ADVERTISEMENT

ಫ್ರೆಂಚ್‌ ಓಪನ್‌: ಕಿದಂಬಿ ಮುನ್ನಡೆ

ಆರಂಭಿಕ ಸುತ್ತಿನಲ್ಲೇ ಎಚ್‌.ಎಸ್‌. ಪ್ರಣಯ್‌ಗೆ ಆಘಾತ

ಪಿಟಿಐ
Published 6 ಮಾರ್ಚ್ 2024, 15:47 IST
Last Updated 6 ಮಾರ್ಚ್ 2024, 15:47 IST
ಭಾರತದ ಕಿದಂಬಿ ಶ್ರೀಕಾಂತ್‌
ಭಾರತದ ಕಿದಂಬಿ ಶ್ರೀಕಾಂತ್‌   

ಪ್ಯಾರಿಸ್‌ : ಭಾರತದ ಕಿದಂಬಿ ಶ್ರೀಕಾಂತ್‌ ಅವರು ಫ್ರೆಂಚ್‌ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಬುಧವಾರ ಎರಡನೇ ಸುತ್ತು ಪ್ರವೇಶಿಸಿದರು. ಆದರೆ, ಭಾರತದ ಅಗ್ರಗಣ್ಯ ಆಟಗಾರ ಎಚ್‌.ಎಸ್‌. ಪ್ರಣಯ್‌ ಆರಂಭಿಕ ಸುತ್ತಿನಲ್ಲಿ ಆಘಾತ ಅನುಭವಿಸಿದರು.

2021ರ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ಪದಕ ವಿಜೇತ ಶ್ರೀಕಾಂತ್ ಅವರು 21-15, 20-22, 21-8 ರಿಂದ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ಅವರನ್ನು ಮಣಿಸಿದರು. ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುದಕ್ಕಾಗಿ ವಿಶ್ವ ರ‍್ಯಾಂಕಿಂಗ್‌ನಲ್ಲಿ (ಪ್ರಸ್ತುತ 24ನೇ ರ‍್ಯಾಂಕ್‌) ಸುಧಾರಿಸಲು ಪ್ರಯತ್ನಿಸುತ್ತಿರುವ ಶ್ರೀಕಾಂತ್‌, 66 ನಿಮಿಷಗಳ ಹೋರಾಟದಲ್ಲಿ ತನಗಿಂತ 10 ಕ್ರಮಾಂಕ ಮೇಲಿರುವ ಆಟಗಾರನನ್ನು ಹಿಮ್ಮೆಟ್ಟಿಸಿದರು.

ಆರಂಭಿಕ ಗೇಮ್‌ನಲ್ಲಿ ಮುನ್ನಡೆ ಸಾಧಿಸಿದ್ದ ಭಾರತದ ಆಟಗಾರನಿಗೆ ಎರಡನೇ ಗೇಮ್‌ನಲ್ಲಿ ಎದುರಾಳಿ ಆಟಗಾರ ತಿರುಗೇಟು ನೀಡಿ ಸಮಬಲ ಸಾಧಿಸಿದರು. ಆದರೆ, ನಿರ್ಣಾಯಕ ಗೇಮ್‌ನಲ್ಲಿ ಮತ್ತೆ ಲಯ ಕಂಡುಕೊಂಡ ಶ್ರೀಕಾಂತ್‌ ಸುಲಭ ಜಯ ಸಾಧಿಸಿದರು. ಚೆನ್ ವಿರುದ್ಧದ ಒಟ್ಟು ಏಳು ಮುಖಾಮುಖಿಯಲ್ಲಿ ಶ್ರೀಕಾಂತ್‌ಗೆ ಇದು ಮೂರನೇ ಗೆಲುವಾಗಿದೆ.

ADVERTISEMENT

ಮುಂದಿನ ಸುತ್ತಿನಲ್ಲಿ ಶ್ರೀಕಾಂತ್‌, ವಿಶ್ವದ 17ನೇ ರ‍್ಯಾಂಕ್‌ನ ಲು ಗುವಾಂಗ್ ಜು (ಚೀನಾ) ವಿರುದ್ಧ ಸೆಣಸಲಿದ್ದಾರೆ. ಗುವಾಂಗ್‌ ಅವರು 32ರ ಘಟ್ಟದ ಪಂದ್ಯದಲ್ಲಿ 21–17, 21–17 ರಿಂದ ಪ್ರಣಯ್‌ ಅವರನ್ನು ನೇರ ಗೇಮ್‌ಗಳಿಂದ ಮಣಿಸಿದರು. ಆರಂಭದಲ್ಲಿ ಮುನ್ನಡೆ ಸಾಧಿಸಿದ್ದ ವಿಶ್ವದ 7ನೇ ಕ್ರಮಾಂಕದ ಪ್ರಣಯ್‌ ನಂತರ ಹಿನ್ನಡೆ ಅನುಭವಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ಭಾರತದ ಲಕ್ಷ್ಯ ಸೇನ್ ಅವರು ಆರಂಭಿಕ ಸುತ್ತಿನ ಪಂದ್ಯದಲ್ಲಿ 15-21, 21-15, 21-3 ರಿಂದ ಜಪಾನ್‌ನ ಕಾಂತಾ ತ್ಸುನೇಯಮಾ ವಿರುದ್ಧ ಜಯ ಗಳಿಸಿದರು. ಅವರು ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಲಿ ಶೆನ್ ಫೆಂಗ್ (ಚೀನಾ) ಅವರನ್ನು ಎದುರಿಸಲಿದ್ದಾರೆ.

ಮತ್ತೊಂದು ಪಂದ್ಯದಲ್ಲಿ ಪ್ರಿಯಾಂಶು ರಾಜಾವತ್‌ ಅವರು 8-21, 15-21 ರಿಂದ ಅಗ್ರ ಶ್ರೇಯಾಂಕದ ವಿಕ್ಟರ್ ಅಕ್ಸೆಲ್ಸೆನ್ (ಡೆನ್ಮಾರ್ಕ್‌) ಅವರಿಗೆ ಮಣಿದರು.

ಸಿಂಧು ಎರಡನೇ ಸುತ್ತಿಗೆ: ಎರಡು ಬಾರಿಯ ಒಲಿಂಪಿಕ್‌ ಪದಕ ವಿಜೇತೆ ಪಿ.ವಿ. ಸಿಂಧು ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲೀ ಅವರನ್ನು ಮಣಿಸಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಸಿಂಧು 20-22, 22-20, 21-19ರಿಂದ 24ನೇ ಕ್ರಮಾಂಕದ ಲೀ ಅವರನ್ನು ಮಣಿಸಿದರು. ಒಂದು ಗಂಟೆ 20 ನಿಮಿಷ ನಡೆದ ಸಮಬಲದ ಹೋರಾಟದಲ್ಲಿ ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಸಿಂಧು, ನಂತರ ತಿರುಗೇಟು ನೀಡಿದರು. ಲೀ ವಿರುದ್ಧದ 13ನೇ ಮುಖಾಮುಖಿಯಲ್ಲಿ ಸಿಂಧುಗೆ ಇದು 10ನೇ ಗೆಲುವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.