ಟೋಕಿಯೊ: ಜಪಾನ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರೆ ಲಕ್ಷ್ಯ ಸೇನ್ ಅವರು ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಅಂತಿಮ ನಾಲ್ಕರ ಹೋರಾಟದಲ್ಲಿ ವಿಶ್ವದ 13ನೇ ರ್‍ಯಾಂಕ್‌ನ ಸೇನ್ ಅವರು ವಿಶ್ವ ನಂ.5 ರ್‍ಯಾಂಕ್‌ನ ಇಂಡೋನೇಷ್ಯಾದ ಜೋನಾಥನ್ ಕ್ರಿಸ್ಟಿ ವಿರುದ್ಧ 15-21 21-13 16-21ರ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.
ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿದ ಸೇನ್ ಎರಡನೇ ಸೆಟ್ ಗೆಲ್ಲುವ ಮೂಲಕ ಸಮಬಲದ ಹೋರಾಟ ನೀಡಿದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲೂ ಹಿನ್ನಡೆ ಅನುಭವಿಸುವ ಮೂಲಕ ಒಂದು ತಾಸು ಆರು ನಿಮಿಷಗಳ ವರೆಗೆ ಸಾಗಿದ ಜಿದ್ದಾಜಿದ್ದಿನ ಹೋರಾಟದಲ್ಲಿ ಪರಾಭವಗೊಂಡರು.
21 ವರ್ಷದ ಸೇನ್ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಪದಕದ ನಿರೀಕ್ಷೆ ಅಸ್ತಮಿಸಿದೆ. ಪುರುಷರ ಡಬಲ್ಸ್‌ನಲ್ಲಿ ಕಳೆದ ದಿನ ಭಾರತದ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ ಜೋಡಿ ಸೋಲು ಅನುಭವಿಸಿತ್ತು.
ಕೆನಡಾ ಓಪನ್ ಚಾಂಪಿಯನ್ ಆಗಿದ್ದ ಸೇನ್, ಅಮೆರಿಕ ಓಪನ್‌ನಲ್ಲೂ ಸೆಮಿಫೈನಲ್ ಪ್ರವೇಶಿಸಿದ್ದರು. 2021ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಕಂಚಿನ ಪದಕ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.