ADVERTISEMENT

ಥಾಯ್ಲೆಂಡ್ ಓಪನ್ | ಸಿಂಧು, ಶ್ರೀಕಾಂತ್‌ ನಿರ್ಗಮನ; ಕಿರಣ್‌ ಜಾರ್ಜ್‌ಗೆ ಅಚ್ಚರಿಯ ಗೆಲುವು

ಪಿಟಿಐ
Published 1 ಜೂನ್ 2023, 1:45 IST
Last Updated 1 ಜೂನ್ 2023, 1:45 IST
ಕಿರಣ್‌ ಜಾರ್ಜ್ -–ಬಿಎಐ ಮೀಡಿಯಾ ಟ್ವಿಟರ್‌ ಚಿತ್ರ
ಕಿರಣ್‌ ಜಾರ್ಜ್ -–ಬಿಎಐ ಮೀಡಿಯಾ ಟ್ವಿಟರ್‌ ಚಿತ್ರ    

ಬ್ಯಾಂಕಾಕ್‌: ವಿಶ್ವದ 9ನೇ ಕ್ರಮಾಂಕದ ಆಟಗಾರ ಶಿ ಯುಕಿ (ಚೀನಾ) ಅವರ ಮೇಲೆ ಅಚ್ಚರಿಯ ರೀತಿ ನೇರ ಸೆಟ್‌ಗಳ ಜಯಪಡೆದ ಭಾರತದ ಕಿರಣ್‌ ಜಾರ್ಜ್ ಥಾಯ್ಲೆಂಡ್‌ ಓಪನ್‌ ಸೂಪರ್‌ 500 ಟೂರ್ನಿಯ ಪುರುಷರ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ ತಲುಪಿದರು. ಲಕ್ಷ್ಯ ಸೇನ್‌, ಅಶ್ಮಿತಾ ಚಲಿಹಾ ಮತ್ತು ಅನುಭವಿ ಸೈನಾ ನೆಹ್ವಾಲ್‌ ಅವರು ಕೂಡ ಬುಧವಾರ ಗೆಲುವಿನೊಡನೆ ಅಭಿಯಾನ ಆರಂಭಿಸಿದರು.

ಮಾಜಿ ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು, ಪುರುಷರ ವಿಭಾಗದಲ್ಲಿ ಕಿದಂಬಿ ಶ್ರೀಕಾಂತ್‌ ಮತ್ತು ಬಿ.ಸಾಯಿ ಪ್ರಣೀತ್‌ ಅವರು ಮೊದಲ ಸುತ್ತನ್ನು ದಾಟಲಾಗಲಿಲ್ಲ. ಕೆನಡಾದ ಮಿಚೆಲ್‌ ಲಿ 62 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ 21–8, 18–21, 21–18 ರಿಂದ ಸಿಂಧು ಅವರ ಸವಾಲನ್ನು ಬದಿಗೊತ್ತಿದರು.

ಆದರೆ, ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್‌ ಅಕಾಡೆಮಿಯಲ್ಲಿ ತರಬೇತಾಗಿರುವ ಕಿರಣ್‌ 21–18, 22–20 ರಿಂದ ಮೂರನೇ ಶ್ರೇಯಾಂಕದ ಶಿ ಯುಕಿ ಅವರನ್ನು ಹಿಮ್ಮೆಟ್ಟಿಸಿ ಗಮನ ಸೆಳೆದರು. ಯುಕಿ ಅವರು 2018ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ವಿಜೇತ. ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಅವರ ಎದುರಾಳಿ ಚೀನಾದ ವೆಂಗ್‌ ಹಾಂಗ್‌ ಯಾಂಗ್‌.

ADVERTISEMENT

ಲಕ್ಷ್ಯ ಸೇನ್‌ ಇನ್ನೊಂದು ಪಂದ್ಯದಲ್ಲಿ 21–23, 21–15, 21–15 ರಿಂದ ಚೀನಾ ತೈಪೆಯ ವಾಂಗ್‌ ತ್ಸು ವೀ ವಿರುದ್ಧ ಜಯಗಳಿಸಿದರು.

ಮಹಿಳಾ ಸಿಂಗಲ್ಸ್‌ ಪಂದ್ಯಗಳಲ್ಲಿ, ಅರ್ಹತಾ ಸುತ್ತಿನಿಂದ ಬಂದಿರುವ ಅಶ್ಮಿತಾ 21–17, 21–14 ರಿಂದ ಸ್ವದೇಶದ ಮಾಳವಿಕಾ ಬನ್ಸೋಡ್‌ ಅವರನ್ನು, ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ 21–13, 21–7 ರಿಂದ ಕೆನಡಾದ ವೆನ್‌ ಯು ಝಾಂಗ್ ಅವರನ್ನು ಸೋಲಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಸಾಯಿಪ್ರಣೀತ್‌ 14–21, 16–21ರಲ್ಲಿ ಫ್ರಾನ್ಸ್‌ನ ಕ್ರಿಸ್ಟೊ ಪೊಪೊವ್‌ ಅವರಿಗೆ ಮಣಿದರು. ಆರ್ಲಿನ್ಸ್‌ ಮಾಸ್ಟರ್ಸ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಪ್ರಿಯಾಂಶು ರಾಜಾವತ್ ಕೂಡ ಮೊದಲ ಸುತ್ತು ದಾಟಲಾಗದೇ 19–21, 10–21 ರಿಂದ ಮಲೇಷ್ಯಾದ ಎನ್‌ಜಿ ತ್ಸೆ ಯಾಂಗ್‌ ಅವರಿಗೆ ಸೋತರು. ಚೀನಾದ ವೆಂಗ್‌ ಹಾಂಗ್‌ ಯಾಂಗ್‌ 21–8, 16–21, 21–14 ರಿಂದ ಕಿದಂಬಿ ಶ್ರೀಕಾಂತ್‌ ಅವರನ್ನು ಮಣಿಸಿದರು.

ಇತ್ತೀಚೆಗಷ್ಟೇ ಸ್ಲೊವೇನಿಯಾ ಓಪನ್‌ ಜಯಿಸಿದ್ದ ಭಾರತದ ಇನ್ನೊಬ್ಬ ಆಟಗಾರ ಸಮೀರ್‌ ವರ್ಮಾ 15–21, 15–21ರಲ್ಲಿ ಡೆನ್ಮಾರ್ಕ್‌ನ ಮ್ಯಾಗ್ನಸ್‌ ಜೋಹಾನ್ಸೆನ್‌ ಅವರಿಗೆ ಶರಣಾದರು.

ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಪುರುಷರ ಡಬಲ್ಸ್‌ ಮೊದಲ ಸುತ್ತಿನಲ್ಲಿ 21–13, 18–21, 21–17 ರಿಂದ ಡೆನ್ಮಾರ್ಕ್‌ನ ರಾಸ್ಮಸ್‌ ಕ್ಯೇರ್– ಫ್ರೆಡರಿಕ್ ಸೊಗಾರ್ಡ್‌ ಜೋಡಿಯನ್ನು ಸೋಲಿಸಲು ಹೆಚ್ಚಿನ ಶ್ರಮ ಹಾಕಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.