ಕ್ಯಾಲ್ಗರಿ: ಭಾರತದ ಡಬಲ್ಸ್ ಜೋಡಿಯಾದ ಕೃಷ್ಣಪ್ರಸಾದ್ ಗರಗ ಮತ್ತು ವಿಷ್ಣುವರ್ಧನ ಗೌಡ ಪಂಜಾಲ ಅವರು ಕೆನಡಾ ಓಪನ್ ಸೂಪರ್ 500 ಟೂರ್ನಿಯಲ್ಲಿ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಎರಡನೇ ಸುತ್ತನ್ನು ತಲುಪಿದರು. ಆದರೆ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಪರುಪಳ್ಳಿ ಕಶ್ಯಪ್ ಬೇಗನೇ ಹೊರಬಿದ್ದರು.
ವಿಶ್ವಕ್ರಮಾಂಕದಲ್ಲಿ 37ನೇ ಸ್ಥಾನದಲ್ಲಿರುವ ಕೃಷ್ಣ– ವಿಷ್ಣು ಜೋಡಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ 21–14, 21–16ರಿಂದ ಚೀನಾ ತೈಪೆಯ ಚೆನ್ ಝಿ ರೇ ಮತ್ತು ಲು ಚೆನ್ ಜೋಡಿಯನ್ನು ಸೋಲಿಸಿತು. ಭಾರತದ ಈ ಜೋಡಿ ಕಳೆದ ವರ್ಷ ಆರ್ಲಿನ್ಸ್ ಮಾಸ್ಟರ್ ಮತ್ತು ಸೈಯ್ಯದ್ ಮೋದಿ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿತ್ತು.
ಮುಂದಿನ ಸುತ್ತಿನಲ್ಲಿ ಭಾರತದ ಆಟಗಾರರಿಗೆ, ಎರಡನೇ ಶ್ರೇಯಾಂಕದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆತಿಯವಾನ್ ಜೋಡಿ ಎದುರಾಗುವ ನಿರೀಕ್ಷೆಯಿದೆ.
ಸಿಂಗಲ್ಸ್‌ನಲ್ಲಿ ಭಾರತ ಪರುಪಳ್ಳಿ ಕಶ್ಯಪ್ ಮೊದಲ ಸುತ್ತಿನಲ್ಲಿ ಗೆದ್ದರೂ, ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಬೇಕಾಯಿತು. 36 ವರ್ಷದ ಕಶ್ಯಪ್ 17–21, 20–22 ರಲ್ಲಿ ಚೀನಾದ ಲೀ ಲಾನ್ ಕ್ಸಿ ಅವರಿಗೆ ಮಣಿದರು.
ಭಾರತದ ಪಿ.ವಿ.ಸಿಂಧು, ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್, ಬಿ.ಸಾಯಿ ಪ್ರಣೀತ್ ಮತ್ತು ಋತ್ವಿಕಾ ಶಿವಾನಿ ಗದ್ದೆ ಅವರೂ ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.