ನವದೆಹಲಿ: ಭಾರತದ ಬ್ಯಾಡ್ಮಿಂಟನ್ ತಾರೆ ಕಿದಂಬಿ ಶ್ರೀಕಾಂತ್ ಮೊದಲಿನಷ್ಟು ಉತ್ತಮ ಲಯದಲ್ಲಿ ಇಲ್ಲ. ಆದರೆ ಮೂರನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಅವರು ಚೀನಾದ ಹಾಂಗ್‌ಜೌನಲ್ಲಿ ಪದಕದ ನಿರೀಕ್ಷೆಯಲ್ಲಿದ್ದಾರೆ.
ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಶ್ರೀಕಾಂತ್ ಅವರಿಗೆ ಈ ವರ್ಷ ಫಲಪ್ರದವೇನೂ ಆಗಿಲ್ಲ. ವಿಶ್ವ ಕ್ರಮಾಂಕದಲ್ಲಿ 21ನೇ ಸ್ಥಾನಕ್ಕೆ ಇಳಿದಿದ್ದಾರೆ.
2014ರ ಇಂಚಿಯೋನ್ ಕ್ರೀಡೆಗಳಲ್ಲಿ ಪ್ರಿಕ್ವಾರ್ಟರ್‌ಫೈನಲ್ ತಲುಪಿದ್ದ ಅವರು, 2018ರ ಜಕಾರ್ತಾಕ್ರೀಡೆಗಳಲ್ಲಿ 32ರ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಪ್ರಮುಖ ಕ್ರೀಡಾಕೂಟಗಳಾದ ವಿಶ್ವ ಚಾಂಪಿಯನ್‌ಷಿಪ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದಿರುವ ಗುಂಟೂರಿನ ಆಟಗಾರ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಏಷ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಖಚಿತಪಡಿಸಿಕೊಂಡಿದ್ದಾರೆ. ಈಗ ಈ ಅವಕಾಶದ ಸದುಪಯೋಗ ಪಡೆಯಲು 30 ವರ್ಷದ ಆಟಗಾರನಿಗೆ ಒಳ್ಳೆಯ ಅವಕಾಶ ಒದಗಿದೆ.
‘ಏಷ್ಯನ್ ಗೇಮ್ಸ್ ನನ್ನ ಪಾಲಿಗೆ ಅವಿಸ್ಮರಣೀಯವಾಗಿಲ್ಲ. ಕಳೆದ ಎರಡು ಕ್ರೀಡೆಗಳಲ್ಲಿ ನನ್ನಿಂದ ಉತ್ತಮ ಪ್ರದರ್ಶನ ಬಂದಿಲ್ಲ. ಹೀಗಾಗಿ ಇಲ್ಲಿ ಉತ್ತಮ ಆಟವಾಡಿದರೆ ಅದು ನನ್ನ ಪಾಲಿಗೆ ಸ್ಮರಣೀಯವಾಗಲಿದೆ’ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.
‘ಏಷ್ಯನ್ ಮತ್ತು ಒಲಿಂಪಿಕ್ ಕ್ರೀಡೆಗಳನ್ನು ಬಿಟ್ಟರೆ ಇತರೆಲ್ಲ ಮಹತ್ವದ ಕ್ರೀಡೆಗಳಲ್ಲಿ ನಾನು ಪದಕಗಳನ್ನು ಗೆದ್ದುಕೊಂಡಿದ್ದೇನೆ. ಈ ಎರಡೂ ಕೂಟಗಳು ನಾಲ್ಕು ವರ್ಷಕ್ಕೊಮ್ಮೆ ಬರುವಂಥವು. ಹೀಗಾಗಿ ಈ ಬಾರಿಯ ಕೂಟದ ಪೂರ್ಣ ಉಪಯೋಗ ಪಡೆಯುವ ಅವಕಾಶ ನನಗೆ ಒದಗಿದೆ’ ಎಂದರು.
ಭಾರತದ ಪರ ಏಷ್ಯನ ಗೇಮ್ಸ್‌ನಲ್ಲಿ ಇದುವರೆಗೆ ಸೈಯ್ಯದ್ ಮೋದಿ ಮಾತ್ರ ಪದಕ ಗೆದ್ದಿದ್ದಾರೆ. 1982ರ ಕೂಟದಲ್ಲಿ ಅವರು ಕಂಚಿನ ಪದಕ ಗಳಿಸಿದ್ದರು.
‘ಏಷ್ಯನ್ ಗೇಮ್ಸ್‌ನಲ್ಲಿ ಬ್ಯಾಡ್ಮಿಂಟನ್ ಬಲು ಕಠಿಣ ಸ್ಪರ್ಧೆ. ಏಕೆಂದರೆ ಈ ಕ್ರೀಡೆ ಏಷ್ಯದಲ್ಲೇ ಪ್ರಾಬಲ್ಯ ಹೊಂದಿದೆ. ಇಲ್ಲಿ ಪದಕ ಗೆಲ್ಲಬೇಕಾದರೆ ಅತ್ಯುತ್ತಮವಾದುದನ್ನು ನೀಡಬೇಕಾಗುತ್ತದೆ’ ಎಂದು ಶ್ರೀಕಾಂತ್ ವಿವರಿಸಿದರು.
ಕಳೆದ ವರ್ಷ ಥಾಮಸ್ ಕಪ್‌ನಲ್ಲಿ ಭಾರತದ ಅಮೋಘ ಯಶಸ್ಸಿಗೆ ಕಾರಣರಾದ ನಂತರ ಅವರು ಅಂಥ ಉತ್ತಮ ಪ್ರದರ್ಶನವನ್ನೇನೂ ನೀಡಿಲ್ಲ. 2023ರಲ್ಲಿ ಆಡಿದ ಟೂರ್ನಿಗಳಲ್ಲಿ ಅವರು ನಾಲ್ಕರಲ್ಲಿ ಮಾತ್ರ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
‘ಸ್ಥಿರ ಪ್ರದರ್ಶನ ಮುಖ್ಯವಾಗುತ್ತದೆ. ಕೆಲವು ಟೂರ್ನಿಗಳಲ್ಲಿ ನಾನು ಉತ್ತಮವಾಗಿ ಆಡಿಲ್ಲ. ಆದರೆ ಚೆನ್ನಾಗಿ ಆಡಿದ ಕೆಲವು ಟೂರ್ನಿಗಳು, ನಾನು ಸ್ಥಿರತೆ ಕಾಪಾಡಿಕೊಂಡಲ್ಲಿ ಗೆಲ್ಲಬಹುದು ಎಂದು ನನಗೆ ಸೂಚಿಸುತ್ತಿವೆ’ ಎಂದರು.
ಪ್ಯಾರಿಸ್ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು ಅವರು ಇಂಡೊನೇಷ್ಯಾ ಕೋಚ್ ವೀಂಪಿ ಮಹರ್ದಿ ಅವರ ನೆರವು ಪಡೆಯುತ್ತಿದ್ದಾರೆ. ಆದರೆ ಬಿಡಬ್ಲ್ಯುಎಫ್ ಸತತ ಸರಣಿಗಳಲ್ಲಿ ಆಡಲು ಪ್ರಯಾಣದಲ್ಲಿದ್ದ ಕಾರಣ ಅವರಿಗೆ ತರಬೇತಿ ಪಡೆಯಲು ಹೆಚ್ಚು ಸಮಯ ದೊರೆತಿಲ್ಲ.
ಭಾರತ 37 ವರ್ಷಗಳಲ್ಲಿ ಒಮ್ಮೆಯೂ ಪುರುಷರ ತಂಡ ವಿಭಾಗದಲ್ಲಿ ಪದಕ ಗೆದ್ದುಕೊಂಡಿಲ್ಲ. ಭಾರತ ಪುರುಷರ ತಂಡ ವಿಭಾಗದಲ್ಲಿ ಮೂರು ಬಾರಿ– 1974ರಲ್ಲಿ ಟೆಹರಾನ್, 1982ರಲ್ಲಿ ನವದೆಹಲಿ ಮತ್ತು 1986ರಲ್ಲಿ ಸೋಲ್ ಕ್ರೀಡೆಗಳಲ್ಲಿ ಕಂಚಿನ ಪದಕಗಳನ್ನು ಪಡೆದಿದೆ.
ಆದರೆ ಈ ಬಾರಿ ಥಾಮಸ್ ಕಪ್ ವಿಜೇತರಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ವಿಶ್ವಾಸ ಮೂಡಿದೆ. ‘ಥಾಮಸ್ ಕಪ್ ಗೆದ್ದ ಮರುವರ್ಷವೇ ನಾವು ಈ ಕ್ರೀಡೆಗಳಲ್ಲಿ ಕಣಕ್ಕಿಳಿಯುತ್ತಿದ್ದೇವೆ. ನಾವು ಉತ್ತಮ ಪ್ರದರ್ಶನ ನೀಡಲು ಸಾಧ್ಯವಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.