾಡಲಾಗಿದೆ.

ರಾಷ್ಟ್ರೀಯ ಉದ್ದೀಪನ ಮದ್ದು ಸೇವನೆತಡೆ ಘಟಕ (ನಾಡಾ) ಮತ್ತು ರಾಷ್ಟ್ರೀಯ ಡೋಪ್ ಟೆಸ್ಟಿಂಗ್‌ ಲ್ಯಾಬೊರೇಟರಿಗೆ (ಎನ್‌ಡಿಟಿಎಲ್‌) ನಿಗದಿಪಡಿಸಿರುವ ಮೊತ್ತದಲ್ಲೂ ಅಲ್ಪ ಏರಿಕೆಯಾಗಿದೆ. ‘ನಾಡಾ’ಕ್ಕೆ ಈ ಬಾರಿ 22.30 ಕೋಟಿ (ಕಳೆದ ಬಾರಿ ₹21.73 ಕೋಟಿ) ಹಂಚಿಕೆ ಮಾಡಲಾಗಿದೆ. ಎನ್‌ಡಿಟಿಎಲ್‌ಗೆ ₹22 ಕೋಟಿ (ಕಳೆದ ಬಜೆಟ್‌ನಲ್ಲಿ ₹19.50 ಕೋಟಿ) ನಿಗದಿ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.