ADVERTISEMENT

ಎಂಜಿನಿಯರಿಂಗ್‌ಗೆ ವಿದಾಯ; ಟ್ರ್ಯಾಕ್‌ನಲ್ಲಿ ಮಿಂಚು

ಪ್ಯಾರಿಸ್ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ 4x400ಮೀಟರ್ಸ್ ರಿಲೆ ತಂಡದಲ್ಲಿ ಮಂಗಳೂರಿನ ಮಿಜೊ ಚಾಕೊ

ವಿಕ್ರಂ ಕಾಂತಿಕೆರೆ
Published 6 ಜುಲೈ 2024, 15:36 IST
Last Updated 6 ಜುಲೈ 2024, 15:36 IST
ಮಿಜೊ ಚಾಕೊ ಕುರಿಯನ್
ಮಿಜೊ ಚಾಕೊ ಕುರಿಯನ್   

ಮಂಗಳೂರು: ಪ್ಲಸ್–ಟು ಓದುತ್ತಿದ್ದಾಗ ಓರಗೆಯವರು ಓಡುತ್ತಿದ್ದುದನ್ನು ನೋಡಿ ಟ್ರ್ಯಾಕ್‌ನತ್ತ ಒಲವು ಬೆಳೆಸಿಕೊಂಡ ಮಂಗಳೂರಿನ ಯುವಕ ಓಟದಲ್ಲಿ ಸಾಧನೆಯ ಕನಸು ಹೊತ್ತು ಎಂಜಿನಿಯರಿಂಗ್ ಪದವಿಗೆ ಅರ್ಧದಲ್ಲೇ ವಿದಾಯ ಹೇಳಿದರು.

ಒಂದು ದಶಕದಲ್ಲಿ ಭಾರತದ ಅಥ್ಲೆಟಿಕ್ಸ್‌ನಲ್ಲಿ ಮಿಂಚು ಹರಿಸಿ ಈಗ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಸಂಭ್ರಮದಲ್ಲಿದ್ದಾರೆ. ಮಂಗಳೂರಿನ ಎನ್‌ಎಂಪಿಟಿ (ಈಗ ಎನ್‌ಎಂಪಿಎ) ಮತ್ತು ಸೇಂಟ್ ಅಲೋಶಿಯಸ್‌ ಶಾಲೆ, ಶಾರದಾ ಮತ್ತು ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಮಿಜೋ ಚಾಕೊ ಕುರಿಯನ್ ಅವರು ಆಳ್ವಾಸ್‌ ಶಿಕ್ಷಣ ಸಂಸ್ಥೆಯ ಪ‍್ರಾಯೋಜಕತ್ವದಲ್ಲಿ ಅಭ್ಯಾಸ ಮಾಡಿದ್ದರು.

ಮೇ ತಿಂಗಳಲ್ಲಿ ಬಹಾಮಸ್‌ನ ನಾಸೌದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್‌ನ ರಿಲೆಯಲ್ಲಿ ಒಲಿಂಪಿಕ್ಸ್‌ಗೆ ಆಯ್ಕೆಯಾಗಿರುವ ತಂಡದಲ್ಲಿ ಸ್ಥಾನ ಗಳಿಸಿದ್ದು ಈಗ ಅಭ್ಯಾಸನಿರತರಾಗಿದ್ದಾರೆ.

ADVERTISEMENT

ಮಿಜೊ ಅವರ ತಂದೆ ಕುರಿಯನ್‌ ಮತ್ತು ತಾಯಿ ಮಿನಿ ದಂಪತಿ ಕೇರಳದ ಆಲಪ್ಪುಳ ಜಿಲ್ಲೆಯ ತಿರುವಲ್ಲದವರು. ಕುರಿಯನ್ ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಮಿಜೊ ಜನಿಸಿದ್ದು ಮಂಗಳೂರಿನಲ್ಲಿ. ಶಾರದಾ ಕಾಲೇಜಿನಲ್ಲಿ ಪ್ಲಸ್ ಟು ಓದುತ್ತಿದ್ದಾಗ ದಿಢೀರ್ ಆಗಿ ಅಥ್ಲೆಟಿಕ್ಸ್ ಮೇಲೆ ಆಸಕ್ತಿ ಮೂಡಿತು.

ಮಂಗಳಾ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ಅವರ ಕನಸನ್ನು ಪೋಷಿಸಿದವರು ಕೋಚ್ ದಿನೇಶ್ ಕುಂದರ್. ಶ್ರೀನಿವಾಸ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಓದುತ್ತಿದ್ದ ಮಿಜೊ ಓದನ್ನು ಅರ್ಧಕ್ಕೇ ನಿಲ್ಲಿಸಿದ ಪೂರ್ಣಪ್ರಮಾಣದಲ್ಲಿ ಟ್ರ್ಯಾಕ್‌ನತ್ತ ಹೊರಳಿದರು. ಇದೇ ಸಂದರ್ಭದಲ್ಲಿ ವಾಯುಸೇನೆಯಲ್ಲಿ ಉದ್ಯೋಗವೂ ಲಭಿಸಿತು. ಜೂನಿಯರ್ ವಾರಂಟ್ ಆಫೀಸರ್ ಹುದ್ದೆಯಲ್ಲಿರುವ ಅವರು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಮೊದಲ ಪದಕದ ಸಂಭ್ರಮ

ತಾಲ್ಲೂಕು, ಜಿಲ್ಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮಿಜೊ 2018ರಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯದ ರಿಲೆಯಲ್ಲಿ ಚಿನ್ನ ಗೆದ್ದ ತಂಡದಲ್ಲಿದ್ದರು. 2022ರಲ್ಲಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 400 ಮೀಟರ್ಸ್ ಓಟದಲ್ಲಿ ವೈಯಕ್ತಿಕ ಪದಕ ಗಳಿಸಿದರು. ಅದೇ ವರ್ಷ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾದರು.

ಕಳೆದ ವರ್ಷ ನಡೆದ ಏಷ್ಯನ್‌ ಗೇಮ್ಸ್‌ನ ರಿಲೆಯಲ್ಲಿ ಚಿನ್ನ ತಂಡದಲ್ಲಿ ಮಿಜೊ ಇದ್ದರು. ಫೈನಲ್‌ನಲ್ಲಿ ಭಾಗವಹಿಸಲು ಅವಕಾಶ ಸಿಗದೇ ಇದ್ದರೂ ಒಲಿಂಪಿಕ್ಸ್‌ ಅರ್ಹತಾ ಶಿಬಿರಕ್ಕೆ ಆಯ್ಕೆಯಾದರು.

‘ಇದು ನನ್ನ ಕನಸಾಗಿತ್ತು. ಆದ್ದರಿಂದ ತುಂಬ ಖುಷಿಯಲ್ಲಿದ್ದೇನೆ. ಒಲಿಂಪಿಕ್ಸ್‌ನಂಥ ಪ್ರಮುಖ ಕೂಟದಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ ಎಂದು ಕನಸಿನಲ್ಲೂ ಎನಿಸಿರಲಿಲ್ಲ. ಪ್ಯಾರಿಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿ ಭಾರತಕ್ಕೆ ಪದಕ ತಂದುಕೊಡಬೇಕು. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ತಿರುವನಂತಪುರದ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕೇಂದ್ರದಲ್ಲಿ ಜಮೈಕಾದ ಕೋಚ್‌ ಡಾಸನ್ ಬಳಿ ತರಬೇತಿ ಪಡೆಯುತ್ತಿರುವ ಮಿಜೊ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ತಿಳಿಸಿದರು. 

ಮಿಜೊ ಚಾಕೊ ಕುರಿಯನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.