ADVERTISEMENT

ಡೆನ್ಮಾರ್ಕ್ ಓಪನ್‌: ಮೊದಲ ಸುತ್ತಿನಲ್ಲೇ ಹೊರಬಿದ್ದ ಲಕ್ಷ್ಯ, ಮಾಳವಿಕಾ

ಪಿಟಿಐ
Published 15 ಅಕ್ಟೋಬರ್ 2024, 13:32 IST
Last Updated 15 ಅಕ್ಟೋಬರ್ 2024, 13:32 IST
ಲಕ್ಷ್ಯ ಸೇನ್
ಲಕ್ಷ್ಯ ಸೇನ್   

ಒಡೆನ್ಸ್‌: ಭಾರತದ ಲಕ್ಷ್ಯ ಸೇನ್, ಡೆನ್ಮಾರ್ಕ್ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಸುತ್ತಿನಲ್ಲಿ ಚೀನಾದ ಲು ಗುವಾಂಗ್‌ ಝು ವಿರುದ್ಧ ಹೋರಾಟ ತೋರಿದರೂ ಅಂತಿಮವಾಗಿ ಸೋಲನುಭವಿಸಬೇಕಾಯಿತು.

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ವಲ್ಪದರಲ್ಲೇ ಕಂಚಿನ ಪದಕ ಕಳೆದುಕೊಂಡಿದ್ದ ಲಕ್ಷ್ಯ ಮಂಗಳವಾರ ನಡೆದ ಪಂದ್ಯದಲ್ಲಿ 21–12, 19–21, 14–21ರಲ್ಲಿ ಸೋತರು. ಮೊದಲ ಸುತ್ತಿನ ಈ ಪಂದ್ಯ 70 ನಿಮಿಷಗಳವರೆಗೆ ನಡೆಯಿತು.

ಈ ಮೂಲಕ ಲಕ್ಷ್ಯ ಅವರ ನಿರಾಶಾದಾಯಕ ಪ್ರದರ್ಶನ ಮುಂದುವರಿಯಿತು. ಇದಕ್ಕೆ ಮೊದಲು ಫಿನ್ಲೆಂಡ್‌ನಲ್ಲಿ ನಡೆದ  ಆರ್ಕ್ಟಿಕ್ ಓಪನ್‌ ಟೂರ್ನಿಯಲ್ಲಿ ಅಲ್ಮೋರಾದ ಆಟಗಾರ ಎರಡನೇ ಸುತ್ತಿನಲ್ಲಿ ಹೊರಬಿದ್ದಿದ್ದರು.

ADVERTISEMENT

ಚೀನಾ ಓಪನ್‌ನಲ್ಲಿ ಎಂಟರ ಘಟ್ಟ ತಲುಪಿದ್ದ ಮಾಳವಿಕಾ ಬನ್ಸೋಡ್‌ ಕೂಡ ಮೊದಲ ಸುತ್ತನ್ನು ದಾಟಲಾಗಲಿಲ್ಲ. ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ವಿಯೆಟ್ನಾಮಿನ ಎನ್ಗುಯೆನ್ ಥುಯಿ ಲಿನ್  ಎದುರು 13–21, 12–21 ರಲ್ಲಿ ಹಿಮ್ಮೆಟ್ಟಿದರು.

ಪಂಡಾ ಸೋದರಿಯರಾದ ರುತುಪರ್ಣ ಮತ್ತು ಶ್ವೇತಪರ್ಣ ಕೂಡ ಬೇಗ ಸವಾಲು ಮುಗಿಸಿದರು. ಅವರು 18–21, 22–24ರಲ್ಲಿ ಚೀನಾ ತೈಪಿಯ ಚಾಂಗ್‌ ಚಿಂಗ್‌ ಹುಯಿ– ಯಾಂಗ್ ಚಿಂಗ್ ಟುನ್ ಎದುರು ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.