ADVERTISEMENT

ಏಷ್ಯನ್‌ ಕೂಟದಲ್ಲಿ ಮತ್ತೆ ಪದಕ ಗೆದ್ದು ತೋರಿಸುವೆ: ಪೂವಮ್ಮ

ಜಿ.ಶಿವಕುಮಾರ
Published 8 ಜೂನ್ 2020, 5:06 IST
Last Updated 8 ಜೂನ್ 2020, 5:06 IST
   

ಕರ್ನಾಟಕದ ‘ಚಿನ್ನದ ಓಟಗಾರ್ತಿ’ ಎಂ.ಆರ್‌.ಪೂವಮ್ಮ. 18ನೇ ವಯಸ್ಸಿನಲ್ಲೇ ಒಲಿಂಪಿಕ್ಸ್‌ನಲ್ಲಿ (2008ರ ಬೀಜಿಂಗ್‌‌) ಪಾಲ್ಗೊಂಡ ಹಿರಿಮೆ ಹೊಂದಿರುವ ಮಂಗಳೂರಿನ ಈ ಪ್ರತಿಭೆ, ಏಷ್ಯನ್‌ ಗೇಮ್ಸ್‌, ಏಷ್ಯನ್‌ ಚಾಂಪಿಯನ್‌ಷಿಪ್‌ ಹಾಗೂ ದಕ್ಷಿಣ ಏಷ್ಯನ್‌ ಕ್ರೀಡಾಕೂಟಗಳಲ್ಲಿ ಹಲವು ಪದಕಗಳಿಗೆ ಕೊರಳೊಡ್ಡಿ ಕರುನಾಡ ಕೀರ್ತಿ ಹೆಚ್ಚಿಸಿದ್ದಾರೆ.

4X400 ಮೀಟರ್ಸ್‌ ಮಿಶ್ರ ರಿಲೆ ವಿಭಾಗದಲ್ಲಿ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿರುವ ಅವರು ಮಹಿಳೆಯರ 4X400 ಮೀಟರ್ಸ್‌ ರಿಲೆ ಹಾಗೂ 400 ಮೀಟರ್ಸ್‌ ಓಟದಲ್ಲೂ ಟೋಕಿಯೊ ಟಿಕೆಟ್‌ ಗಿಟ್ಟಿಸುವತ್ತ ಚಿತ್ತ ನೆಟ್ಟಿದ್ದಾರೆ. ಪಟಿಯಾಲದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ (ಎನ್‌ಐಎಸ್‌) ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಅವರು ‘ಪ್ರಜಾವಾಣಿ’ ಜೊತೆಮಾತನಾಡಿದ್ದಾರೆ.

l ಟೋಕಿಯೊ ಒಲಿಂಪಿಕ್ಸ್‌ ಒಂದು ವರ್ಷ ಮುಂದೂಡಲ್ಪಟ್ಟಿದೆ. ಇದರಿಂದ ನಿಮಗೇನಾದರೂ ಅನುಕೂಲವಾಗಿದೆಯೇ?

ADVERTISEMENT

ಕೊರೊನಾ ಸೋಂಕು ಹರಡುವ ಆತಂಕದಿಂದಾಗಿ ಒಲಿಂಪಿಕ್‌ ಕ್ರೀಡೆಗಳನ್ನು ಒಂದು ವರ್ಷ ಮುಂದಕ್ಕೆ ಹಾಕಿರುವುದು ಸ್ವಾಗತಾರ್ಹ ತೀರ್ಮಾನ. ನಾವು ಈಗಾಗಲೇ 4X400 ಮೀಟರ್ಸ್‌ ಮಿಶ್ರ ರಿಲೆ ವಿಭಾಗದಲ್ಲಿ ಟೋಕಿಯೊ ಟಿಕೆಟ್‌ ಪಡೆದಿದ್ದೇವೆ. ಮಹಿಳೆಯರ 4X400 ಮೀಟರ್ಸ್‌ ರಿಲೆ ಹಾಗೂ 400 ಮೀಟರ್ಸ್‌ (ವೈಯಕ್ತಿಕ) ಓಟದಲ್ಲೂ ಟೋಕಿಯೊ ಕೂಟಕ್ಕೆ ರಹದಾರಿ ಪಡೆಯುವ ಕನಸಿದೆ. ಹೀಗಾಗಿ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಈ ವರ್ಷದ ಅಂತ್ಯದಿಂದ ಆರಂಭವಾಗಲಿರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಗಳಿಗೆ ಸಜ್ಜಾಗಲು ಸುದೀರ್ಘ ಸಮಯ ಸಿಕ್ಕಿದೆ.

l ಕೇಂದ್ರ ಕ್ರೀಡಾ ಸಚಿವಾಲಯವುಯವು ಹೊರಾಂಗಣ ಅಭ್ಯಾಸಕ್ಕೆ ಹಸಿರು ನಿಶಾನೆ ತೋರಿದೆ. ನಿಮ್ಮ ತಾಲೀಮು ಶುರುವಾಗಿದೆಯೇ?

ಅಥ್ಲೀಟ್‌ಗಳು ನಿರಂತರವಾಗಿ ತಾಲೀಮು ನಡೆಸುತ್ತಿರಲೇಬೇಕು. ಇಲ್ಲದಿದ್ದರೆ ಸಾಮರ್ಥ್ಯ ಕುಸಿಯುವ ಅಪಾಯವಿರುತ್ತದೆ. ಲಾಕ್‌ಡೌನ್‌ನಿಂದಾಗಿ ನಾವು ಎರಡೂವರೆ ತಿಂಗಳುಗಳಿಂದ ಟ್ರ್ಯಾಕ್‌ಗೆ ಇಳಿಯದೇ ಫಿಟ್‌ನೆಸ್‌ ಕಾಪಾಡಿಕೊಳ್ಳುವತ್ತ ಮಾತ್ರ ಚಿತ್ತ ಹರಿಸಿದ್ದೆವು. ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಗಳಿಸಿರುವ ಮತ್ತು ಅರ್ಹತೆಯ ಮೇಲೆ ಕಣ್ಣಿಟ್ಟಿರುವ ಅಥ್ಲೀಟ್‌ಗಳ ಹೊರಾಂಗಣ ಅಭ್ಯಾಸಕ್ಕೆ ಕ್ರೀಡಾ ಸಚಿವಾಲಯ ಅನುಮತಿ ನೀಡಿದೆ. ಹೀಗಾಗಿ ಮೇ ತಿಂಗಳ ಕೊನೆಯ ವಾರದಿಂದ ಹಂತ ಹಂತವಾಗಿ ಅಭ್ಯಾಸ ಆರಂಭಿಸಿದ್ದೇವೆ. ಸಚಿವಾಲಯದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ.

l ರಿಲೆ ತಂಡದ ಯಶಸ್ಸಿನ ಸೂತ್ರಗಳೇನು?

ತಂಡದಲ್ಲಿರುವ ಆರು ಮಂದಿಯ ನಡುವೆಯೂ ಉತ್ತಮ ಹೊಂದಾಣಿಕೆ ಇರಬೇಕು. ಒಬ್ಬರಿಂದ ಒಂದು ಸಣ್ಣ ತಪ್ಪಾದರೂ ಇಡೀ ತಂಡವೇ ಸ್ಪರ್ಧೆಯಿಂದ ಹೊರಬೀಳುವ ಅಪಾಯವಿರುತ್ತದೆ. ಹೀಗಾಗಿ ಪರಸ್ಪರರಿಗೆ ಬೇಟನ್‌ ಹಸ್ತಾಂತರಿಸುವ ವೇಳೆ ತುಂಬಾ ಜಾಗರೂಕರಾಗಿರಬೇಕಾಗುತ್ತದೆ. ಎಂತಹದ್ದೇ ಪರಿಸ್ಥಿತಿಯಲ್ಲಿ ಎದೆಗುಂದದೇ ಮುನ್ನುಗ್ಗುವ ಗುಣ ಮೈಗೂಡಿಸಿಕೊಂಡಿರಬೇಕು.

l ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಕೆಲವೊಮ್ಮೆ ಭಾರತದ ಅಥ್ಲೀಟ್‌ಗಳು ನಿರೀಕ್ಷಿತ ಸಾಮರ್ಥ್ಯ ತೋರುವುದಿಲ್ಲವಲ್ಲ. ಇದಕ್ಕೆ ಕಾರಣಗಳೇನು?

ಪಾಲ್ಗೊಳ್ಳುವ ಎಲ್ಲಾ ಕೂಟಗಳಲ್ಲೂ ದೇಶಕ್ಕೆ ಪದಕ ಗೆದ್ದುಕೊಡಬೇಕೆಂಬ ಆಸೆ ಎಲ್ಲಾ ಕ್ರೀಡಾಪಟುಗಳಲ್ಲೂ ಇರುತ್ತದೆ. ಸ್ಥಳೀಯ ಕಾಲಮಾನ, ವಾತಾವರಣ, ಆಹಾರ ಕ್ರಮಕ್ಕೆ ಹೊಂದಿಕೊಳ್ಳುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಇದು ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

l ನೀವು 400 ಮೀಟರ್ಸ್‌ ವಿಭಾಗದತ್ತ ಹೊರಳಿದ್ದು ಹೇಗೆ?

ಶಾಲಾ ದಿನಗಳಲ್ಲಿ 100, 200 ಮೀಟರ್ಸ್‌ ಓಟ ಹಾಗೂ ಉದ್ದ ಜಿಗಿತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದೆ. 2002ರಲ್ಲಿ ರಾಷ್ಟ್ರೀಯ ಕೂಟದಲ್ಲೂ ಭಾಗವಹಿಸಿದ್ದೆ. ಅಲ್ಲಿ ನಿರೀಕ್ಷಿತ ಸಾಮರ್ಥ್ಯ ತೋರಲು ಆಗಿರಲಿಲ್ಲ. ಹೀಗಾಗಿ ನನ್ನ ಕೋಚ್‌ ದಿನೇಶ್‌ ಸರ್‌, 400 ಮೀಟರ್ಸ್‌ನಲ್ಲಿ ಅದೃಷ್ಟ ಪರೀಕ್ಷೆ ನಡೆಸುವಂತೆ ಸಲಹೆ ನೀಡಿದರು. 2006ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಜೂನಿಯರ್‌ ಕೂಟದಲ್ಲಿ ಪಾಲ್ಗೊಂಡು ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಬಳಿಕ ಇದೇ ವಿಭಾಗದಲ್ಲಿ ಮುಂದುವರಿಯಲು ನಿರ್ಧರಿಸಿದೆ.

l ನಿಮಗೆ ವಯಸ್ಸಾಯಿತು. ಇನ್ನೂ ನಿಮ್ಮಿಂದ ಪದಕಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹಲವರು ಕುಹಕವಾಡುತ್ತಿದ್ದಾರಲ್ಲ?

ಸಾಧನೆಗೆವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ. ನನಗೀಗ30ರ ಹರೆಯ. 2019ರಲ್ಲಿ ಬೆನ್ನು ನೋವು ಕಾಡಿದ್ದರಿಂದ ಸ್ವಲ್ಪ ಕಾಲ ಟ್ರ್ಯಾಕ್‌ನಿಂದ ದೂರ ಉಳಿದಿದ್ದೆ. ಆಗ ಅನೇಕರು ನನ್ನ ಕಥೆ ಮುಗಿಯಿತು ಎಂದೇ ಬಣ್ಣಿಸಿದ್ದರು. ಅದರಿಂದ ಎದೆಗುಂದದೇ ದೋಹದಲ್ಲಿ ನಡೆದಿದ್ದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ಪದಕಗಳನ್ನು ಗೆದ್ದು ಎಲ್ಲರ ಬಾಯಿ ಮುಚ್ಚಿಸಿದ್ದೆ. 2022ರ ಏಷ್ಯನ್‌ ಕ್ರೀಡಾಕೂಟದಲ್ಲೂ ಪದಕಗಳನ್ನು ಜಯಿಸಿ ಟೀಕಾಕಾರರಿಗೆ ತಕ್ಕ ಉತ್ತರ ನೀಡುತ್ತೇನೆ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅಂತರರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಳ್ಳುತ್ತಿರುವ ಕನ್ನಡಿಗರ ಸಂಖ್ಯೆ ತೀರಾ ವಿರಳ. ಇದಕ್ಕೇನು ಕಾರಣ?

ನಮ್ಮಲ್ಲಿ ಉದಯೋನ್ಮುಖ ಅಥ್ಲೀಟ್‌ಗಳಿಗೆ ಸೂಕ್ತ ಪ್ರೋತ್ಸಾಹ ಹಾಗೂ ಬೆಂಬಲ ಸಿಗುತ್ತಿಲ್ಲ. ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ನಾವು ಅಮೋಘ ಸಾಮರ್ಥ್ಯ ತೋರಿ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತರುತ್ತೇವೆ. ನಮ್ಮ ಸಾಧನೆಯನ್ನು ಗುರುತಿಸಿ ಗೌರವಿಸುವ ಕೆಲಸ ಆಗುತ್ತಿಲ್ಲ. ಪ್ರೋತ್ಸಾಹ ಧನ ನೀಡಿ ಎಂದು ನಾವೇ ಸರ್ಕಾರದ ಮುಂದೆ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆ ರಾಜ್ಯಗಳಲ್ಲಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳಿಗೆ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ನಮ್ಮನ್ನು ಕೇಳುವವರೇ ಇಲ್ಲ. ಅಂತರರಾಷ್ಟ್ರೀಯ ಕೂಟಗಳಲ್ಲಿ ಪದಕಗಳನ್ನು ಗೆದ್ದು ತವರಿಗೆ ಮರಳಿದ ಬಳಿಕ ನಗದು ಬಹುಮಾನ, ನಿವೇಶನ ಕೊಡುವುದಾಗಿ ಭರವಸೆ ನೀಡುತ್ತಾರಷ್ಟೇ. ಅವು ಇದುವರೆಗೂ ಈಡೇರಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.