ADVERTISEMENT

ಮಿಲ್ಖಾ ಸಿಂಗ್ ಕೊನೆ ಆಸೆ ಈಡೇರಲೇ ಇಲ್ಲ!

ಗಿರೀಶದೊಡ್ಡಮನಿ
Published 19 ಜೂನ್ 2021, 2:43 IST
Last Updated 19 ಜೂನ್ 2021, 2:43 IST
ಮಿಲ್ಖಾ ಸಿಂಗ್
ಮಿಲ್ಖಾ ಸಿಂಗ್   

ಬೆಂಗಳೂರು: ‘ಒಲಿಂಪಿಕ್ಸ್‌ಗೆ ಅಥ್ಲೆಟಿಕ್ಸ್ ಕಿರೀಟವಿದ್ದಂತೆ. ಜಗತ್ತಿನ ಎಲ್ಲ ದೇಶಗಳ ಅಥ್ಲೀಟ್‌ಗಳು ಸ್ಪರ್ಧಿಸುತ್ತಾರೆ. ಆ ವಿಭಾಗದಲ್ಲಿ ಭಾರತಕ್ಕೊಂದು ಪದಕ ಗೌರವ ಸಿಗಬೇಕು. 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ನಾನು ಫೈನಲ್ ತಲುಪಿದ್ದೆ. ಕೊಂಚದರಲ್ಲಿ ಪದಕ ತಪ್ಪಿಸಿಕೊಂಡೆ. ನನ್ನ ನಂತರವೂ ಇನ್ನೂ ಕೆಲವು ಅಥ್ಲೀಟ್‌ಗಳು ಫೈನಲ್ ತಲುಪಿದ್ದರು. ಆದರೆ, ಪದಕ ಗೆದ್ದಿಲ್ಲ. ನಾನು ಸಾಯುವುದರೊಳಗೆ ಭಾರತದ ಅಥ್ಲೀಟ್ ಒಲಿಂಪಿಕ್ಸ್‌ ಪದಕ ಜಯಿಸುವುದನ್ನು ಕಣ್ತುಂಬಿಕೊಳ್ಳಬೇಕು. ಅದೇ ನನ್ನ ಕೊನೆಯ ಆಸೆ‘–

’ಫ್ಲೈಯಿಂಗ್ ಸಿಖ್‘ ಖ್ಯಾತಿಯ ಅಥ್ಲೀಟ್ ಮಿಲ್ಖಾ ಸಿಂಗ್ ಅವರು ಈ ಮಾತನ್ನು ಹಲವು ಸಂದರ್ಶನಗಳಲ್ಲಿ ಹೇಳಿದ್ದರು. ಆದರೆ ಕೊನೆಗೂ ಅವರ ಆಸೆ ಈಡೇರಲೇ ಇಲ್ಲ. ಸುಮಾರು 20 ದಿನಗಳ ಕಾಲ ಜೀವನ್ಮರಣದ ಹೋರಾಟ ಮಾಡಿದ ಮಿಲ್ಖಾ ಶುಕ್ರವಾರ ತಡರಾತ್ರಿ ಜೀವನದ ಓಟ ಮುಗಿಸಿದರು.

1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಅವರು 400 ಮೀಟರ್ಸ್ ಓಟದಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ಆ ಸ್ಪರ್ಧೆಯಲ್ಲಿ ಅವರು ಮೊದಲ 200 ಮೀಟರ್ಸ್‌ನಲ್ಲಿ ಮೊದಲಿಗರಾಗಿಯೇ ಇದ್ದರು. ಆ ಹಂತದಲ್ಲಿ ಅವರು ತಮ್ಮ ಪ್ರತಿಸ್ಪರ್ಧಿಗಳತ್ತ ಹೊರಳಿ ನೋಡುತ್ತ ಓಡಿದ್ದು ಪದಕ ಸಾಧನೆಗೆ ಅಡ್ಡಿಯಾಯಿತು. ಆ ಕೊರಗು ಅವರಿಗೆ ಯಾವಾಗಲೂ ಇತ್ತು. ಅದಕ್ಕಾಗಿಯೇ ಪ್ರತಿಬಾರಿ ಒಲಿಂಪಿಕ್ಸ್‌ ಬಂದಾಗಲೂ ತಾವು ಸಾಧಿಸದೇ ಉಳಿದಿದ್ದನ್ನು ಯಾರಾದರೂ ಮಾಡುವರೇ ಎಂದು ನಿರೀಕ್ಷಿಸುತ್ತಿದ್ದರು. ಒಲಿಂಪಿಕ್ಸ್ ಅಂಗಳದಲ್ಲಿ ತ್ರಿವರ್ಣ ಧ್ವಜ ನಲಿಯಬೇಕು. ಜನಗಣ ಮನ ಮೊಳಗಬೇಕು ಎಂದು ಯಾವಾಗಲೂ ಆಶಿಸುತ್ತಿದ್ದರು.

ADVERTISEMENT

1964ರಲ್ಲಿ ಗುರುಬಚನ್ ಸಿಂಗ್ ರಂಧಾವಾ, 1976ರಲ್ಲಿ ಶ್ರೀರಾಮಸಿಂಗ್, 1984ರಲ್ಲಿ ಪಿ.ಟಿ. ಉಷಾ, 2004ರಲ್ಲಿ ಅಂಜು ಬಾಬಿ ಜಾರ್ಜ್, 2012ರಲ್ಲಿ ಕನ್ನಡಿಗ ವಿಕಾಸ್ ಗೌಡ ಮತ್ತು ಕೃಷ್ಣಾ ಪೂನಿಯಾ, 2016ರಲ್ಲಿ ಲಲಿತಾ ಬಾಬರ್ ಅವರು ಅಥ್ಲೆಟಿಕ್ಸ್‌ನ ಬೇರೆ ಬೇರೆ ವಿಭಾಗಗಳಲ್ಲಿ ಫೈನಲ್ ತಲುಪಿದ್ದರು. ಅವರಾರಿಗೂ ಪದಕವನ್ನು ಕೊರಳಿಗೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆಗೆಲ್ಲ ಮಿಲ್ಖಾ ಹನಿಗಣ್ಣಾಗಿದ್ದರು.

ಆದರೆ ಒಂದಂತೂ ನಿಜ. ಇವರೆಲ್ಲರ ಸಾಧನೆಗಳ ಹಿಂದಿನ ಸ್ಫೂರ್ತಿಯ ಸೆಲೆ ಮಿಲ್ಖಾ ಸಿಂಗ್ ಅವರೇ ಎಂಬುದರಲ್ಲಿ ಸಂಶಯವೇ ಇಲ್ಲ. ಸ್ವಾತಂತ್ರ್ಯಾ ನಂತರದ ಭಾರತದ ಕ್ರೀಡಾಪಟುಗಳಿಗೆ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಮತ್ತು ಅಥ್ಲೀಟ್ ಮಿಲ್ಖಾ ಸಿಂಗ್ ಸಾಧನೆಗಳೇ ಮೈಲುಗಲ್ಲುಗಳಾಗಿದ್ದವು.

‘ನನಗೆ ಅಥ್ಲೆಟಿಕ್ಸ್, ಒಲಿಂಪಿಕ್ಸ್‌, ಸ್ಪರ್ಧೆ ಎಂಬ ಪದಗಳ ಪರಿಚಯವೇ ಇರಲಿಲ್ಲ. 1947ರ ದೇಶವಿಭಜನೆಯ ದುರಂತದಲ್ಲಿ ಅಪ್ಪ, ಅಮ್ಮ ಸಂಬಂಧಿಕರು ಕಣ್ಣೆದುರೇ ಕಗ್ಗೊಲೆಯಾದರು. ಅದು ಹೇಗೋ ತಪ್ಪಿಸಿಕೊಂಡು ಭಾರತ ಸೇರಿದೆ. ಅಕ್ಕ ಕೂಡ ಜೊತೆಗೂಡಿದರು. ಆ ಹಂತದ ದಾರುಣ ಬದುಕಿನಲ್ಲಿ ಒಂದು ಹೊತ್ತಿನ ಊಟ ಸಿಗುವುದೇ ದೊಡ್ಡ ಮಾತು. ದೆಹಲಿಯ ನಿರಾಶ್ರಿತರ ಶಿಬಿರದಲ್ಲಿ ಕಳೆದ ಆ ದಿನಗಳು ಘೋರವಾಗಿದ್ದವು. ಕಳ್ಳನೋ, ಡಕಾಯಿತನೋ ಆಗಿಬಿಡುವ ಸಂಭವವೂ ಇತ್ತು. ಟಿಕೆಟ್‌ ಇಲ್ಲದೆ ರೈಲು ಪ್ರಯಾಣ ಮಾಡಿದ್ದಕ್ಕೆ ಜೈಲಿಗೆ ಹೋಗಬೇಕಾಯಿತು. ಅಕ್ಕನ ನೆರವಿನಿಂದ ಬಿಡುಗಡೆ ಆದೆ. ಸೇನೆ ಸೇರಲು ಎರಡು, ಮೂರು ಪ್ರಯತ್ನಿಸಿದೆ. ಆದರೂ ಕೊನೆಗೊಮ್ಮೆ ನೇಮಕವಾದೆ. ಅಲ್ಲಿ ಬದುಕು ಬದಲಾಯಿತು. ಕ್ರಾಸ್‌ ಕಂಟ್ರಿ ಓಡಲು ಆಯ್ಕೆ ಮಾಡಿದರು. ಪ್ರತಿಭೆ ಗುರುತಿಸಿದ ಕೋಚ್‌ಗಳಿಂದಾಗಿ ಈ ಮಟ್ಟಕ್ಕೆ ಬಂದೆ. ಸೇನೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ‘ ಎಂದು ಮಿಲ್ಖಾ ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದರು.

200 ಮೀಟರ್ಸ್‌ ಮತ್ತು 400 ಮೀಟರ್ಸ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಬರೆದಿದ್ದ ಮಿಲ್ಖಾ ಏಷ್ಯನ್ ಗೇಮ್ಸ್‌ನಲ್ಲಿ ನಾಲ್ಕು ಬಾರಿ ಚಿನ್ನ ಗೆದ್ದಿದ್ದರು. 1958ರಲ್ಲಿ ಕಾರ್ಡಿಫ್‌ನಲ್ಲಿ ನಡೆದಿದ್ದ ಬ್ರಿಟಿಷ್ ಕಾಮನ್‌ವೆಲ್‌ ಗೇಮ್ಸ್‌ನಲ್ಲಿ 400 ಮೀಟರ್ಸ್‌ ಚಿನ್ನದ ಪದಕ ಜಯಿಸಿದ್ದರು. ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಅಚ್ಚುಮೆಚ್ಚಿನ ಅಥ್ಲೀಟ್ ಆಗಿದ್ದರು ಮಿಲ್ಖಾ.

ಕಾರ್ಡಿಫ್ ಸಾಧನೆಗೆ ಪ್ರತಿಯಾಗಿ ತಮಗೇನು ಬೇಕು ಎಂದು ಪ್ರಧಾನಿ ನೆಹರು ಕೇಳಿದ್ದ ಸಂದರ್ಭದಲ್ಲಿ ಮಿಲ್ಖಾ, ‘ನನ್ನ ಹೆಸರಿನಲ್ಲಿ ಒಂದು ದಿನ ರಾಷ್ಟ್ರೀಯ ರಜೆ ಘೋಷಿಸಿ‘ ಎಂದಿದ್ದರಂತೆ.

‘ನಾನು ಯಾವತ್ತೂ ಹಣಕ್ಕಾಗಿ ಓಡಿದವನಲ್ಲ. ಆರ್ಮಿಯಲ್ಲಿ ನನ್ನ ಸಂಬಳ 39 ರೂಪಾಯಿ ಇತ್ತು. ಊಟ, ಬಟ್ಟೆ, ಬೂಟುಗಳನ್ನೂ ಅವರೇ ಕೊಡುತ್ತಿದ್ದರು. ವಿದೇಶಗಳಲ್ಲಿ ನಾನು ಗೆದ್ದಾಗ ಭಾರತ ಮತ್ತು ನನಗೆ ಲಭಿಸುತ್ತಿದ್ದ ಗೌರವಗಳೇ ಸ್ಪೂರ್ತಿಯಾಗುತ್ತಿದ್ದವು. ಬಾಲ್ಯದಿಂದಲೂ ಅನುಭವಿಸಿದ್ದ ನೋವು, ಅವಮಾನ, ಹತಾಶೆಗಳಿಗೆ ಮುಲಾಮು ಹಚ್ಚಿದಂತೆ ಆಗುತ್ತಿತ್ತು. ದೇಶದ ಋಣ ತೀರಿಸಿದ ತೃಪ್ತಿಯಾಗುತ್ತಿತ್ತು. ಇವತ್ತು ಬಹಳಷ್ಟು ಯುವಕರು ಹಣಕ್ಕಾಗಿ ಕ್ರೀಡೆಗೆ ಬರುತ್ತಾರೆ. ಅನೈತಿಕ ದಾರಿ ತುಳಿಯುತ್ತಾರೆ. ದೇಶಕ್ಕಾಗಿ ಆಡದ, ದುಡಿಯದ ಜೀವನ ವೃರ್ಥ‘ ಎಂಬ ದೃಢ ನಿಲುವು ಅವರದ್ದಾಗಿತ್ತು.

ಕೆಲವು ವರ್ಷಗಳ ಹಿಂದೆ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತರತ್ನ ನೀಡಿದ್ದನ್ನು ವಿರೋಧಿಸಿದ್ದರು.

‘ವಿಶ್ವದ ಎಲ್ಲ ದೇಶಗಳು ಸ್ಪರ್ಧಿಸುವ ಒಲಿಂಪಿಕ್ಸ್‌ನಲ್ಲಿ ಧ್ಯಾನಚಂದ್ ಮಾಡಿರುವ ಸಾಧನೆಗೆ ಸರಿಸಾಟಿ ಯಾವುದೂ ಇಲ್ಲ. ಅವರಿಗೆ ಕೊಡಬೇಕಿತ್ತು. 8–10 ದೇಶಗಳಲ್ಲಿ ಮಾತ್ರ ನಡೆಯುವ ಕ್ರಿಕೆಟ್‌ಗೆ ಏಕೆ ಈ ಗೌರವ. ದಿನಬೆಳಗಾದರೆ ಮ್ಯಾಚ್ ಫಿಕ್ಸಿಂಗ್ ಸುದ್ದಿಗಳೇ ಇರುತ್ತವೆ‘ ಎಂದು ರಾಷ್ಟ್ರೀಯ ವಾಹಿನಿಯ ಸಂದರ್ಶನದಲ್ಲಿಯೇ ಗುಡುಗಿದ್ದರು.

91ರ ವಯಸ್ಸಿನಲ್ಲಿಯೂ ಜಾಗಿಂಗ್ ಮಾಡುತ್ತಾ, ಗಾಲ್ಫ್ ಆಡಿಕೊಂಡು ಆರೋಗ್ಯವಂತರಾಗಿ ಓಡಾಡಿಕೊಂಡಿದ್ದವರು ಮಿಲ್ಖಾಸಿಂಗ್. ಹದಿಹರೆಯದ ಯುವಕರೂ ನಾಚುವಂತಹ ಲವಲವಿಕೆ ಅವರದ್ದಾಗಿತ್ತು. ಆದರೆ, ಕೋವಿಡ್‌ ಮಹಾಮಾರಿಯೊಂದಿಗಿನ ಸೆಣಸಾಟದಲ್ಲಿ ಬಸವಳಿದರು. ಅದರೊಂದಿಗೆ ಕ್ರೀಡಾಲೋಕದ ಸುವರ್ಣ ಯುಗವೊಂದು ಮುಗಿದಂತಾಗಿದೆ.

ಮುಂದಿನ ತಿಂಗಳು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳಲ್ಲಿ ಯಾರಾದರೂ ಪದಕ ಜಯಿಸಿ ಮಿಲ್ಖಾಸಿಂಗ್ ಕೊನೆಯ ಆಸೆ ಈಡೆರಿಸುವರೇ ಕಾದು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.