ಪ್ಯಾರಿಸ್: ಅಮೆರಿಕದ ಈಜುತಾರೆ ಕೇಟ್ ಲೆಡೆಕಿ ಒಲಿಂಪಿಕ್ಸ್‌ನ 800 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡರು. ಇದರೊಂದಿಗೆ ಅವರು ಒಲಿಂಪಿಕ್ಸ್‌ನಲ್ಲಿ 9ನೇ ಸ್ವರ್ಣ ಗೆದ್ದು ದಾಖಲೆ ನಿರ್ಮಿಸಿದರು.
27 ವರ್ಷ ವಯಸ್ಸಿನ ಲೆಡೆಕಿ ಸತತ ನಾಲ್ಕನೇ ಒಲಿಂಪಿಕ್ಸ್‌ನಲ್ಲಿ 800 ಮೀ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡರು. ಈ ಮೂಲಕ ಯಾವುದೇ ಕ್ರೀಡೆಯಲ್ಲಿ ಮಹಿಳಾ ಅಥ್ಲೀಟ್ ಗಳಿಸಿದ ಗರಿಷ್ಠ ಚಿನ್ನದ (9) ಪದಕಗಳ ದಾಖಲೆಯನ್ನು ಸರಿಗಟ್ಟಿದರು.
1956-1964ರ ಅವಧಿಯಲ್ಲಿ ರಷ್ಯಾದ ಜಿಮ್ನಾಸ್ಟ್ ಲಾರಿಸಾ ಲ್ಯಾಟಿನಿನಾ ಅವರು ಒಲಿಂಪಿಕ್ಸ್‌ನಲ್ಲಿ ಒಂಬತ್ತು ಚಿನ್ನ ಗೆದ್ದು ದಾಖಲೆ ಬರೆದಿದ್ದರು.
2012ರಲ್ಲಿ ಲಂಡನ್ ಒಲಿಂಪಿಕ್ಸ್‌ನ 800 ಮೀಟರ್ ಫ್ರೀಸ್ಟೈಲ್‌ನಲ್ಲಿ 15 ವರ್ಷದಲ್ಲೇ ಲೆಡೆಕಿ ಮೊದಲ ಚಿನ್ನ ಗೆದಿದ್ದರು. ನಂತರ ರಿಯೊ ಕೂಟದಲ್ಲಿ 4 ಚಿನ್ನ ಸೇರಿದಂತೆ ಐದು ಪದಕ ಮತ್ತು ಟೋಕಿಯೊದಲ್ಲಿ ಎರಡು ಚಿನ್ನ ಸೇರಿದಂತೆ ನಾಲ್ಕು ಪದಕ ಜಯಿಸಿದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಲೆಡೆಕಿ ಅವರಿಗೆ ಇದು ನಾಲ್ಕನೇ ಪದಕವಾಗಿದೆ. ಈ ಮೊದಲು 1500 ಮೀಟರ್ ಫ್ರೀಸ್ಟೈಲ್‌ನಲ್ಲಿ ಚಿನ್ನ, 4x200 ಮೀಟರ್ ಫ್ರೀಸ್ಟೈಲ್ ರಿಲೆನಲ್ಲಿ ಬೆಳ್ಳಿ ಮತ್ತು 400 ಮೀಟರ್ ಫ್ರೀಸ್ಟೈಲ್‌ನಲ್ಲಿ ಕಂಚು ಗೆದಿದ್ದರು. ಒಲಿಂಪಿಕ್ಸ್‌ಗೆ ಅವರ ಪದಕಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
ಶನಿವಾರ ನಡೆದ ಫೈನಲ್‌ನಲ್ಲಿ ಲೆಡೆಕಿ 8 ನಿಮಿಷ 11.04 ಸೆಕೆಂಟ್‌ನಲ್ಲಿ ಗುರಿ ತಲುಪಿದರು. ಆಸ್ಟ್ರೇಲಿಯಾದ ಅರಿಯಾನ್ ಟಿಟ್ಮಸ್ (8 ನಿ.12.29ಸೆ) ಮತ್ತು ಅಮೆರಿಕದ ಪೈಗೆ ಮ್ಯಾಡೆನ್ (8 ನಿ. 13ಸೆ) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಸಮ್ಮರ್‌ಗೆ ಹ್ಯಾಟ್ರಿಕ್ ಚಿನ್ನ: ಕೆನಡಾದ ಉದಯೋನ್ಮುಖ ಈಜುತಾರೆ ಸಮ್ಮರ್ ಮೆಕಿಂತೋಷ್ ಅವರು ಪ್ಯಾರಿಸ್‌ನಲ್ಲಿ ಹ್ಯಾಟ್ರಿಕ್ ಚಿನ್ನದ ಪದಕಗಳನ್ನು ಗೆದ್ದರು.
17 ವರ್ಷ ವಯಸ್ಸಿನ ಸಮ್ಮರ್ ಅವರು 200 ಮೀಟರ್ ಮಿಡ್ಲೆ, 400 ಮೀಟರ್ ಮಿಡ್ಲೆ ಮತ್ತು 200 ಮೀಟರ್ ಬಟರ್‌ಪ್ಲೈ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.