ADVERTISEMENT

ಕೆಪಿಎಲ್‌: ಬಿಜಾಪುರ ಬುಲ್ಸ್‌ ಸೆಮಿ ಕನಸು ಜೀವಂತ

ಮಹಮ್ಮದ್ ನೂಮಾನ್
Published 1 ಸೆಪ್ಟೆಂಬರ್ 2018, 18:50 IST
Last Updated 1 ಸೆಪ್ಟೆಂಬರ್ 2018, 18:50 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಮೈಸೂರು: ಮಹತ್ವದ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಡಿದ ನಾಯಕ ಭರತ್‌ ಚಿಪ್ಲಿ (63) ಅವರು ಕೆಪಿಎಲ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬಿಜಾಪುರ ಬುಲ್ಸ್‌ ತಂಡದ ಸೆಮಿಫೈನಲ್‌ ಪ್ರವೇಶದ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡರು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗ ಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಬುಲ್ಸ್‌ ತಂಡ, ಮೈಸೂರು ವಾರಿಯರ್ಸ್‌ ವಿರುದ್ಧ ಎರಡು ರನ್‌ಗಳ ರೋಚಕ ಜಯ ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಬುಲ್ಸ್ ಆರು ವಿಕೆಟ್‌ಗೆ 167 ರನ್‌ ಗಳಿಸಿದರೆ, ವಾರಿಯರ್ಸ್‌ 5 ವಿಕೆಟ್‌ಗೆ 165 ರನ್‌ ಗಳಿಸಿ ತನ್ನ ಹೋರಾಟ ಕೊನೆಗೊಳಿಸಿತು.

ADVERTISEMENT

ಉತ್ತಮ ಆರಂಭ: ಸವಾಲಿನ ಗುರಿ ಬೆನ್ನಟ್ಟಿದ ವಾರಿಯರ್ಸ್‌ಗೆ ಅರ್ಜುನ್‌ ಹೊಯ್ಸಳ (21, 17 ಎಸೆತ) ಮತ್ತು ರಾಜು ಭಟ್ಕಳ (29, 25 ಎಸೆತ) ಮೊದಲ ವಿಕೆಟ್‌ಗೆ 4.4 ಓವರ್‌ಗಳಲ್ಲಿ 43 ರನ್‌ ಸೇರಿಸಿದರು.

ಈ ಜತೆಯಾಟವನ್ನು ಕೆ.ಸಿ.ಕಾರ್ಯಪ್ಪ ಮುರಿದರು. ಅಮಿತ್‌ ವರ್ಮಾ ಮತ್ತು ಕಳೆದ ಪಂದ್ಯದ ‘ಹೀರೊ’ ಶೋಯೆಬ್‌ ಮ್ಯಾನೇಜರ್ (17, 17 ಎಸೆತ) ಬೇಗನೇ ಔಟಾದ ಕಾರಣ ವಾರಿಯರ್ಸ್‌ ಒತ್ತಡಕ್ಕೆ ಸಿಲುಕಿತು.

ಎಂ.ಜಿ.ನವೀನ್ ಬೌಲ್‌ ಮಾಡಿದ ಅಂತಿಮ ಓವರ್‌ನಲ್ಲಿ ಜಯಕ್ಕೆ 14 ರನ್‌ಗಳು ಬೇಕಿದ್ದವು. ನಾಯಕ ಜೆ.ಸುಚಿತ್‌ (ಔಟಾಗದೆ 34, 20 ಎಸೆತ) ಕೊನೆಯವರೆಗೆ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನ ಗಡಿ ದಾಟಿಸಲು ವಿಫಲರಾದರು.

ಚಿಪ್ಲಿ, ಕೌನೈನ್‌ ಆಸರೆ: ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಬುಲ್ಸ್‌ 22 ರನ್‌ಗಳಿಸುವಷ್ಟರಲ್ಲಿ ಎರಡು ವಿಕೆಟ್‌ ಕಳೆದುಕೊಂಡಿತು. ಚಿಪ್ಲಿ (63 ರನ್‌, 53 ಎಸೆತ, 6 ಬೌಂ, 3 ಸಿ.) ಮತ್ತು ಕೌನೈನ್‌ ಅಬ್ಬಾಸ್‌ (42, 24 ಎಸೆತ, 4 ಸಿ) ಮೂರನೇ ವಿಕೆಟ್‌ಗೆ 57 ಎಸೆತಗಳಲ್ಲಿ 88 ರನ್‌ಗಳ ಜತೆಯಾಟ ನೀಡಿ ತಂಡಕ್ಕೆ ಆಸರೆಯಾದರು.

ಸಂಕ್ಷಿಪ್ತ ಸ್ಕೋರ್: ಬಿಜಾಪುರ ಬುಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 167 (ಭರತ್ ಚಿಪ್ಲಿ 63, ಕೌನೈನ್‌ ಅಬ್ಬಾಸ್ 42, ಸುನಿಲ್‌ ರಾಜು 28, ಕೆ.ಎಲ್‌.ಶ್ರೀಜಿತ್ 17, ಎನ್‌.ಪಿ.ಭರತ್ 27ಕ್ಕೆ 2, ಪ್ರತೀಕ್‌ ಜೈನ್‌ 15ಕ್ಕೆ 2, ಅಮಿತ್‌ ವರ್ಮಾ 36ಕ್ಕೆ 1)

ಮೈಸೂರು ವಾರಿಯರ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 165 (ಅರ್ಜುನ್‌ ಹೊಯ್ಸಳ 21, ರಾಜು ಭಟ್ಕಳ್ 29, ಶೋಯೆಬ್ ಮ್ಯಾನೇಜರ್ 17, ಕೆ.ಸಿದ್ದಾರ್ಥ್‌ 28, ಜೆ.ಸುಚಿತ್ ಔಟಾಗದೆ 34, ಜಹೂರ್‌ ಫರೂಕಿ 31ಕ್ಕೆ 1, ಕೆ.ಸಿ.ಕಾರ್ಯಪ್ಪ 23ಕ್ಕೆ 2, ಎಂ.ಜಿ.ನವೀನ್ 27ಕ್ಕೆ 1)

ಫಲಿತಾಂಶ: ಬಿಜಾಪುರ ಬುಲ್ಸ್‌ಗೆ 2 ರನ್‌ ಗೆಲುವು
ಪಂದ್ಯಶ್ರೇಷ್ಠ: ಭರತ್‌ ಚಿಪ್ಲಿ

ಭಾನುವಾರದ ಪಂದ್ಯಗಳು
ಶಿವಮೊಗ್ಗ ಲಯನ್ಸ್– ಬಿಜಾಪುರ ಬುಲ್ಸ್
ಆರಂಭ: ಮಧ್ಯಾಹ್ನ 2
**
ಬೆಂಗಳೂರು ಬ್ಲಾಸ್ಟರ್ಸ್‌– ಮೈಸೂರು ವಾರಿಯರ್ಸ್
ಆರಂಭ: ಸಂಜೆ 6.30
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.