ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕಳೆದ 23 ದಿನಗಳಿಂದ ನಡೆಯುತ್ತಿದ್ದ 23ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿ ‘ಅಪ್ಪಚೆಟ್ಟೋಳಂಡ ಕಪ್’ಗೆ ಭಾನುವಾರ ವರ್ಣರಂಜಿತ ತೆರೆ ಬಿತ್ತು. ಕ್ರೀಡೆಯ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವು ಸಾವಿರಾರು ಮಂದಿ ಪ್ರೇಕ್ಷಕರ ಹೃನ್ಮನಗಳನ್ನು ತಣಿಸಿತು.
ಮುಂದಿನ ವರ್ಷ 24ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಗಾಗಿ ಕುಂಡ್ಯೋಳಂಡ ಕುಟುಂಬ ಆತಿಥ್ಯ ವಹಿಸಿದ್ದು, ಇದೇ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದೆ.
ಭಾನುವಾರ ನಡೆದ ಫೈನಲ್ ಪಂದ್ಯ ನೋಡುಗರನ್ನು ತುದಿಗಾಲ ಮೇಲೇರಿಸಿ, ರೋಮಾಂಚನದ ಅನುಭವ ನೀಡಿತು. ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದ ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ ಕುಪ್ಪಂಡ ತಂಡದವರು 4-2 ರಲ್ಲಿ ಕುಲ್ಲೆಟಿರ ತಂಡದ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಪ್ರೇಕ್ಷಕರಿಂದ ಹೊಮ್ಮಿದ ಕರತಾಡನ, ಹರ್ಷೋದ್ಗಾರಗಳು ಗಗನವನ್ನೇ ಚುಂಬಿಸಿದವು. 25 ಸಾವಿರಕ್ಕೂ ಅಧಿಕ ಮಂದಿ ಈ ಕಾತರದ ಕ್ಷಣಗಳನ್ನು ಕಣ್ತುಂಬಿಕೊಂಡರು.
1997ರಲ್ಲಿ ಕೋಡಿರ ಕಪ್, 1998ರಲ್ಲಿ ಬಲ್ಲಚಂಡಕಪ್ ಹಾಗೂ 2002ರಲ್ಲಿ ಚೆಕ್ಕೆರ ಕಪ್ ಅನ್ನು ಮುಡಿಗೇರಿಸಿಕೊಂಡಿದ್ದ ಕುಲ್ಲೇಟಿರ ತಂಡದವರು ನಾಲ್ಕನೇ ಬಾರಿಗೆ ಅಪ್ಪಚೆಟ್ಟೋಳಂಡ ಕಪ್ ಅನ್ನು ಮುಡಿಗೇರಿಸಿಕೊಳ್ಳುವ ಹಂಬಲ
ದಲ್ಲಿದ್ದು, ತೀವ್ರ ನಿರಾಸೆ
ಅನುಭವಿಸಿದರೂ ಅವರ ಹೋರಾಟವನ್ನು ಪ್ರೇಕ್ಷಕರು ಮನಸಾರೆ ಮೆಚ್ಚಿದರು.
ಫೈನಲ್ ಪಂದ್ಯದಲ್ಲಿ 25 ಸಾವಿರ ಮಂದಿ ಪ್ರೇಕ್ಷಕರ ಗ್ಯಾಲರಿ ತುಂಬಿ, ಕುರ್ಚಿಗಳನ್ನು ಮೈದಾನದಲ್ಲಿ ಹಾಕಿದ್ದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. ಎಲ್ಲ ಪಂದ್ಯಗಳೂ ನಿಗದಿತ ಅವಧಿಗೆ ನಡೆದಿದ್ದು, ಪಂದ್ಯಾವಳಿಯ ಶಿಸ್ತುಬದ್ಧತೆಗೆ ಹಿಡಿದ ಕನ್ನಡಿಯಾಗಿತ್ತು.
ಪಂದ್ಯಾವಳಿಗಾಗಿಯೇ ಕ್ರೀಡಾಂಗಣ ದಲ್ಲಿ 3 ಹಾಕಿ ಕ್ರೀಡಾಂಕಣಗಳನ್ನು ಸಿದ್ಧಪಡಿಸಿ, 23 ದಿನಗಳ ನಿರಂತರವಾಗಿ ಹಾಕಿ ಪಂದ್ಯಗಳು ನಡೆದವು. ಈ ಟೂರ್ನಿಯಲ್ಲಿ ಒಟ್ಟು 962 ಗೋಲುಗಳನ್ನು ಆಟಗಾರರು ದಾಖಲಿಸಿದರು. 4,935 ಆಟಗಾರರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದ್ದು ವಿಶೇಷ ಎನಿಸಿತ್ತು. ಆಟಗಾರರಲ್ಲಿ 3 ವರ್ಷದ ಬಾಲಕನಿಂದ ಹಿಡಿದು 84 ವರ್ಷದ ಹಿರಿಯರವರೆಗೂ ಸ್ಥಾನ ಪಡೆದಿದ್ದು ಗಮನ ಸೆಳೆಯಿತು. ಒಂದು ತಂಡದಲ್ಲಿ ಐವರು ಮಹಿಳೆಯರು ಆಡಿದ್ದು, ಗಂಡ, ಹೆಂಡತಿ, ಮಕ್ಕಳು ಒಟ್ಟಾಗಿ ಆಡಿದ್ದು, ಸೇರಿದಂತೆ ಹಲವು ಬಗೆಯ ವೈಶಿಷ್ಟ್ಯಗಳನ್ನು ಅಪ್ಪಚೆಟ್ಟೋಳಂಡ ಹಾಕಿ ಉತ್ಸವ ಇತಿಹಾಸದಲ್ಲಿ ದಾಖಲಿಸಿತು.
ಮಾನಸಿಕ ಆರೋಗ್ಯದ ಜಾಗೃತಿಗಾಗಿ ದೀಪಿಕಾ ಅಪ‍್ಪಯ್ಯ ವಿಶೇಷ ಅಭಿಯಾನ ನಡೆಸಿದರು. ಇವರು ಹಾಕಿದ್ದ ಕ್ಯಾನವಾಸ್‌ನಲ್ಲಿ ನೂರಾರು ಮಂದಿ ತಮಗನ್ನಿಸಿದ ಚಿತ್ರ ಬರೆದು, ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು. ಯುವಕರ ತಂಡವೊಂದು ಬೆಂಗಳೂರಿನಿಂದ ಸೈಕಲ್‌ನಲ್ಲಿ ಬಂದು ಕ್ರೀಡಾಂಗಣ ಪ್ರವೇಶಿಸಿ, ಒಂದು ಸುತ್ತು ಹಾಕಿದ್ದು ವಿಶೇಷ ಎನಿಸಿತ್ತು.
ಫೈನಲ್ ಪಂದ್ಯವನ್ನು ಹಾಕಿ ಉತ್ಸವದ ಜನಕ ಪಾಂಡಂಡ ಕುಟ್ಟಪ್ಪ ಅವರ ಪತ್ನಿ ಪಾಂಡಂಡ ಲೀಲಾ ಕುಟ್ಟಪ್ಪ ಉದ್ಘಾಟಿಸಿದರು.
ಸಮಾರಂಭದಲ್ಲಿ ಏರ್ ಮಾರ್ಷಲ್ ಬಲ್ಟಿಕಾರಂಡ ಯು.ಚೆಂಗಪ್ಪ ಮಾತನಾಡಿ ‘ಎರಡು ಬಾರಿ ನಾಪೋಕ್ಲುವಿನಲ್ಲಿ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದೆ. ಕೌಟುಂಬಿಕ ಹಾಕಿ ಟೂರ್ನಿಯ ಮೂಲಕ ಕೊಡವ ಜನಾಂಗದ ಕೀರ್ತಿ ಉತ್ತುಂಗಕ್ಕೇರಲಿ’ ಎಂದು ಆಶಿಸಿದರು.
ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ ವಿಜೇತ ಹಾಗೂ ಭಾರತ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೆ ಮಾತನಾಡಿ, ‘ಕೊಡವ ಕೌಟುಂಬಿಕ ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರನ್ನು ಪೋಷಕರು ಪ್ರೋತ್ಸಾಹಿಸಬೇಕು. ಹಲವು ಅಂತಾರಾಷ್ಟ್ರೀಯ ಹಾಕಿ ಪಟುಗಳು ಕೊಡಗಿನ ನೆಲದ ಕೊಡುಗೆಯಾಗಿದ್ದು ಇನ್ನಷ್ಟು ಆಟಗಾರರು ಜಿಲ್ಲೆಯಿಂದ ಹೊರಹೊಮ್ಮುವಂತಾಗಬೇಕು’ ಎಂದರು.
ಅಪ್ಪಚೆಟ್ಟೋಳಂಡ ಕುಟುಂಬದ ಪಟ್ಟೇದಾರ ಅಪ್ಪಚೆಟ್ಟೋಳಂಡ ಈರಪ್ಪ, ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಾಕಿ ಕರ್ನಾಟಕದ ಗೌರವ ಕಾರ್ಯದರ್ಶಿ ಡಾ.ಎ.ಬಿ.ಸುಬ್ಬಯ್ಯ, ಒಲಂಪಿಯನ್‌ಗಳಾದ ಜಾಫರ್ ಇಕ್ಬಾಲ್, ಚೆಪ್ಪುಡಿರ ಪೂಣಚ್ಚ, ರಿಪಬ್ಲಿಕ್ ಟಿವಿ ಅಧ್ಯಕ್ಷ ಚೇರಂಡ ಕಿಶನ್, ಪದ್ಮಶ್ರಿ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಇದ್ದರು.
ಅಂತಿಮ ಪಂದ್ಯಾವಳಿಗೂ ಮುನ್ನ ಪೇರೂರು ತಂಡದಿಂದ ಬೊಳಕಾಟ್, ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕೋಲಾಟ, ಚೌರಿಆಟದ ಪ್ರದರ್ಶನಗಳು ನಡೆದವು. 2024ರ ಕೊಡವ ಕೌಟುಂಬಿಕ ಹಾಕಿ ಟೂರ್ನಿಯ ಸಾರಥ್ಯ ವಹಿಸಿದ ಕುಂಡ್ಯೋಳಂಡ ಕುಟುಂಬಸ್ಥರ ಮೆರವಣಿಗೆ ಹಾಗೂ ಭಾರತ ಹಾಕಿ ತಂಡದ ಮಾಜಿ ಆಟಗಾರರು, ಒಲಂಪಿಯನ್‌ಗಳಾದ ಧನರಾಜ್ ಪಿಳ್ಳೆ, ಜಾಫರ್ ಇಕ್ಬಾಲ್, ಸೇರಿದಂತೆ ಹಲವು ಒಂಲಂಪಿಯನ್‌ಗಳನ್ನು ತೆರೆದ ವಾಹನದಲ್ಲಿ ಮೈದಾನದ ಸುತ್ತಲೂ ಮೆರವಣಿಗೆ ನಡೆಸಲಾಯಿತು. ಪಂದ್ಯಾವಳಿಯ ನಂತರ ಶರಣ್ ಅಯ್ಯಪ್ಪ ಮತ್ತು ತಂಡದವರಿಂದ ರಾತ್ರಿಯವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಮನು ಮುತ್ತಪ್ಪ ಇದ್ದರು.
ಹಸಿವನ್ನು ಮರೆಸಿದ ಕ್ರೀಡೋತ್ಸಾಹ!
ಫೈನಲ್ ಪಂದ್ಯ ಆರಂಭಕ್ಕೂ ಮುನ್ನ ಭೋಜನ ವಿರಾಮ ಇತ್ತು. ಆದರೆ, ಕಿಕ್ಕಿರಿದು ಸೇರಿದ್ದ ಜನರ ನಡುವೆ ಕುರ್ಚಿಯಿಂದ ಎದ್ದರೆ ಮತ್ತೆ ಜಾಗ ಸಿಕ್ಕುವುದಿಲ್ಲ ಎಂಬ ಕಾರಣಕ್ಕೆ ನೂರಾರು ಮಂದಿ ಭೋಜನವನ್ನೂ ಮಾಡದೇ ಪಂದ್ಯವನ್ನು ವೀಕ್ಷಿಸಿದರು. ಪಂದ್ಯಾವಳಿಯ ಕ್ರೀಡೋತ್ಸಾಹವು ಅಕ್ಷರಶಃ ಹಸಿವನ್ನೂ ಮರೆಸಿತು.
ಮೈದಾನದಿಂದ ಹಿಡಿದು ಮುಖ್ಯ ರಸ್ತೆಯವರೆಗೂ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಪಂದ್ಯ ಮುಗಿದ ಬಳಿಕ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.