ಸೋಲ್: ಸ್ಥಳೀಯ ಆಟಗಾರ್ತಿ ಕಿಮ್ ಗಾ ಯೂನ್ ಅವರ ವಿರುದ್ಧ ಜಯ ಗಳಿಸಿದ ಭಾರತದ ಸೈನಾ ನೆಹ್ವಾಲ್, ಕೊರಿಯಾ ಓಪನ್ ವಿಶ್ವ ಬ್ಯಾಡ್ಮಿಂಟನ್ ಸೂಪರ್ 500 ಟೂರ್ನಿಯ ಮಹಿಳೆಯರ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಗುರುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 21–18, 21–18ರಿಂದ ಗೆದ್ದರು. ಐದನೇ ಶ್ರೇಯಾಂಕದ ಆಟಗಾರ್ತಿ ಸೈನಾ, ಮುಂದಿನ ಪಂದ್ಯದಲ್ಲಿ ಕಳೆದ ವರ್ಷದ ವಿಶ್ವ ಚಾಂಪಿಯನ್ ಜಪಾನ್‌ನ ನೊಜೊಮಿ ಒಕುಹರಾ ಅವರ ಸವಾಲನ್ನು ಎದುರಿಸುವರು.
ಗುರುವಾರದ ಪಂದ್ಯ 37 ನಿಮಿಷಗಳಲ್ಲಿ ಮುಗಿಯಿತು. ಆರಂಭದಲ್ಲೇ ಪಂದ್ಯದ ಮೇಲೆ ಪೂರ್ಣ ಹಿಡಿತ ಸಾಧಿಸಿದ ಭಾರತದ ಆಟಗಾರ್ತಿ 10–2ರ ಮುನ್ನಡೆ ಸಾಧಿಸಿ ಸುಲಭ ಜಯದತ್ತ ಹೆಜ್ಜೆ ಹಾಕಿದರು. ಆದರೆ ತಿರುಗೇಟು ನೀಡಿದ ಕಿಮ್ ಸತತ ಆರು ಪಾಯಿಂಟ್ ಗಳಿಸಿದರು. ಆದರೂ ಸೈನಾ ಧೈರ್ಯಗೆಡಲಿಲ್ಲ. ಅಮೋಘ ಆಟವನ್ನು ಮುಂದುವರಿಸಿ ಮುನ್ನಡೆಯನ್ನು 16–10ಕ್ಕೆ ಏರಿಸಿಕೊಂಡರು.
ಈ ಹಂತದಲ್ಲಿ ಕಿಮ್ ಪ್ರಬಲ ಪೈಪೋಟಿ ನಡೆಸಿ 18–18ರ ಸಮಬಲ ಸಾಧಿಸಿದರು. ಆದರೂ ಅವರಿಗೆ ಗೇಮ್ ಗೆಲ್ಲಲು ಆಗಲಿಲ್ಲ. ನಿರಂತರ ಮೂರು ಪಾಯಿಂಟ್ ಗಳಿಸಿದ ಸೈನಾ, ಗೇಮ್ ತಮ್ಮದಾಗಿಸಿಕೊಂಡರು.
ಭರ್ಜರಿ ಆಟವಾಡಿದ ಕಿಮ್: ಎರಡನೇ ಗೇಮ್‌ನಲ್ಲಿ ಕಿಮ್ ಭರ್ಜರಿ ಆಟದ ಮೂಲಕ 8–1ರ ಮುನ್ನಡೆ ಗಳಿಸಿದರು. ಆದರೂ ಎದೆಗುಂದದ ಸೈನಾ ತಾಳ್ಮೆಯ ಆಟವಾಡಿ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಹೀಗಾಗಿ ಒಂದು ಹಂತದಲ್ಲಿ ಅವರ ಹಿನ್ನಡೆ 10–13ಕ್ಕೆ ಇಳಿಯಿತು. ನಂತರ ಮೋಹಕ ಆಟದ ಮೂಲಕ ಎದುರಾಳಿಯನ್ನು ಕಂಗೆಡಿಸಿ ಸತತ ಏಳು ಪಾಯಿಂಟ್ ಬಗಲಿಗೆ ಹಾಕಿಕೊಂಡರು. ಲಯಕ್ಕೆ ಮರಳಲು ಕಿಮ್ ನಡೆಸಿದ ಶ್ರಮವೆಲ್ಲವೂ ವ್ಯರ್ಥವಾಯಿತು. ಪಂದ್ಯ ಗೆದ್ದು ಸೈನಾ ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.