ಜನವರಿ 13ರ ರಾತ್ರಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣ ಕಚಾಕಚ್ ಭರ್ತಿಯಾಗಿತ್ತು. ಪ್ರೇಕ್ಷಕರ ಬೆಂಬಲದ ‘ಟಾನಿಕ್’ ಸಿಗುತ್ತಿದ್ದಂತೆ ಬೆಂಗಳೂರು ರ‍್ಯಾಪ್ಟರ್ಸ್ ತಂಡದ ಆಟಗಾರರ ಹುಮ್ಮಸ್ಸು ಇಮ್ಮಡಿಯಾಯಿತು. ಅವರ ಆಟದಲ್ಲಿ ಅದು ಪ್ರತಿಫಲನಗೊಂಡಿತು. ಭರ್ಜರಿ ಆಟವಾಡಿದ ರ‍್ಯಾಪ್ಟರ್ಸ್ ಆಟಗಾರರು ಪ್ರಶಸ್ತಿ ಎತ್ತಿ ಹಿಡಿದು ಕೇಕೆ ಹಾಕಿದರು.
ಇದು, ಈ ಬಾರಿಯ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ (ಪಿಬಿಎಲ್) ಫೈನಲ್ ಪಂದ್ಯದ ಸಂದರ್ಭದಲ್ಲಿ ಕಂಡುಬಂದ ದೃಶ್ಯ. ಪಿಬಿಎಲ್ ಆರಂಭವಾದಾಗಿನಿಂದ ಬೇರೆ ಬೇರೆ ಹೆಸರುಗಳಲ್ಲಿ ಪಾಲ್ಗೊಳ್ಳುತ್ತಿರುವ ಬೆಂಗಳೂರು ತಂಡ ಕಳೆದ ಬಾರಿ ರ‍್ಯಾಪ್ಟರ್ಸ್ ಹೆಸರಿನಲ್ಲಿ ರನ್ನರ್ ಅಪ್ ಆಗಿತ್ತು. ಈ ಬಾರಿ ಚೊಚ್ಚಲ ಪ್ರಶಸ್ತಿ ಗೆದ್ದು ಸಂಭ್ರಮಿಸಿತು.
ಇದಕ್ಕೂ ಒಂದು ವಾರ ಹಿಂದೆ ಬೆಂಗಳೂರು ತಂಡ (ಬೆಂಗಳೂರು ಬುಲ್ಸ್) ಈ ಬಾರಿಯ ಪ್ರೊ ಕಬಡ್ಡಿ ಲೀಗ್‌ನ ಪ್ರಶಸ್ತಿ ಗೆದ್ದಿತ್ತು. ಮುಂಬೈನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಗುಜರಾತ್ ಫಾರ್ಚೂನ್‌ಜೈಂಟ್ಸ್ ಎದುರು ದಿಟ್ಟ ಹೋರಾಟ ನಡೆಸಿದ ತಂಡ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತ್ತು. ಪ್ರೊ ಕಬಡ್ಡಿಯ ಎರಡನೇ ಆವೃತ್ತಿಯಲ್ಲಿ ಕೇವಲ ಆರು ಪಾಯಿಂಟ್‌ಗಳಿಂದ ಪ್ರಶಸ್ತಿ ಕೈತಪ್ಪಿದ್ದ ಬೆಂಗಳೂರು ತಂಡ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟು ನಡೆಸಿದ ಪ್ರಯತ್ನಗಳಿಗೆ ಈ ಬಾರಿ ಫಲ ಸಿಕ್ಕಿತು.
ಈ ಸಾಧನೆಗಳನ್ನು ನೋಡಿದರೆ ಬೆಂಗಳೂರು, ಲೀಗ್‌ಗಳನ್ನು ಗೆಲ್ಲುವ ನಗರವಾಗುತ್ತಿದೆ ಎಂಬ ಕುತೂಹಲಕಾರಿ ಅಂಶ ಗಮನಕ್ಕೆ ಬರುತ್ತದೆ. ಈ ಬಾರಿಯ ಐಪಿಎಲ್ ಮಾರ್ಚ್‌ನಲ್ಲಿ ಆರಂಭವಾಗಲಿದೆ. ಈ ಲೀಗ್ ಆರಂಭವಾಗುವ ಹೊತ್ತಿನಲ್ಲಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿ ಮುಕ್ತಾಯದ ಹಂತ ತಲುಪಲಿದೆ. ಲೀಗ್‌ನ ಮೊದಲ ಹಂತದಲ್ಲಿ ಬೆಂಗಳೂರು ತಂಡವಾದ ಬಿಎಫ್‌ಸಿ ಅಜೇಯವಾಗಿ ಪಾಯಿಂಟ್ ಪಟ್ಟಿಯ ಮೊದಲ ಸ್ಥಾನದಲ್ಲಿದೆ. ಕಳೆದ ಬಾರಿ ಫೈನಲ್‌ನಲ್ಲಿ ಮುಗ್ಗರಿಸಿದ ತಂಡ ಈ ಬಾರಿ ಪ್ರಶಸ್ತಿ ಗೆಲ್ಲುವತ್ತ ಹೆಜ್ಜೆ ಹಾಕಿದೆ.
ಉತ್ತಮ ವಾತಾವರಣ, ಉತ್ಸಾಹಿ ಪ್ರೇಕ್ಷಕರು
ಕ್ರೀಡಾ ಅಭ್ಯಾಸ ಮತ್ತು ಸ್ಪರ್ಧೆಗೆ ಪೂರಕ ವಾತಾವರಣ, ಅತ್ಯುತ್ತಮ ಸೌಲಭ್ಯಗಳು ಬೆಂಗಳೂರಿನಲ್ಲಿ ಇವೆ. ಇದೆಲ್ಲದರ ಜೊತೆಯಲ್ಲಿ ಇಲ್ಲಿನ ಜನರ ಕ್ರೀಡಾ ಪ್ರೇಮವೂ ಅಪ್ರತಿಮ. ಇಂಥ ಬೆಂಬಲಿಗರು ಸಿಗುವುದಕ್ಕೆ ಪುಣ್ಯ ಮಾಡಿರಬೇಕು ಎಂದು ಸುನಿಲ್ ಚೆಟ್ರಿ ಅವರಂಥ ದಿಗ್ಗಜ ಆಟಗಾರರು ಪದೇ ಪದೇ ಹೇಳುತ್ತಿರುತ್ತಾರೆ.ಭಾರತದಲ್ಲಿ ಮುಂಬೈ, ದೆಹಲಿ, ಚೆನ್ನೈ, ಹೈದರಾಬಾದ್ ಮುಂತಾದ ಕೆಲವೇ ನಗರಗಳು ವಿವಿಧ ಕ್ರೀಡೆಗಳಿಗೆ ಆಶ್ರಯ ನೀಡುತ್ತಿವೆ. ಈ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಹೆಚ್ಚು ಕ್ರೀಡಾ ಚಟುವಟಿಕೆ ನಡೆಯುತ್ತದೆ. ಆದ್ದರಿಂದ ಮುಂದೆಯೂ ಲೀಗ್‌ಗಳನ್ನು ಗೆಲ್ಲುವ ನಗರವಾಗಿ ಬೆಂಗಳೂರು ಹೆಸರು ಮಾಡಲಿದೆ ಎಂಬುದು ಕ್ರೀಡಾ ಪ್ರಿಯರ ಅಂಬೋಣ.
ಪ್ರೊ ಕಬಡ್ಡಿ ಏಳು–ಬೀಳು
ಪ್ರೊ ಕಬಡ್ಡಿ ಮೊದಲ ಆವೃತ್ತಿಯಲ್ಲಿ ಮೂರನೇ ಸ್ಥಾನದ ಪ್ಲೇ ಆಫ್ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ಬುಲ್ಸ್ 29–22ರಿಂದ ಗೆದ್ದಿತ್ತು. ಸೆಮಿಫೈನಲ್‌ನಲ್ಲಿ ಯು ಮುಂಬಾ ವಿರುದ್ಧ 27–23ರಿಂದ ಸೋತಿತ್ತು. ಎರಡನೇ ಆವೃತ್ತಿಯ ಫೈನಲ್‌ನಲ್ಲಿ ಯು ಮುಂಬಾಗೆ 36–30ರಲ್ಲಿ ಮಣಿದಿತ್ತು. ಸೆಮಿಫೈನಲ್‌ನಲ್ಲಿ ತೆಲುಗು ಟೈಟನ್ಸ್ ಎದುರು 39–38ರಿಂದ ಜಯ ಸಾಧಿಸಿತ್ತು. ಮೂರನೇ ಆವೃತ್ತಿಯಲ್ಲಿ ಏಳನೇ ಸ್ಥಾನ ಗಳಿಸಿದ್ದ ತಂಡ 14 ಪಂದ್ಯಗಳಲ್ಲಿ ಕೇವಲ ಎರಡನ್ನು ಮಾತ್ರ ಗೆದ್ದಿತ್ತು. ನಾಲ್ಕನೇ ಆವೃತ್ತಿಯಲ್ಲಿ ಆರನೇ ಸ್ಥಾನ ಗಳಿಸಿದ್ದ ಬುಲ್ಸ್ 14 ಪಂದ್ಯಗಳಲ್ಲಿ ಐದನ್ನು ಗೆದ್ದಿತ್ತು. ಕಳೆದ ಬಾರಿ ’ಬಿ’ ವಲಯದಲ್ಲಿ ನಾಲ್ಕನೇ ಸ್ಥಾನ ಗಳಿಸಿ ನಾಕೌಟ್ ಹಂತ ಪ್ರವೇಶಿಸಲು ವಿಫಲವಾಗಿತ್ತು. 22 ಪಂದ್ಯಗಳಲ್ಲಿ ಎಂಟನ್ನು ಗೆದ್ದ ತಂಡ 57 ಪಾಯಿಂಟ್ ಕಲೆ ಹಾಕಿತ್ತು.
ಐಪಿಎಲ್: ಕೂದಲೆಳೆ ಅಂತರದಲ್ಲಿ ಹಿನ್ನಡೆ
ಐಪಿಎಲ್‌ನಲ್ಲಿ ಆರ್‌ಸಿಬಿ ಸಾಕಷ್ಟು ಏಳು–ಬೀಳು ಕಂಡಿದೆ. 2009ರಲ್ಲಿ, ಎರಡನೇ ಆವೃತ್ತಿಯ ಫೈನಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು ಆರು ರನ್‌ಗಳಿಂದ ಸೋತಿತ್ತು. 2011ರ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು 58 ರನ್‌ಗಳ ಸೋಲು ಅನುಭವಿಸಿತ್ತು. 2016ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ಗೆ ಎಂಟು ರನ್‌ಗಳಿಂದ ಮಣಿದಿತ್ತು.
2008ರ ಮೊದಲ ಆವೃತ್ತಿಯಲ್ಲಿ ಏಳನೇ ಸ್ಥಾನದಲ್ಲಿದ್ದ ತಂಡ ಮುಂದಿನ ವರ್ಷ ಉತ್ತಮ ಸಾಧನೆ ಮಾಡಿತು. 2010ರಲ್ಲಿ ಮೂರನೇ ಸ್ಥಾನಕ್ಕೆ ಕುಸಿದರೂ ಮೇಲೆದ್ದು 2011ರಲ್ಲಿ ಮತ್ತೆ ರನ್ನರ್ ಅಪ್ ಆಯಿತು. ಮುಂದಿನ ಮೂರು ವರ್ಷ ತಂಡ ಸಂಕಷ್ಟಕ್ಕೆ ಸಿಲುಕಿತು. 2012 ಮತ್ತು 2013ರಲ್ಲಿ ಐದನೇ ಸ್ಥಾನ ಗಳಿಸಿದ ತಂಡ 2014ರಲ್ಲಿ ಏಳನೇ ಸ್ಥಾನಕ್ಕೆ ಇಳಿಯಿತು. 2015 ಮತ್ತು 2016ರಲ್ಲಿ ಕ್ರಮವಾಗಿ ಮೂರು ಮತ್ತು ಎರಡನೇ ಸ್ಥಾನಕ್ಕೇರಿದರೂ 2017ರಲ್ಲಿ ಗಳಿಸಿದ್ದು ಎಂಟನೇ ಸ್ಥಾನ. ಕಳೆದ ಬಾರಿ ಆರನೇ ಸ್ಥಾನ.
ಐಎಸ್‌ಎಲ್‌ನಲ್ಲಿ ಅಮೋಘ ಸಾಧನೆ
ಐಎಸ್‌ಎಲ್‌ಗೆ ಬೆಂಗಳೂರು ಫುಟ್‌ಬಾಲ್ ಕ್ಲಬ್ ಕಳೆದ ವರ್ಷವಷ್ಟೇ ಪದಾರ್ಪಣೆ ಮಾಡಿತ್ತು. ಮೊದಲ ವರ್ಷವೇ ಉತ್ತಮ ಸಾಮರ್ಥ್ಯ ತೋರಿದ ತಂಡ ಪ್ರಶಸ್ತಿ ಸುತ್ತು ಪ್ರವೇಶಿಸಿತ್ತು. ಬೆಂಗಳೂರಿನಲ್ಲಿ ನಡೆಯುವ ಐಎಸ್‌ಎಲ್‌ನ ಪ್ರತಿ ಪಂದ್ಯದ ಸಂದರ್ಭದಲ್ಲೂ ಕಂಠೀರವ ಕ್ರೀಡಾಂಗಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಫುಟ್‌ಬಾಲ್ ಪ್ರಿಯರು ಗ್ಯಾಲರಿಗಳು ಮತ್ತು ವಿವಿಧ ಸ್ಟ್ಯಾಂಡ್‌ಗಳಿಂದ ಕೂಗುವ ಘೋಷಣೆಗಳು ಆಟಗಾರರನ್ನು ಹುರಿದುಂಬಿಸುತ್ತವೆ. ಕಳೆದ ಬಾರಿ ಫೈನಲ್‌ನಲ್ಲಿ ಚೆನ್ನೈಯಿನ್ ಎಫ್‌ಸಿಗೆ ಮಣಿದ ಬಿಎಫ್‌ಸಿ ಈ ಬಾರಿ ಅಜೇಯವಾಗಿದೆ. 11 ಪಂದ್ಯಗಳಲ್ಲಿ ಎಂಟನ್ನು ಗೆದ್ದು ಮೂರನ್ನು ಡ್ರಾ ಮಾಡಿಕೊಂಡಿದೆ.
ಪಿಬಿಎಲ್: ಸಂಘಟಿತ ಸಾಮರ್ಥ್ಯ
ಪಿಬಿಎಲ್‌ನಲ್ಲಿ ಬೆಂಗಳೂರು ತಂಡ ಸಂಘಟಿತ ಹೋರಾಟದ ಮೂಲಕ ಗಮನ ಸೆಳೆದಿದೆ. ಕರ್ನಾಟಕದ ಆಟಗಾರರ ಕೊರತೆಯ ನಡುವೆಯೂ ನೆರೆ ರಾಜ್ಯ ಮತ್ತು ವಿದೇಶಿ ಆಟಗಾರರ ಬಲವನ್ನು ಸರಿಯಾಗಿ ಬಳಸಿಕೊಂಡು ತಂಡ ಮುಂದುವರಿದಿದೆ. ಈ ಹಿಂದೆ ತಂಡದಲ್ಲಿ ಕರ್ನಾಟಕದ ಅಶ್ವಿನಿ ಪೊನ್ನಪ್ಪ ಆಡಿದ್ದರು. ಈ ಬಾರಿ ನಮ್ಮ ರಾಜ್ಯದ ಮಿಥುನ್ ಮಂಜುನಾಥ್ ಒಬ್ಬರೇ ತಂಡದಲ್ಲಿದ್ದವರು. ಕಿದಂಬಿ ಶ್ರೀಕಾಂತ್ ಅವರ ನೇತೃತ್ವದಲ್ಲಿ ತಂಡಕ್ಕೆ ತರಬೇತಿ ನೀಡಿದವರು ರಾಜ್ಯದವರೇ ಆದ ಅರವಿಂದ ಭಟ್.
ಗ್ರಾಮೀಣ ಪ್ರತಿಭೆಗಳು ಬರಲಿ
ಕ್ರೀಡೆಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧ ಇದೆ. ಇಲ್ಲಿ ಅಭ್ಯಾಸ ಮಾಡಿದ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಲಭವಾಗಿ ಸಾಧನೆ ಮಾಡುತ್ತಾರೆ. ಇಲ್ಲಿ ಉತ್ತಮ ಕ್ರೀಡಾಪಟುಗಳನ್ನು ಜನರು ಗುರುತಿಸುತ್ತಾರೆ. ಇಲ್ಲಿನ ವಾತಾವರಣವಂತೂ ಕ್ರೀಡೆಗೆ ಹೇಳಿ ಮಾಡಿಸಿದಂತಿದೆ. ಶ್ರಮ ವಹಿಸಿ ಅಭ್ಯಾಸ ಮಾಡುವವರನ್ನು ಈ ನಗರ ಎಂದೂ ಕೈ ಬಿಟ್ಟಿಲ್ಲ.
ಬೆಂಗಳೂರಿಗೂ ಕ್ರೀಡೆಗೂ ಇರುವ ನಂಟಿನ ಹಿನ್ನೆಲೆಯಲ್ಲಿ ಲೀಗ್‌ಗಳಲ್ಲಿ ಇಲ್ಲಿನ ಹುಡುಗರಿಗೆ ಹೆಚ್ಚು ಅವಕಾಶ ಸಿಗಬೇಕು. ಹೆಸರಾಂತ ಆಟಗಾರರನ್ನು ಫ್ರಾಂಚೈಸ್‌ಗಳು ಹರಾಜಿನಲ್ಲಿ ಬೇಗ ಕೊಂಡುಕೊಳ್ಳುತ್ತವೆ. ಆದ್ದರಿಂದ ಹೊಸ ಹುಡುಗರಿಗೆ ಹೆಸರು ಮಾಡಲು ಸಾಕಷ್ಟು ಅವಕಾಶಗಳಿವೆ. ಗ್ರಾಮೀಣ ಪ್ರತಿಭೆಗಳು ಇಲ್ಲಿಗೆ ಬಂದು ಅಭ್ಯಾಸ ಮಾಡಲು ಮುಂದಾಗಬೇಕು. ಅವರಿಗಾಗಿ ವಿವಿಧ ಲೀಗ್‌ಗಳ ಬಾಗಿಲು ತೆರೆದಿದೆ.
–ಬಿ.ಸಿ.ರಮೇಶ್, ಬೆಂಗಳೂರು ಬುಲ್ಸ್ ಕೋಚ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.