ADVERTISEMENT

ಕೊಕ್ಕೊ ಪಂದ್ಯಾವಳಿ: ತುಮಕೂರು, ಬೆಂಗಳೂರು ದಕ್ಷಿಣ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 6:12 IST
Last Updated 26 ಅಕ್ಟೋಬರ್ 2024, 6:12 IST
ತುಮಕೂರಿನಲ್ಲಿ ಶುಕ್ರವಾರ ಮುಕ್ತಾಯವಾದ ಬೆಂಗಳೂರು ವಿಭಾಗ ಮಟ್ಟದ ಕೊಕ್ಕೊ ಪಂದ್ಯಾವಳಿಯ 17 ವರ್ಷದ ವಯೋಮಿತಿ ವಿಭಾಗದಲ್ಲಿ ಫೈನಲ್‌ ಪಂದ್ಯ ಗೆದ್ದ ತುಮಕೂರು ತಂಡ
ತುಮಕೂರಿನಲ್ಲಿ ಶುಕ್ರವಾರ ಮುಕ್ತಾಯವಾದ ಬೆಂಗಳೂರು ವಿಭಾಗ ಮಟ್ಟದ ಕೊಕ್ಕೊ ಪಂದ್ಯಾವಳಿಯ 17 ವರ್ಷದ ವಯೋಮಿತಿ ವಿಭಾಗದಲ್ಲಿ ಫೈನಲ್‌ ಪಂದ್ಯ ಗೆದ್ದ ತುಮಕೂರು ತಂಡ   

ತುಮಕೂರು: ನಗರದ ಸರ್ವೋದಯ ಪ್ರೌಢಶಾಲೆ ಆವರಣದಲ್ಲಿ ನಡೆಯುತ್ತಿದ್ದ ಬೆಂಗಳೂರು ವಿಭಾಗ ಮಟ್ಟದ ಕೊಕ್ಕೊ ಪಂದ್ಯಾವಳಿಗೆ ಶುಕ್ರವಾರ ತೆರೆಬಿತ್ತು.

ತುಮಕೂರು ತಂಡ ಎರಡು ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆಯಿತು. ಬೆಂಗಳೂರು ದಕ್ಷಿಣ ತಂಡ ನಾಲ್ಕು ಪ್ರಶಸ್ತಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಮೇಲುಗೈ ಸಾಧಿಸಿತು.

17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ತುಮಕೂರು ತಂಡವು ಬೆಂಗಳೂರು ದಕ್ಷಿಣ ತಂಡಕ್ಕೆ ಸೋಲುಣಿಸಿ ಪ್ರಶಸ್ತಿಗೆ ಮುತ್ತಿಟ್ಟಿತು. ಬಾಲಕಿಯರ ವಿಭಾಗದ ಫೈನಲ್‌ ಪಂದ್ಯದಲ್ಲಿ ಬೆಂಗಳೂರು ದಕ್ಷಿಣ ಮತ್ತು ಶಿವಮೊಗ್ಗ ತಂಡಗಳು ಮುಖಾಮುಖಿಯಾದವು. ಬೆಂಗಳೂರು ದಕ್ಷಿಣದ ಆಟಗಾರ್ತಿಯರು ವಿಜಯದ ಕೇಕೆ ಹಾಕಿದರು.

ADVERTISEMENT

14 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ತುಮಕೂರು ತಂಡ ಮೊದಲ ಸ್ಥಾನ ಪಡೆದರೆ, ಬೆಂಗಳೂರು ದಕ್ಷಿಣ ದ್ವಿತೀಯ ಬಹುಮಾನಕ್ಕೆ ಭಾಜನವಾಯಿತು. ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡವು ತುಮಕೂರು ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಫೈನಲ್‌ನ ಮೂರು ಪಂದ್ಯಗಳಲ್ಲಿ ಬೆಂಗಳೂರು ದಕ್ಷಿಣ ಮತ್ತು ತುಮಕೂರು ತಂಡಗಳು ಮುಖಾಮುಖಿಯಾದವು. ಎರಡು ಪಂದ್ಯಗಳಲ್ಲಿ ತುಮಕೂರು ಪ್ರಶಸ್ತಿ ಜಯಿಸಿದರೆ, ಒಂದರಲ್ಲಿ ಬೆಂಗಳೂರು ದಕ್ಷಿಣ ತಂಡ ಗೆಲುವು ಪಡೆಯಿತು. ಗೆದ್ದ ತಂಡಗಳು ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.

ಕೊಕ್ಕೊ ಪಂದ್ಯಾವಳಿಯ 14ರ ವಯೋಮಿತಿ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ ತುಮಕೂರಿನ ಬಾಲಕಿಯ ತಂಡ

ರೋಷನ್‌ ಅರ್ಪಿತಾ ಉತ್ತಮ ರನ್ನರ್ಸ್‌

14ರ ವಯೋಮಿತಿಯ ಬಾಲಕರಲ್ಲಿ ಬೆಸ್ಟ್ ರನ್ನರ್‌ ಆಗಿ ರೋಷನ್ ಕುಮಾರ್‌ (ಬೆಂಗಳೂರು ದಕ್ಷಿಣ) ಬೆಸ್ಟ್ ಚೇಸರ್‌ ಆಗಿ ಶರತ್‌ಕುಮಾರ್‌ (ತುಮಕೂರು) ಬೆಸ್ಟ್‌ ಆಲ್‌ರೌಂಡರ್‌ ಆಗಿ ಶಶಿತೇಜ( ಬೆಂಗಳೂರು ದಕ್ಷಿಣ) ಹೊರ ಹೊಮ್ಮಿದರು. ಬಾಲಕಿಯರ ವಿಭಾಗದಲ್ಲಿ ಬೆಸ್ಟ್‌ ರನ್ನರ್‌– ಅರ್ಪಿತಾ (ಶಿವಮೊಗ್ಗ) ಬೆಸ್ಟ್ ಚೇಸರ್‌- ಮುಬೀನಾ (ಬೆಂಗಳೂರು ದಕ್ಷಿಣ) ಬೆಸ್ಟ್‌ ಆಲ್‌ರೌಂಡರ್‌- ಘಾನವಿ (ತುಮಕೂರು). 17ರ ಬಾಲಕರಲ್ಲಿ ಬೆಸ್ಟ್ ರನ್ನರ್- ಸುಲೇಮಾನ್ (ತುಮಕೂರು) ಬೆಸ್ಟ್ ಚೇಸರ್-ಮಲ್ಲಿಕಾರ್ಜುನ (ದಾವಣಗೆರೆ) ಬೆಸ್ಟ್‌ ಆಲ್‌ರೌಂಡರ್‌- ಕರಣಗಿರಿ (ಬೆಂಗಳೂರು ದಕ್ಷಿಣ). ಬಾಲಕಿಯರಲ್ಲಿ ಬೆಸ್ಟ್ ರನ್ನರ್‌– ದೀಕ್ಷಾ (ಶಿವಮೊಗ್ಗ) ಬೆಸ್ಟ್ ಚೇಸರ್- ಕವಿತಾ ಅಶೋಕ್ (ಬೆಂಗಳೂರು ದಕ್ಷಿಣ) ಬೆಸ್ಟ್‌ ಆಲ್‌ರೌಂಡರ್‌- ಪ್ರಿಯಾಂಕಾ (ತುಮಕೂರು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.