ADVERTISEMENT

ಇಂಡೊನೇಷ್ಯಾ ಓಪನ್‌: ಭಾರತದ ಸವಾಲು ಅಂತ್ಯ, ಲಕ್ಷ್ಯ ಸೇನ್‌ ನಿರ್ಗಮನ

ಪಿಟಿಐ
Published 8 ಜೂನ್ 2024, 0:22 IST
Last Updated 8 ಜೂನ್ 2024, 0:22 IST
<div class="paragraphs"><p>ಭಾರತದ ಲಕ್ಷ್ಯ ಸೇನ್‌ </p></div>

ಭಾರತದ ಲಕ್ಷ್ಯ ಸೇನ್‌

   

–ಪಿಟಿಐ ಚಿತ್ರ

ಜಕಾರ್ತ: ಭಾರತದ ಲಕ್ಷ್ಯ ಸೇನ್‌ ಅವರು ಇಂಡೊನೇಷ್ಯಾ ಓಪನ್‌ ಸೂಪರ್‌ ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ನಿರ್ಗಮಿಸುವುದರೊಂದಿಗೆ ಇಲ್ಲಿ ಭಾರತದ ಸವಾಲಿಗೆ ತೆರೆಬಿದ್ದಿತು.

ADVERTISEMENT

ಶುಕ್ರವಾರ ನಡೆದ ಪಂದ್ಯದಲ್ಲಿ ವಿಶ್ವದ 14ನೇ ಕ್ರಮಾಂಕದ ಸೇನ್‌ 22-24, 18-21 ಗೇಮ್‌ಗಳಿಂದ ವಿಶ್ವದ ಐದನೇ ರ‍್ಯಾಂಕ್‌ನ ಆಂಡರ್ಸ್ ಆಂಟೊನ್‌ಸೆನ್ (ಡೆನ್ಮಾರ್ಕ್‌) ಅವರಿಗೆ ಮಣಿದರು. ಈ ಮೂಲಕ ಆಂಟೊನ್‌ಸೆನ್‌, ಸೇನ್‌ ವಿರುದ್ಧ ಗೆಲುವಿನ ದಾಖಲೆಯನ್ನು 3–2ಕ್ಕೆ ಹೆಚ್ಚಿಸಿಕೊಂಡರು.

ಒಂದು ಗಂಟೆ ಒಂದು ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಸೇನ್‌ ಉತ್ತಮ ಪೈಪೋಟಿ ನೀಡಿದರು. ಮೊದಲ ಗೇಮ್‌ನಲ್ಲಿ ಆರಂಭದಲ್ಲೇ ಡೆನ್ಮಾರ್ಕ್‌ ಆಟಗಾರ 4–0 ಮುನ್ನಡೆ ಪಡೆದರು. ಆದರೆ, ಸೇನ್‌ ಪ್ರತಿರೋಧ ತೋರಿ 5–5 ಸಮಬಲ ಸಾಧಿಸಿದರು. ಒಂದು ಹಂತದಲ್ಲಿ ಮುನ್ನಡೆಯನ್ನು 15–11ಕ್ಕೆ ವಿಸ್ತರಿಸಿದರು. ಆದರೆ, ಅಂತಿಮವಾಗಿ ಆಂಟೊನ್‌ಸೆನ್‌ ಮೇಲುಗೈ ಸಾಧಿಸಿದರು.

ಎರಡನೇ ಗೇಮ್‌ನಲ್ಲೂ ಉಭಯ ಆಟಗಾರರ ಮಧ್ಯೆ ತುರುಸಿನ ಪೈಪೋಟಿ ಮುಂದುವರಿಯಿತು. ಹಲವು ದೀರ್ಘ ರ‍್ಯಾಲಿಗಳಿಗೂ ಪಂದ್ಯ ಸಾಕ್ಷಿಯಾಯಿತು. ಆರಂಭದಲ್ಲಿ 7–2ರ ಮುನ್ನಡೆ ಪಡೆದಿದ್ದ ಸೇನ್‌, ನಂತರ ಕೆಲ ತಪ್ಪುಗಳನ್ನು ಎಸಗಿದರು. ಅದರ ಲಾಭ ಪಡೆದ ಎದುರಾಳಿ ಆಟಗಾರ ಗೆಲುವಿನೊಂದಿಗೆ ಸೆಮಿಫೈನಲ್‌ಗೆ ಮುನ್ನಡೆದರು.

ಆಂಟೊನ್‌ಸೆನ್ ಸೆಮಿಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ಥಾಯ್ಲೆಂಡ್‌ನ ಕುನ್ಲಾವುಟ್ ವಿಟಿಡ್ಸರ್ನ್ ಅವರನ್ನು ಎದುರಿಸುವರು. ಕುನ್ಲಾವುಟ್ ಅವರು 21–16, 21–17ರಿಂದ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.