ನವದೆಹಲಿ: ಹರಿಯಾಣದ ಪ್ರಣವ್ ಸೂರ್ಮಾ ಅವರು ಇಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನ ಪುರುಷರ ಎಫ್ 51 ವಿಭಾಗದ ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಏಷ್ಯನ್ ದಾಖಲೆಯೊಂದಿಗೆ ಚಿನ್ನ ಗೆದ್ದರು.
ಕಳೆದ ತಿಂಗಳು ಹಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಪ್ರಣವ್ 30.01 ಮೀಟರ್ ಸಾಧನೆಯೊಂದಿಗೆ ಚಿನ್ನಕ್ಕೆ ಕೊರಳೊಡಿದ್ದರು. ಕೂಟದ ನಾಲ್ಕನೇ ದಿನವಾರ ಬುಧವಾರ ಪ್ರಣವ್ ಅವರು 33.54 ಮೀಟರ್‌ಗಳಷ್ಟು ದೂರ ಕ್ಲಬ್ ಥ್ರೋ ಮಾಡಿ ದಾಖಲೆ ನಿರ್ಮಿಸಿದರು. ಈ ಹಾದಿಯಲ್ಲಿ ಧರಂಬೀರ್ (31.09 ಮೀಟರ್) ಅವರ ಏಷ್ಯನ್ ದಾಖಲೆಯನ್ನು ಮುರಿದರು.
ಈ ವಿಭಾಗದಲ್ಲಿ ಉತ್ತರ ಪ್ರದೇಶದ ರಾಮ್ ರತನ್ ಸಿಂಗ್ (25.43 ಮೀ) ಮತ್ತು ತಮಿಳುನಾಡಿನ ಎಂ. ಅಲೆಕ್ಸಾಂಡರ್ (25.28 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.
ಪುರುಷರ ಶೂಟಿಂಗ್‌ನ ಎಸ್‌ಎಚ್–2 ವಿಭಾಗದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ರಾಜಸ್ಥಾನದ ವಿಜಯ್ ಸಿಂಗ್ ಕುಂತಲ್ ಒಟ್ಟು 618.3 ಅಂಕಗಳೊಂದಿಗೆ ಚಿನ್ನದ ಪದಕ ಗೆದ್ದರು. ತೆಲಂಗಾಣದ ಸತ್ಯ ಜನಾರ್ದನ ಶ್ರೀಧರ್ ರಾಯಲ ಬೆಳ್ಳಿ ಗೆದ್ದರೆ ಮತ್ತು ಪಂಜಾಬ್‌ನ ದಲ್ಬೀರ್ ಸಿಂಗ್ ಕಂಚು ಜಯಿಸಿದರು.
ಮಹಿಳೆಯರ ಶೂಟಿಂಗ್‌ನ ಎಸ್‌ಎಚ್-1 ವಿಭಾಗದ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ರಾಜಸ್ಥಾನದ ಮೋನಾ ಅಗರ್ವಾಲ್ (619.7) ಚಿನ್ನಕ್ಕೆ ಕೊರಳೊಡ್ಡಿದರೆ, ಹರಿಯಾಣದ ಸಿಮ್ರಾನ್ ಶರ್ಮಾ ಬೆಳ್ಳಿ ಮತ್ತು ಉತ್ತರ ಪ್ರದೇಶದ ಆಕಾಂಕ್ಷಾ ಕಂಚಿನ ಪದಕ ಗೆದ್ದರು. ಪುರುಷರ ವಿಭಾಗದಲ್ಲಿ ಮಹಾರಾಷ್ಟ್ರದ ಸ್ವರೂಪ್ ಉನ್ಹಾಲ್ಕರ್ ಚಿನ್ನ, ಹರಿಯಾಣದ ದೀಪಕ್ ಸೈನಿ ಬೆಳ್ಳಿ ಮತ್ತು ಹರಿಯಾಣದ ಇಶಾಂಕ್ ಅಹುಜಾ ನಂತರದ ಸ್ಥಾನ ಪಡೆದರು.
ಮಹಿಳೆಯರ ಎಸ್‌ಎಚ್-1 ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಸ್ಟ್ಯಾಂಡಿಂಗ್ ಸ್ಪರ್ಧೆಯಲ್ಲಿ ಮಧ್ಯಪ್ರದೇಶದ ರುಬಿನಾ ಫ್ರಾನ್ಸಿಸ್ ಒಟ್ಟು 233.1 ಅಂಕಗಳೊಂದಿಗೆ ಚಿನ್ನದ ಸಾಧನೆ ಮಾಡಿದರು. ಉತ್ತರ ಪ್ರದೇಶದ ಸುಮೇಧಾ ಪಾಠಕ್ ಮತ್ತು ದೆಹಲಿಯ ಭಕ್ತಿ ಶರ್ಮಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.
ಮಹಿಳೆಯರ ಪ್ಯಾರಾ ಪವರ್‌ಲಿಫ್ಟಿಂಗ್ 61 ಕೆಜಿ ಎಲೈಟ್ ವಿಭಾಗದಲ್ಲಿ ಪಂಜಾಬ್‌ನ ಸೀಮಾ ರಾಣಿ 88 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದರೆ, ಉತ್ತರ ಪ್ರದೇಶದ ಜೈನಾಬ್ ಖಾತೂನ್ ದ್ವಿತೀಯ ಮತ್ತು ತಮಿಳುನಾಡಿನ ಎಂ. ನಾಥಿಯಾ ತೃತೀಯ ಸ್ಥಾನ ಪಡೆದರು.
ಪುರುಷರ 59 ಕೆಜಿ ಎಲೈಟ್ ವಿಭಾಗದಲ್ಲಿ ಒಡಿಶಾದ ಗದಾಧರ್ ಸಾಹು ಒಟ್ಟು 140 ಕೆಜಿ ಭಾರ ಎತ್ತಿ ಬಂಗಾರ ಗೆದ್ದರೆ, ಕೇರಳದ ಜೊಬಿ ಮ್ಯಾಥ್ಯೂ ಮತ್ತು ದೆಹಲಿಯ ಗಲ್ಫಾಮ್ ಅಹ್ಮದ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಮಹಿಳೆಯರ 55 ಕೆಜಿ ಎಲೈಟ್ ವಿಭಾಗದಲ್ಲಿ ಹರಿಯಾಣದ ಸುಮನ್ ದೇವಿ (87 ಕೆಜಿ) ಚಿನ್ನಕ್ಕೆ ಕೊರಳೊಡ್ಡಿದರು. ದೆಹಲಿಯ ರಾಜ್ ಕುಮಾರಿ ಬೆಳ್ಳಿ ಮತ್ತು ತಮಿಳುನಾಡಿನ ಗೋಮತಿ ಕಂಚು ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.