ADVERTISEMENT

ಕಿಕ್ ಬಾಕ್ಸರ್ ಸಾವು: ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 5:34 IST
Last Updated 15 ಜುಲೈ 2022, 5:34 IST
ಎಸ್‌. ನಿಖಿಲ್
ಎಸ್‌. ನಿಖಿಲ್   

ಬೆಂಗಳೂರು/ಮೈಸೂರು: ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ತೀವ್ರ ಗಾಯಗೊಂಡಿದ್ದ ಮೈಸೂರಿನ ಕಿಕ್‌ಬಾಕ್ಸರ್ ಎಸ್‌. ನಿಖಿಲ್ (23) ಮೃತಪಟ್ಟ ಪ್ರಕರಣದ ಸಂಬಂಧ ಸಂಘಟಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕೆ–ಒನ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಕಿಕ್‌ ಬಾಕ್ಸಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು. ಎದುರಾಳಿ ಪಂಚ್‌ ನೀಡಿದ್ದರಿಂದಾಗಿ ನಿಖಿಲ್ ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಮೃತಪಟ್ಟಿದ್ದರು.

‘ನಿಖಿಲ್ ಸಾವಿನ ಬಗ್ಗೆ ತಂದೆ ಪಿ. ಸುರೇಶ್ ದೂರು ನೀಡಿದ್ದಾರೆ. ಕಿಕ್ ಬಾಕ್ಸಿಂಗ್ ಸಂಘಟಕರಾದ ನವೀನ್ ರವಿಶಂಕರ್ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳಿಗೆ ನೋಟಿಸ್ ನೀಡಲಾಗಿದ್ದು, ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಬಾಕ್ಸಿಂಗ್ ಸ್ಪರ್ಧೆ ಸ್ಥಳದಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಕನಿಷ್ಠ ಪ್ರಾಥಮಿಕ ಚಿಕಿತ್ಸೆ ಸೌಲಭ್ಯವೂ ಇರಲಿಲ್ಲ. ಸಂಘಟಕರ ನಿರ್ಲಕ್ಷ್ಯದಿಂದಲೇ ಮಗ ನಿಖಿಲ್ ಮೃತಪಟ್ಟಿರುವುದಾಗಿ ತಂದೆ ದೂರಿದ್ದಾರೆ’ ಎಂದೂ ವಿವರಿಸಿದರು.

‘ನಿಖಿಲ್‌ ತಾಯಿಗೆ ಏನು ಹೇಳಲಿ’

‘ಆಯೋಜಕರ ನಿರ್ಲಕ್ಷ್ಯದಿಂದಲೇ ನಿಖಿಲ್‌ ಸಾವನ್ನಪ್ಪಿದ್ದಾನೆ. ಅವನ ತಾಯಿಗೆ ಏನು ಹೇಳಲಿ. ಸಿನಿಮಾದಲ್ಲಿ ನಡೆಯುವ ಹೊಡೆದಾಟದಂತೆ ಒಂದೇ ಪಂಚ್‌ನಲ್ಲಿ ಮಗನನ್ನು ಕ್ರೂರವಾಗಿ ಕೊಂದರು’ ಎಂದು ಕಿಕ್‌ ಬಾಕ್ಸರ್‌ ನಿಖಿಲ್‌ ತಂದೆ ಸುರೇಶ್‌ ಕಣ್ಣೀರಾದರು.

‘ಕಿಕ್ ಬಾಕ್ಸಿಂಗ್‌ಗೆ ಪ್ರೇರೇಪಿಸಿ ಪುತ್ರನ ಸಾವಿಗೆ ಕಾರಣನಾದೆ. ಘಟನೆ ನಡೆದಾಗ ಮೈಸೂರಿನಲ್ಲಿದ್ದೆ, ಅಂತರರಾಷ್ಟ್ರೀಯ ಮಟ್ಟದ ಕ್ರೀಡೆ, ಕೋಚ್‌ಗಳೆನಿಸಿಕೊಂಡವರು ಸ್ಪರ್ಧೆ ಆಯೋಜಿಸುವಾಗ ಕನಿಷ್ಠ ವೈದ್ಯಕೀಯ ಸೌಲಭ್ಯವನ್ನೂ ಒದಗಿಸದೆ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸ್ಪರ್ಧೆ ನಡೆಯುವಾಗ ಬೇರೆಲ್ಲೋ ಕುಳಿತಿದ್ದರು’ ಎಂದು ಗುರುವಾರ ಸುದ್ದಿಗಾರರೊಂದಿಗೆ ಆಕ್ರೋಶ ವ್ಯಕ್ತಪಡಿಸಿದರು.

‘ಸುರಕ್ಷತೆ ನೀಡದ ಇಂಥ ಆಯೋಜಕರು ಇರುವವರೆಗೂ ಮಕ್ಕಳನ್ನು ಕ್ರೀಡೆಗಳಿಗೆ ಕಳುಹಿಸುವುದು ಅಪಾಯ. ಕಿಕ್‌ ಬಾಕ್ಸಿಂಗ್‌ ಸ್ಪೋರ್ಟ್ಸ್‌ ಎಂದವನು ಮೂರ್ಖ. ಪೋಷಕರಾರು ಇಂಥವುಗಳಿಗೆ ಕಳುಹಿಸಬೇಡಿ. ಕರಾಟೆ ‍ಪಟುವಾಗಿ ಹೀಗೆ ಹೇಳುವುದಕ್ಕೂ ದುಃಖವಾಗುತ್ತದೆ’ ಎಂದರು.

‘ನಿಯಮಾವಳಿ ಪಾಲಿಸಬೇಕು‘

‘ಸಮರ ಕಲೆಯಲ್ಲಿ ಗಾಯಗಳಾಗುವುದು ಸಹಜ. ಆದರೆ, ತತ್‌ಕ್ಷಣ ಚಿಕಿತ್ಸೆ ನೀಡಲು ನುರಿತ ವೈದ್ಯಕೀಯ ಸಿಬ್ಬಂದಿ, ಆಮ್ಲಜನಕ ವ್ಯವಸ್ಥೆ ಮತ್ತು ಅಂಬುಲೆನ್ಸ್‌ಗಳು ಸಿದ್ಧವಾಗಿರಬೇಕು. ಅದಕ್ಕಾಗಿ ವಿಶ್ವ ಕಿಕ್ ಬಾಕ್ಸಿಂಗ್ ಫೆಡರೇಷನ್‌ ನಿಯಮಾವಳಿಯನ್ನು ಪಾಲಿಸಬೇಕು. ಅದರಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸ್ಪಷ್ಟ ಉಲ್ಲೇಖವಿದೆ’ ಎಂದು ಅಂತರರಾಷ್ಟ್ರೀಯ ಕಿಕ್ ಬಾಕ್ಸರ್ ಜಿ. ಶರಣ್‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.