ADVERTISEMENT

ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ: ಚೇಂದಂಡ ಚಾಂಪಿಯನ್

ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆದ ಕೊಡವ ಕೌಟುಂಬಿಕ ಹಾಕಿ

​ಪ್ರಜಾವಾಣಿ ವಾರ್ತೆ
Published 1 ಮೇ 2024, 14:02 IST
Last Updated 1 ಮೇ 2024, 14:02 IST
ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಕೊಡವ ಕೌಟುಂಬಿಕ ಹಾಕಿ-ಪ್ರಮಾಣಪತ್ರವನ್ನು ಸ್ವೀಕರಿಸಿದ ಶಾಸಕ ಎ.ಎಸ್.ಪೊನ್ನಣ್ಣ,ಜಿಲ್ಲಾಧಿಕಾರಿ ವೆಂಕಟರಾಜಾ. ಹಾಕಿ ಟೂರ್ನಿಯ ಸಂಚಾಲಕ ದಿನೇಶ್ ಕಾರ್ಯಪ್ಪ ಇದ್ದರು.
ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದ ಕೊಡವ ಕೌಟುಂಬಿಕ ಹಾಕಿ-ಪ್ರಮಾಣಪತ್ರವನ್ನು ಸ್ವೀಕರಿಸಿದ ಶಾಸಕ ಎ.ಎಸ್.ಪೊನ್ನಣ್ಣ,ಜಿಲ್ಲಾಧಿಕಾರಿ ವೆಂಕಟರಾಜಾ. ಹಾಕಿ ಟೂರ್ನಿಯ ಸಂಚಾಲಕ ದಿನೇಶ್ ಕಾರ್ಯಪ್ಪ ಇದ್ದರು.   

ನಾಪೋಕ್ಲು: ಕಿಕ್ಕಿರಿದ ವೀಕ್ಷಕರ ಉದ್ಘೋಷ..ಕೊನೆ ಕ್ಷಣದವರೆಗೂ ಫಲಿತಾಂಶಕ್ಕೆ ಕಾತರ..ಬಿರು ಬಿಸಿಲನ್ನೂ ಲೆಕ್ಕಿಸದೇ ಪಂದ್ಯ ವೀಕ್ಷಿಸಿದ ಕ್ರೀಡಾ ಪ್ರೇಮಿಗಳು..ಕುಣಿತ..ಮನೋರಂಜನೆ..ಇವೆಲ್ಲದಕ್ಕೂ ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ಸಾಕ್ಷಿಯಾಯಿತು.

ಭಾನುವಾರ ನಡೆದ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ರೋಚಕ ಅಂತಿಮ ಪಂದ್ಯದಲ್ಲಿ ಚೇಂದಂಡ ತಂಡವು ನೆಲ್ಲಮಕ್ಕಡ ತಂಡವನ್ನು ಮಣಿಸಿ ಕುಂಡ್ಯೋಳಂಡ ಕಪ್ ಅನ್ನು ತನ್ನದಾಗಿಸಿಕೊಂಡು ಮೂರನೇ ಬಾರಿ ಚೇಂದಂಡ ಕೊಡವ ಕೌಟುಂಬಿಕ ಹಾಕಿ ಚಾಂಪಿಯನ್ ಆಗಿ ಹೊರಹೊಮ್ಮಿತು.360 ಕುಟುಂಬಗಳನ್ನು ಪಂದ್ಯಾವಳಿಗೆ ದಾಖಲಿಸಿ ಯಶಸ್ವಿಯಾಗಿ ಹಾಕಿ ಉತ್ಸವ ಸಂಘಟಿಸಿದ ಕುಂಡ್ಯೋಳಂಡ ಕುಟುಂಬದ ನೇತೃತ್ವದಲ್ಲಿ ಕೊಡವ ಕೌಟುಂಬಿಕ ಹಾಕಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದುಕೊಂಡಿತು.

ಅಂತಿಮ ಪಂದ್ಯದಲ್ಲಿ ಚೇಂದಂಡ-ನೆಲ್ಲಮಕ್ಕಡ ತಂಡಗಳ ನಡುವೆ ಸಮಬಲದ ಹೋರಾಟ ನಡೆದು ಪೆನಾಲ್ಟಿ ಶೂಟ್ ಔಟ್ ನಲ್ಲಿ ಚೇಂದಂಡ ತಂಡಕ್ಕೆ ವಿಜಯ ಲಕ್ಷ್ಮಿ ಒಲಿಯಿತು. ಜನರಲ್ ತಿಮ್ಮಯ್ಯ ಸ್ಟೇಡಿಯಂ ನಲ್ಲಿ ನಡೆದ ರೋಚಕ ಫೈನಲ್ಸ್ ಪಂದ್ಯ ವೀಕ್ಷಿಸಲು ಕಿಕ್ಕಿರಿದು ಸೇರಿದ್ದ ಕ್ರೀಡಾಭಿಮಾನಿಗಳು ಹಷೋಧ್ಘಾರಗಳ ನಡುವೆ ಮೆಚ್ಚಿನ ತಂಡಗಳಿಗೆ ಬೆಂಬಲ ನೀಡಿದರು.ಅಂತಿಮ ಕ್ಷಣದವರೆಗೂ ಸ್ಟೇಡಿಯಂನಲ್ಲಿ ಹಾಕಿ ಕ್ರೀಡಾ ಕಲರವ ಮನೆಮಾಡಿದ್ದು ಬಿರುಬಿಸಿಲನ್ನೂ ಲೆಕ್ಕಿಸದೇ ಕುಂಡ್ಯೋಳಂಡ ಹಾಕಿ ಉತ್ಸವ ಫೈನಲ್ಸ್ ಪಂದ್ಯ ಸಹಸ್ರಾರು ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವುದರೊಂದಿಗೆ ಹಾಕಿ ಪಂದ್ಯಾವಳಿಗೆ ಅಂತಿಮ ತೆರೆಬಿತ್ತು.

ADVERTISEMENT

ರೋಚಕತೆಯಿಂದ ಕೂಡಿದ ಅಂತಿಮ ಪಂದ್ಯದಲ್ಲಿ ಎರಡು ತಂಡವು ಸಮಬಲ ಸಾಧಿಸಿದ್ದು ಟೈಬ್ರೇಕರ್ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದವು. ಅಂತಿಮ ಕ್ಷಣದಲ್ಲಿ ಚೇಂದಂಡ ತಂಡ 8-7 ಮುನ್ನಡೆಯೊಂದಿಗೆ ನೆಲ್ಲಮಕ್ಕಡ ವಿರುದ್ಧ ವಿಜಯ ಸಾಧಿಸಿ ಮೂರನೇ ಬಾರಿಗೆ ಪ್ರತಿಷ್ಠಿತ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.ನೆಲ್ಲಮಕ್ಕಡ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.ವಿಜೇತ ತಂಡಕ್ಕೆ ನಗದು ಹಾಗೂ ಟ್ರೋಫಿಯನ್ನು ವಿತರಿಸಲಾಯಿತು.ದ್ವಿತೀಯ ಸ್ಥಾನ ಪಡೆದ ನೆಲ್ಲಮಕ್ಕಡ ತಂಡಕ್ಕೆ ಟ್ರೋಫಿ ಹಾಗೂ ನಗದನ್ನು ವಿತರಿಸಲಾಯಿತು.

ಇದಕ್ಕೂ ಮೊದಲು ಕುಲ್ಲೇಟಿರ ಮತ್ತು ಕುಪ್ಪಂಡ ( ಕೈಕೇರಿ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಟೈ ಬ್ರೇಕರ್ ನಲ್ಲಿ ಕುಲ್ಲೇಟಿರ ತಂಡ ಕುಪ್ಪಂಡ (ಕೈಕೇರಿ) ವಿರುದ್ಧ 3- 2 ಅಂತರದಿಂದ ಜಯಗಳಿಸಿ ಮೂರನೇ ಸ್ಥಾನ ಗಳಿಸಿತು.ಕುಪ್ಪಂಡ( ಕೈಕೇರಿ )ತಂಡ 4ನೇ ಸ್ಥಾನ ಗಳಿಸಿತು.

ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಮಿತಿ ಸದಸ್ಯ ಸ್ವಪ್ನಿಲ್ ಸಭೆಯಲ್ಲಿ ಘೋಷಣೆ ಮಾಡಿ  ಪ್ರಮಾಣ ಪತ್ರವನ್ನು ಕುಂಡ್ಯೋಳಂಡ ಕುಟುಂಬಕ್ಕೆ ಹಸ್ತಾಂತರಿಸಿದರು. 

ಅಂತಿಮ ಪಂದ್ಯದ ಸಭಾ ಕಾರ್ಯಕ್ರಮವನ್ನು ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಗಿಡಕ್ಕೆ ನೀರರೆಯುವುದರ ಮೂಲಕ ಉದ್ಘಾಟಿಸಿದರು. ಕುಂಡ್ಯೋಳಂಡ ಕುಟುಂಬದ ಪಟ್ಟೆದಾರ ಕುಂಡ್ಯೋಳಂಡ ಎ.ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಹಾಕಿ ಟೂರ್ನಿಯ ಸಂಚಾಲಕ ದಿನೇಶ್ ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಕ್ಯಾರಿಯರ್ ಗೈಡೆನ್ಸ್ ,ಫುಡ್ ಫೆಸ್ಟಿವಲ್, ಉಚಿತ ಆರೋಗ್ಯ ಕ್ಯಾಂಪ್ ,ಫ್ಯಾಮಿಲಿ ಮೆರಥಾನ್ ,ಬೊಳಕಾಟ್ ತರಬೇತಿ, ಸಾಧಕರಿಗೆ ಸನ್ಮಾನ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ಕ್ರೀಡೆ ಇಲ್ಲದ ಕೊಡಗು ಇಲ್ಲ .ಕ್ರೀಡೆಯನ್ನು ಉತ್ತೇಜಿಸಲು ರಾಜಕೀಯವಾಗಿ, ಆರ್ಥಿಕವಾಗಿ ಎಲ್ಲರೂ ಕೈಜೋಡಿಸಬೇಕು. ಯಾವುದೇ ಕ್ರೀಡೆ ಆಗಲಿ ಪ್ರೋತ್ಸಾಹ ಅಗತ್ಯ. ಹಾಕಿ ಅಕಾಡೆಮಿಗೆ ತೋರದಲ್ಲಿ ಐದು ಎಕರೆ ಜಾಗವನ್ನು ನೀಡುವ ವ್ಯವಸ್ಥೆ ಆಗುತ್ತಿದೆ. ಮಕ್ಕಳ ಪ್ರತಿಭೆಗೆ ಅವಕಾಶ ಸಿಗುವಂತಾಗಬೇಕು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕೌಟುಂಬಿಕ ಹಾಕಿ ವರ್ಷದಿಂದ ವರ್ಷಕ್ಕೆ ಜನಪ್ರಿಯಗೊಳ್ಳಬೇಕು ಎಂದರು.

ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ ಮಾತನಾಡಿ 32 ಮಹಿಳಾ ಆಟಗಾರರು ಸೇರಿದಂತೆ 5 ವರ್ಷದ ಬಾಲಕ 90 ವರ್ಷದ ಹಿರಿಯ ಕೌಟುಂಬಿಕ ಹಾಕಿಯಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ವರ್ಷ 25ನೇ ಕೌಟುಂಬಿಕ ಹಾಕಿ ಉತ್ಸವ ಬೆಳ್ಳಿ ಹಬ್ಬ ಮುದ್ದಂಡ ಕುಟುಂಬಸ್ಥರ ನೇತೃತ್ವದಲ್ಲಿ ಮಡಿಕೇರಿ ನಡೆಯಲಿದೆ. ಇದು ಮತ್ತಷ್ಟು ವೈಭವಪೂರ್ಣವಾಗಿ ನಡೆಯಬೇಕು ಎಂದರು.

ಐ ಆರ್ ಎಸ್ ಜಾರಿನಿರ್ದೇಶನಾಲಯದ ಉಪನಿರ್ಧೆಶಕ ಡಾ.ಕೊಟ್ಟಂಗಡ ಪೆಮ್ಮಯ್ಯ ಮಾತನಾಡಿ ಕೊಡವರ ಒಗ್ಗಟು ಪರಿಶ್ರಮದ ಫಲ ಈ ಕ್ರೀಡಾಕೂಟ. ಕೊಡವ ಜನಾಂಗದವರ ಆರೋಗ್ಯ ದೈಹಿಕ ಕ್ಷಮತೆ ಕ್ಷೀಣಿಸುತ್ತಿದ್ದು ಪ್ರತಿಯೊಬ್ಬರು ಆರೋಗ್ಯ ವೃದ್ಧಿಯತ್ತ ಗಮನಹರಿಸಬೇಕು ಎಂದರು.ಸಭಾ ಕಾರ್ಯಕ್ರಮದಲ್ಲಿ ಹೈದರಾಬಾದ್ ವಿದೇಶಿ ತನಿಖಾ ಘಟಕದ ಉಪನಿರ್ಧೆಶಕ ಮುಕ್ಕಾಟಿರ ಪುನೀತ್ ಕುಟ್ಟಯ್ಯ ,ನಾರಾಯಣ ಆರೋಗ್ಯ ಸಮೂಹದ ಮುಖ್ಯ ವೈದ್ಯಕೀಯ ನಿರ್ಧೆಶಕ ಡಾ ಪುಚ್ಚಿ ಮಾಡ ಉತ್ತಪ್ಪ , ಜಿಲ್ಲಾಧಿಕಾರಿ ವೆಂಕಟರಾಜ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ 23ನೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದ ಅಪ್ಪಚೆಟ್ಟೋಳಂಡ ಕುಟುಂಬಸ್ಥರು 5 ಲಕ್ಷ ರೂ.ಗಳ ಚೆಕ್ ಅನ್ನು ಹಾಕಿ ಅಕಾಡೆಮಿಗೆ ಹಸ್ತಾಂತರಿಸಿದರು. ಲೇಖಕ ಅಲ್ಲಾರಂಡ ವಿಠಲ್ ನಂಜಪ್ಪ ಕುಂಡ್ಯೋಳಂಡ ಕುಟುಂಬದ ಕುರಿತು ಬರೆದ ಪುಸ್ತಕವನ್ನು ಈ ಸಂದರ್ಭ ಲೋಕಾರ್ಪಣೆಗೊಳಿಸಲಾಯಿತು. ಕೊಡವ ಹಾಕಿ ಅಕಾಡೆಮಿಗೆ 5 ಎಕ್ರೆ ಜಾಗ ಮಂಜೂರು ಮಾಡುವಂತೆ ಸಕಾ೯ರಕ್ಕೆ ಶಿಫಾರಸ್ಸು ಮಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಹಾಗೂ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿದ ಕುಂಡ್ಯೋಳಂಡ ಕುಟುಂಬಸ್ಥರಿಗೆ ಒಡಿಕತ್ತಿಯನ್ನು ನೀಡುವುದರ ಮೂಲಕ ಹಾಕಿ ಅಕಾಡೆಮಿಯಿಂದ ಗೌರವ ಸಲ್ಲಿಸಲಾಯಿತು.

24 ವರ್ಷಗಳಲ್ಲಿ 360 ಕುಟುಂಬಗಳ 3 ಸಾವಿರಕ್ಕೂ ಅಧಿಕ ಹಾಕಿ ಆಟಗಾರರು ಪಾಲ್ಗೊಳ್ಳುವ ಮೂಲಕ ದಾಖಲೆ ಮಾಡಿದ ಕುಂಡ್ಯೋಳಂಡ ಹಾಕಿ ಪಂದ್ಯಾವಳಿಯನ್ನು ಅಧಿಕೃತವಾಗಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಿಸಲಾಯಿತು.ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಮಿತಿ ಸದಸ್ಯ ಸ್ವಪ್ನಿಲ್ ಸಭೆಯಲ್ಲಿ ಘೋಷಣೆ ಮಾಡಿ ಪ್ರಮಾಣ ಪತ್ರವನ್ನು ಕುಂಡ್ಯೋಳಂಡ ಕುಟುಂಬಕ್ಕೆ ಹಸ್ತಾಂತರಿಸಿದರು. ಮೆರಥಾನ್ ಸ್ಪರ್ಧೆಯಲ್ಲಿ ಕೇಲೇಟಿರ ಕುಟುಂಬ ಪ್ರಥಮ ಸ್ಥಾನವನ್ನು,ಮುಕ್ಕಾಟಿರ (ಹರಿಹರ) ದ್ವಿತೀಯ ಸ್ಥಾನವನ್ನೂ ಹಾಗೂ ಚೀಯಕಪೂವಂಡ ಕುಟುಂಬ ತೃತೀಯ ಸ್ಥಾನವನ್ನು ಗಳಿಸಿತು.ವಿಜೇತ ತಂಡಗಳಿಗೆ ಕ್ರಮವಾಗಿ ರೂ.30,000,ರೂ.20,000 ಹಾಗೂ ರೂ.10,000 ನಗದು ನೀಡಿ ಪುರಸ್ಕರಿಸಲಾಯಿತು.

ಕೊಡವ ಹಾಕಿ ಅಕಾಡೆಮಿಗೆ 5 ಎಕ್ರೆ ಜಾಗ ಮಂಜೂರು ಮಾಡುವಂತೆ ಸಕಾ೯ರಕ್ಕೆ ಶಿಫಾರಸ್ಸು ಮಾಡಿದ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ನಾಪೋಕ್ಲುವಿನಲ್ಲಿ ಒಡಿಕತ್ತಿಯನ್ನು ನೀಡುವುದರ ಮೂಲಕ ಹಾಕಿ ಅಕಾಡೆಮಿಯಿಂದ ಗೌರವ ಸಲ್ಲಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.