ಸೇಂಟ್ ಲೂಯಿ (ಅಮೆರಿಕ): ಫ್ರಾನ್ಸ್‌ನ ಮ್ಸಾಕ್ಸಿಂ ವೇಷಿಯರ್ ಲಗ್ರಾವ್ ಅವರು ಸೇಂಟ್ ಲೂಯಿ ರ್‍ಯಾಪಿಡ್ ಮತ್ತು ಬ್ಲಿಟ್ಸ್ ಟೂರ್ನಿಯ ರ‍್ಯಾಪಿಡ್ ವಿಭಾಗದ ಮೂರನೇ ಸುತ್ತಿನ ನಂತರ ಐದು ಪಾಯಿಂಟ್‌ಗಳೊಡನೆ ಅಗ್ರಸ್ಥಾನದಲ್ಲಿದ್ದಾರೆ.
ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಹಿಕಾರು ನಕಾಮುರಾ ಜೊತೆ ‘ಡ್ರಾ’ ಮಾಡಿಕೊಂಡ ಲಗ್ರಾವ್ ನಂತರದ ಎರಡು ಪಂದ್ಯಗಳಲ್ಲಿ ‘ಎಂಡ್‌ಗೇಮ್’ ಕೌಶಲ ಪ್ರದರ್ಶಿಸಿ ಯುವ ತಾರೆಗಳಾದ ಆರ್.ಪ್ರಜ್ಞಾನಂದ ಮತ್ತು ನಾಡಿರ್ಬೆಕ್ ಅಬ್ದುಸತ್ತಾರೋವ್ ವಿರುದ್ಧ ಜಯಗಳಿಸಿದರು. ಗೆಲುವಿಗೆ ಎರಡು ಪಾಯಿಂಟ್, ‘ಡ್ರಾ’ಕ್ಕೆ ಒಂದು ಪಾಯಿಂಟ್ ನೀಡಲಾಗುತ್ತದೆ.
ಭಾರತದ ತಾರೆ ಪ್ರಜ್ಞಾನಂದ ಅವರಿಗೆ ಟೂರ್ನಿಯಲ್ಲಿ ಒಳ್ಳೆಯ ಆರಂಭ ಸಿಗಲಿಲ್ಲ. ಪ್ರಜ್ಞಾನಂದ ಮತ್ತು ಹಾಲಿ ಚಾಂಪಿಯನ್ ಫ್ಯಾಬಿಯಾನೊ ಕರುವಾನಾ ಅವರು ಮೂರು ಪಂದ್ಯಗಳ ನಂತರ ತಲಾ ಒಂದು ಪಾಯಿಂಟ್ ಮಾತ್ರ ಗಳಿಸಿ 10 ಆಟಗಾರರ ಕಣದಲ್ಲಿ ಕ್ರಮವಾಗಿ 9 ಮತ್ತು ಹತ್ತನೇ ಸ್ಥಾನದದ್ದಾರೆ. ನಿಪೊಮ್‌ನಿಯಾಷಿ ವಿರುದ್ಧ ಪಂದ್ಯದಲ್ಲೂ ಪ್ರಜ್ಞಾನಂದ ಸೋಲುಕಂಡರು. ಅಮೆರಿಕದ ಲೆವೊನ್ ಅರೋನಿಯನ್ ಜೊತೆ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿ ಆದರು.
ಕ್ಯೂಬನ್–ಅಮೆರಿಕನ್ ಗ್ರ್ಯಾಂಡ್‌ಮಾಸ್ಟರ್ ಎಲ್.ಡೊಮಿಂಗೆಝ್ ಪೆರೆಝ್ ಅವರು ತಮ್ಮ ಮೂರು ಪಂದ್ಯಗಳಲ್ಲಿ ಒಂದು ಗೆದ್ದು (ಕರುವಾನಾ ವಿರುದ್ಧ), ಉಳಿದ ಎರಡನ್ನು (ಕ್ರಮವಾಗಿ ಅಲಿರೇಜಾ ಫೀರೋಜ ಮತ್ತು ಅಬ್ದುಸತ್ತಾರೋವ್) ಡ್ರಾ ಮಾಡಿಕೊಂಡು ಉತ್ತಮ ಆರಂಭ ಪಡೆದರು.
ಅರೋನಿಯನ್, ರಷ್ಯಾದ ನಿಪೊಮ್‌ನಿಷಿ, ಡೊಮಿಂಗೆಝ್ ಅವರು ತಲಾ ನಾಲ್ಕು ಪಾಯಿಂಟ್ಸ್ ಕಲೆಹಾಕಿದ್ದು ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಉಜ್ಬೇಕಿಸ್ತಾನದ ಅಬ್ದುಸತ್ತಾರೋವ್, ಅಲಿರೇಜ ಫಿರೋಜ, ಹಿಕಾರು ನಕಾಮುರಾ ತಲಾ ಮೂರು ಪಾಯಿಂಟ್ಸ್ ಸಂಗ್ರಹಿಸಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಅಮೆರಿಕದ ವೆಸ್ಲಿ ಸೊ ಬಳಿ ಎರಡು ಪಾಯಿಂಟ್‌ಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.