ADVERTISEMENT

ಸೆಮಿಫೈನಲ್‌ಗೆ ಟರ್ಕಿಯ ಹಾಕ್‌ಬ್ಯಾಂಕ್‌ ಕ್ಲಬ್‌

ವಾಲಿಬಾಲ್‌ ಕ್ಲಬ್‌ ವಿಶ್ವ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 9:32 IST
Last Updated 9 ಡಿಸೆಂಬರ್ 2023, 9:32 IST
<div class="paragraphs"><p>ವಾಲಿಬಾಲ್‌ </p></div>

ವಾಲಿಬಾಲ್‌

   

ಬೆಂಗಳೂರು: ಸರ್ವಾಂಗೀಣ ಆಟದ ಪ್ರದರ್ಶನ ನೀಡಿದ ಟರ್ಕಿಯ ಹಾಕ್‌ಬ್ಯಾಂಕ್‌ ಸ್ಪೋರ್ಟ್‌ ಕುಲುಬು (ಕ್ಲಬ್‌) ತಂಡ 3–0 ನೇರ ಸೆಟ್‌ಗಳಿಂದ ಬ್ರೆಜಿಲ್‌ನ ಸಡಾ ಕ್ರುಝೇರೊ ವೋಲಿ ಕ್ಲಬ್ ತಂಡವನ್ನು ಸೋಲಿಸಿ, ಪುರುಷರ ವಾಲಿಬಾಲ್‌ ಕ್ಲಬ್‌ ವಿಶ್ವ ಚಾಂಪಿಯನ್‌ಷಿಪ್‌ನ ‘ಬಿ’ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸಿತು.

ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಹಾಕ್‌ಬ್ಯಾಂಕ್ ತಂಡ 26–24, 25–18, 28–26 ರಿಂದ ಬ್ರೆಜಿಲ್‌ನ ಕ್ಲಬ್ ಮೇಲೆ 85 ನಿಮಿಷಗಳ ಹೋರಾಟದಲ್ಲಿ ಜಯಗಳಿಸಿತು. ಎರ್ವಿನ್‌ ಎನ್‌ಗಪೆತ್‌ (15 ಅಂಕ), ಡಚ್‌ ತಂಡದ ನಾಯಕ ಅಬ್ದುಲ್‌ ಅಜೀಜ್‌ ನಿಮಿರ್ (14) ಮತ್ತು ಪೆರಿನ್‌ (12) ಅವರು ಹಾಕ್‌ಬ್ಯಾಂಕ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ADVERTISEMENT

ಜಪಾನ್‌ ಸುಂಟೋರಿ ಸನ್‌ಬರ್ಡ್ಸ್ ಕ್ಲಬ್‌ ನಾಲ್ಕ ಪಾಯಿಂಟ್‌ಗಳೊಡನೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಗುರುವಾರವೇ ಸೆಮಿಫೈನಲ್ ತಲುಪಿದ್ದು, ಮೂರು ಪಾಯಿಂಟ್‌ಗಳೊಡನೆ ಎರಡನೇ ತಂಡವಾಗಿ ಟರ್ಕಿಯ ಕ್ಲಬ್‌ ನಾಲ್ಕರ ಘಟ್ಟಕ್ಕೆ ಮುನ್ನಡೆಯಿತು.

ನಿಮಿರ್ ಮತ್ತು ಎನ್‌ಗಪೆತ್‌ ಅವರು ಮೊದಲ ಸೆಟ್‌ನ ಆರಂಭದಿಂದಲೇ ಟರ್ಕಿಯ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಆದರೆ ಸಡಾ ತಂಡಕ್ಕೆ ಆಡುವ ಕ್ಯೂಬಾದ ಆಟಗಾರ ಮಿಗಿಲ್ ಲೋಪೆಲ್‌ ಕೆಲವು ಉತ್ತಮ ಹೊಡೆತಗಳೊಡನೆ ತಂಡ ತುಂಬಾ ಹಿಂದೆಬೀಳದಂತೆ ನೋಡಿಕೊಂಡರು. ಎರಡು ಮತ್ತು ಮೂರನೇ ಸೆಟ್‌ಗಳಲ್ಲಿ ಟರ್ಕಿಯ ತಂಡ ಆರಂಭದಿಂದಲೇ ಮುನ್ನಡೆ ಗಳಿಸಿತು. ಎನ್‌ಗಪೆತ್‌ ಮತ್ತು ಪೆರಿನ್ ಜೋಡಿ ಶಕ್ತಿಶಾಲಿ ಹೊಡೆತಗಳು ಮತ್ತು ‘ಸೆಟ್ಟರ್‌’ ಮಿಖಾ ಮಾ ಅವರ ಜಾಣ್ಮೆಯ ‘ಡ್ರಾ‍ಪ್‌’ಗಳಿಂದ ಸಡಾ ಕ್ಲಬ್ ಮುನ್ನಡೆ ಪಡೆಯಲಾಗಲಿಲ್ಲ. ಮೂರನೇ ಸೆಟ್‌ನಲ್ಲಿ ಐದು ಬಾರಿ ಮ್ಯಾಚ್‌ ಪಾಯಿಂಟ್‌ ಉಳಿಸಿದರೂ, ಅಂತಿಮವಾಗಿ ಅದರಿಂದ ಹೆಚ್ಚಿನ ಪರಿಣಾಮವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.