ವಾಂಟಾ (ಫಿನ್ಲೆಂಡ್): ಮೊದಲ ಗೇಮ್ ಗೆದ್ದ ಲಾಭ ಪಡೆಯಲಾಗದೇ ಭಾರತದ ಲಕ್ಷ್ಯ ಸೇನ್, ಸೂಪರ್ 500 ಮಟ್ಟದ ಆರ್ಕ್ಟಿಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಚೀನಾ ತೈಪೆಯ ಚೌ ಟಿಯೆನ್ ಚೆನ್ ಅವರಿಗೆ ಗುರುವಾರ ಸೋತರು.
ಒಂದು ಗಂಟೆ ಹತ್ತು ನಿಮಿಷ ನಡೆದ ಪುರುಷರ ಸಿಂಗಲ್ಸ್ ಎರಡನೇ ಸುತ್ತಿನ ಸೆಣಸಾಟದಲ್ಲಿ, 23 ವರ್ಷ ವಯಸ್ಸಿನ ಲಕ್ಷ್ಯ 21–19, 18–21, 15–21ರಲ್ಲಿ ಏಳನೇ ಶ್ರೇಯಾಂಕದ ಎದುರಾಳಿಯೆದುರು ಸೋತರು.
ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಎರಡನೇ ಸುತ್ತಿನಲ್ಲೇ ಅಂತ್ಯ ಕಂಡಿತು. ಅರ್ಹತಾ ಹಂತದಿಂದ ಬಂದಿದ್ದ ಕಿರಣ್ ಜಾರ್ಜ್ 17–21, 8–21ರಲ್ಲಿ ಐದನೇ ಶ್ರೇಯಾಂಕದ ಜೊನಾಥನ್ ಕ್ರಿಸ್ಟಿ (ಇಂಡೊನೇಷ್ಯಾ) ಅವರಿಗೆ ಮಣಿದರು.
ಮಾಳವಿಕಾ ಬನ್ಸೋಡ್, ಮಹಿಳೆಯರ ಸಿಂಗಲ್ಸ್‌ನಲ್ಲಿ ಹೆಚ್ಚು ಪ್ರತಿರೋಧ ತೋರದೇ ರಟ್ಜನೋಕ್ ಇಂತನೊನ್ ಅವರಿಗೆ 15–21, 8–21ರಲ್ಲಿ ಮಣಿದರು. ಉನ್ನತಿ ಹೂಡಾ ಮತ್ತು ಆಕರ್ಷಿ ಕಶ್ಯಪ್ ಕೂಡ ಹೋರಾಟ ನೀಡದೇ ಹೊರಬಿದ್ದರು. ಉನ್ನತಿ 9–21, 8–21ರಲ್ಲಿ ಕೆನಡಾದ ಮಿಚೆಲಿ ಲಿ ಎದುರು ಸೋಲನ್ನು ಕಂಡರೆ, ಆಕರ್ಷಿ 9–21, 8–21ರಲ್ಲಿ ಎರಡನೇ ಶ್ರೇಯಾಂಕದ ಹಾನ್ ಯ್ಯು (ಚೀನಾ) ಎದುರು ಹಿಮ್ಮೆಟ್ಟಿದರು.
ಮಿಶ್ರ ಡಬಲ್ಸ್‌ನಲ್ಲಿ ಸತೀಶ್ ಕುಮಾರ್ ಕರುಣಾಕರನ್– ಆದ್ಯಾ ವರಿಯತ್ 12–21, 15–21ರಲ್ಲಿ ಚೀನಾದ ಚೆಂಗ್ ಷಿಂಗ್– ಝಾಂಗ್ ಚಿ ಅವರಿಗೆ ಸೋತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.