ADVERTISEMENT

Pv Web Exclusive: ‘ಪುಟ್ಟ ಗ್ರ್ಯಾಂಡ್‌ಮಾಸ್ಟರ್‌’ಗಳ ಸಾಲಿಗೆ ಸೇರಿದ ಲಿಯೋನ್‌...

ನಾಗೇಶ್ ಶೆಣೈ ಪಿ.
Published 1 ಜನವರಿ 2021, 11:58 IST
Last Updated 1 ಜನವರಿ 2021, 11:58 IST
ಲಿಯೋನ್‌ ಮೆಂಡೊನ್ಕಾ (ಚಿತ್ರ ಕೃಪೆ- ಟ್ವಿಟರ್ @ChessbaseIndia)
ಲಿಯೋನ್‌ ಮೆಂಡೊನ್ಕಾ (ಚಿತ್ರ ಕೃಪೆ- ಟ್ವಿಟರ್ @ChessbaseIndia)   

ಭಾರತದ ಕಿರಿಯ ಚೆಸ್‌ ಗ್ರ್ಯಾಂಡ್‌ಮಾಸ್ಟರ್‌ಗಳ ಪಟ್ಟಿಗೆ ಮತ್ತೊಬ್ಬನ ಸೇರ್ಪಡೆಯಾಗಿದೆ. ಗೋವೆಯ ಹುಡುಗ ಲಿಯೋನ್‌ ಮೆಂಡೊನ್ಕಾ ದೇಶದ 67ನೇ ಗ್ರ್ಯಾಂಡ್‌ಮಾಸ್ಟರ್‌ ಗೌರವಕ್ಕೆ ಪಾತ್ರನಾಗಿದ್ದಾನೆ. ಕೋವಿಡ್‌ ಸಾಂಕ್ರಾಮಿಕದ ನಡುವೆಯೂ 2020 ಭಾರತದ ಚೆಸ್‌ ಪಾಲಿಗೆ ಸಕಾರಾತ್ಮಕವಾಗಿದ್ದು, ಒಳ್ಳೆಯ ಸುದ್ದಿಯೊಡನೆ ಕೊನೆಗೊಂಡಿತು.

ಕೇವಲ 14 ವರ್ಷ 9 ತಿಂಗಳು 17 ದಿನಗಳಿರುವಾಗ ‘ಜಿಎಂ’ ಪಟ್ಟ ಪಡೆದ ಲಿಯೋನ್‌ ಈ ‘ಟೈಟಲ್‌’ ಗೌರವಕ್ಕೆ ಪಾತ್ರರಾದ ಗೋವೆಯ ಎರಡನೇ ಆಟಗಾರ. 2017ರಲ್ಲಿ ಅನುರಾಗ್‌ ಮಾಮ್ಹಲ್‌ ಈ ಪುಟ್ಟ ರಾಜ್ಯದ ಮೊದಲ ಗ್ರ್ಯಾಂಡ್‌ಮಾಸ್ಟರ್‌ ಎನಿಸಿದ್ದರು.

ನಿಹಾಲ್ ಸರೀನ್‌ (ಗ್ರ್ಯಾಂಡ್‌ಮಾಸ್ಟರ್‌ ಆದಾಗ 14 ವರ್ಷ 10 ತಿಂಗಳು), ರಮೇಶಬಾಬು ಪ್ರಗ್ನಾನಂದ (12 ವರ್ಷ 10 ತಿಂಗಳು 13 ದಿನ), ಡಿ.ಗುಕೇಶ್‌, ರೋನಕ್‌ ಸಾಧ್ವಾನಿ (13 ವರ್ಷ 9 ತಿಂಗಳು, 28 ದಿನ), ಅರ್ಜುನ್‌ ಎರಿಗೈಸಿ (14 ವರ್ಷ 11 ತಿಂಗಳು 12 ದಿನ).... ಇವರೆಲ್ಲಾ 15 ವರ್ಷ ದಾಟುವುದರೊಳಗೆ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಪಡೆದಾಗಿತ್ತು. ಕಳೆದ ಮೂರು ವರ್ಷಗಳ ಅವಧಿಯಲ್ಲೇ 16 ಆಟಗಾರರು ಗ್ರ್ಯಾಂಡ್‌ಮಾಸ್ಟರ್‌ಗಳಾಗಿರುವುದು ಚೆಸ್‌ನಲ್ಲಿ ಭಾರತ ಸಾಧಿಸುತ್ತಿರುವ ಏಳಿಗೆಗೆ ಕನ್ನಡಿ. ಇವರಲ್ಲಿ ಬಹುತೇಕರು ಹೈಸ್ಕೂಲ್‌ ಹಂತದಲ್ಲಿದ್ದಾರೆ ಎಂಬುದು ಗಮನಾರ್ಹ ವಿಷಯ.

ADVERTISEMENT

ಲಿಯೋನ್‌ ಮತ್ತು ಅವರ ತಂದೆ ಲಿಂಡನ್‌, ಯುರೋಪಿಯನ್‌ ಟೂರ್ನಿಗಳಲ್ಲಿ ಆಡಿ ಭಾರತಕ್ಕೆ ಮರಳಲು ಸಜ್ಜಾಗಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಎಲ್ಲೆಡೆ ಪ್ರಯಾಣನಿರ್ಬಂಧ ಹೇರಿದ ಪರಿಣಾಮ ಅವರು ಯುರೋಪಿನಲ್ಲೇ ಉಳಿಯಬೇಕಾಯಿತು. ಇದನ್ನು ಅವರು ಚೆಸ್‌ ಆಟದ ಸುಧಾರಣೆಗೆ ಬಳಸಿದ್ದು ವ್ಯರ್ಥವಾಗಲಿಲ್ಲ.

ಎಂಜಿನಿಯರ್‌ ಆಗಿದ್ದ ಲಿಂಡನ್‌, ಆರು ವರ್ಷಗಳ ಹಿಂದೆ ಮಗನ ಚೆಸ್‌ ಸಲುವಾಗಿ ಕೆಲಸ ಬಿಟ್ಟುಬಿಟ್ಟಿದ್ದರು. ತಾಯಿ ಗೋವಾ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯೆ. ಹೀಗಾಗಿ ಟೂರ್ನಿಗಳಲ್ಲಿ ಆಡುವಾಗ ಮಗನಿಗೆ ತಂದೆಯೇ ಆಡುಗೆ ಸಿದ್ಧಪಡಿಸಿಕೊಡುತ್ತಿದ್ದರು. ಮಾರ್ಚ್‌ನಿಂದ ಡಿಸೆಂಬರ್‌ವರೆಗೆ ಒಂಬತ್ತು ತಿಂಗಳ ಅವಧಿಯಲ್ಲಿ ಯುರೋಪಿನ ಬೇರೆ ಬೇರೆ ರಾಷ್ಟ್ರಗಳಲ್ಲಿ ಒಟ್ಟು 16 ಟೂರ್ನಿಗಳಲ್ಲಿ ಆಡಿದ ಲಿಯೋನ್‌ 2,452 ರೇಟಿಂಗ್‌ ಪಾಯಿಂಟ್‌ಗಳಿಗೆ ಮತ್ತೆ 92 ಸೇರಿಸುವಲ್ಲಿ ಯಶಸ್ವಿಯೂ ಆದ.

ಮೂರು ತಿಂಗಳಲ್ಲಿ ಮೂರು ಜಿಎಂ ನಾರ್ಮ್‌ಗಳನ್ನು ಪೂರೈಸಿದ್ದು ಕಡಿಮೆ ಸಾಧನೆಯೇನಲ್ಲ. ಇದರಲ್ಲಿ ಕೊನೆಯದನ್ನು ಡಿಸೆಂಬರ್‌ 30ರಂದು ಇಟಲಿಯ ಬಸೇನೊ ಡೆಲ್‌ ಗ್ರಾಪಾದಲ್ಲಿ ನಡೆದ ವೆರ್ಗನಿ ಟೂರ್ನಿಯಲ್ಲಿ ಸಾಧಿಸಿದ. ಲಿಯೋನ್‌ ಈಗ 2,544 ರೇಟಿಂಗ್ ಹೊಂದಿದ್ದಾನೆ.

ಚೆಸ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್‌ ಆಗುವುದು ಆಟಗಾರರ ಕನಸು. ಈ ಗುರಿ ಈಡೇರಿಸಬೇಕಾದರೆ ಆಟಗಾರನೊಬ್ಬ ಮೂರು ಜಿಎಂ ನಾರ್ಮ್‌ಗಳ ಜೊತೆ 2,500 ರೇಟಿಂಗ್‌ ಮೈಲಿಗಲ್ಲು ದಾಟಬೇಕಾಗುತ್ತದೆ.

ಭಾರತದ ಗ್ರ್ಯಾಂಡ್‌ಮಾಸ್ಟರ್ ಆಟಗಾರರು: (ಹೆಸರು, ಜಿಎಂ ಆದ ವರ್ಷ, ರಾಜ್ಯ)

1. ವಿಶ್ವನಾಥನ್‌ ಆನಂದ್‌ (1988; ತಮಿಳುನಾಡು) 2. ದಿವ್ಯೇಂದು ಬರುವಾ (1991, ಪಶ್ಚಿಮ ಬಂಗಾಳ) 3. ಪ್ರವೀಣ್ ತಿಪ್ಸೆ (1997, ಮಹಾರಾಷ್ಟ್ರ) 4. ಅಭಿಜಿತ್‌ ಕುಂಟೆ (2000, ಮಹಾರಾಷ್ಟ್ರ) 5. ಕೃಷ್ಣನ್‌ ಶಶಿಕಿರಣ್‌ (2000, ತಮಿಳುನಾಡು), 6. ಪೆಂಟ್ಯಾಲ ಹರಿಕೃಷ್ಣ (2001, ಆಂಧ್ರ ಪ್ರದೇಶ), 7. ಕೊನೇರು ಹಂಪಿ (2002, ಆಂಧ್ರಪ್ರದೇಶ), 8. ಸೂರ್ಯಶೇಖರ ಗಂಗೂಲಿ (2003, ಪಶ್ಚಿಮ ಬಂಗಾಳ), 9. ಸಂದೀಪನ್‌ ಚಂದಾ (2003, ಪಶ್ಚಿಮ ಬಂಗಾಳ), 10. ಆರ್.ಬಿ.ರಮೇಶ್ (2004, ತಮಿಳುನಾಡು).

11. ತೇಜಸ್‌ ಬಾಕ್ರೆ (2004, ಗುಜರಾತ್‌), 12. ಪಂಚನಾಥನ್‌ ಮಗೇಶಚಂದ್ರನ್‌ (2006, ತಮಿಳುನಾಡು), 13. ದೀಪನ್‌ ಚಕ್ರವರ್ತಿ (2006, ತಮಿಳುನಾಡು), 14. ನೀಲೋತ್ಪಲ್‌ ದಾಸ್‌ (2006, ಪಶ್ಚಿಮ ಬಂಗಾಳ), 15. ಪರಿಮಾರ್ಜುನ ನೇಗಿ (2006, ದೆಹಲಿ), 16. ಗೀತ್ ನಾರಾಯಣ ಗೋಪಾಲ್‌ (2007, ಕೇರಳ), 17. ಅಭಿಜಿತ್‌ ಗುಪ್ತಾ (2008, ರಾಜಸ್ಥಾನ), 18. ಎಸ್‌.ಅರುಣ್‌ ಪ್ರಸಾದ್ (2008, ತಮಿಳುನಾಡು), 19. ಸುಂದರರಾಜನ್‌ ಕಿಡಂಬಿ (2009, ತಮಿಳುನಾಡು), 20. ರಾಜಾ ರಾಮ್‌ ಲಕ್ಷ್ಮಣ್‌ (2009, ತಮಿಳುನಾಡು).

21. ಶ್ರೀರಾಮ್‌ ಝಾ (2010, ದೆಹಲಿ), 22. ದೀಪ್‌ಸೇನ್‌ ಗುಪ್ತಾ (2010, ಪಶ್ಚಿಮ ಬಂಗಾಳ), 23, ಭಾಸ್ಕರನ್‌ ಅಧಿಬನ್‌ (2010, ತಮಿಳುನಾಡು), 24. ಎಸ್‌.ಪಿ.ಸೇತುರಾಮನ್‌ (2011, ತಮಿಳುನಾಡು), 25. ದ್ರೋಣವಲ್ಲಿ ಹಾರಿಕ (2011, ಆಂಧ್ರ ಪ್ರದೇಶ), 26. ಎಂ.ಆರ್‌.ಲಲಿತ್‌ಬಾಬು (2012, ಆಂಧ್ರ ಪ್ರದೇಶ), 27. ವೈಭವ್‌ ಸೂರಿ (2012, ದೆಹಲಿ), 28. ಎಂ.ಆರ್‌.ವೆಂಕಟೇಶ್ (2012, ತಮಿಳುನಾಡು), 29. ಸಹಜ್‌ ಗ್ರೋವರ್‌ (2012, ದೆಹಲಿ), 30. ವಿದಿತ್‌ ಸಂತೋಷ್‌ ಗುಜರಾತಿ (2013, ಮಹಾರಾಷ್ಟ್ರ).

31. ಶ್ಯಾಮಸುಂದರ್ (2013, ತಮಿಳುನಾಡು), 32. ಅಕ್ಷಯರಾಜ್‌ ಕೋರೆ (2013, ಮಹಾರಾಷ್ಟ್ರ), 33. ವಿಷ್ಣು ಪ್ರಸನ್ನ (2013, ತಮಿಳುನಾಡು), 34. ದೇವಾಶಿಷ್‌ ದಾಸ್‌ (2013, ಒಡಿಶಾ), 35. ಸಪ್ತರ್ಷಿರಾಯ್‌ ಚೌಧುರಿ (2013, ಪಶ್ಚಿ್ಮ ಬಂಗಾಳ), 36. ಅಂಕಿತ್‌ ರಾಜಪಾರಾ (2014, ಗುಜರಾತ್‌), 37. ಅರವಿಂದ ಚಿದಂಬರಂ (2015, ತಮಿಳುನಾಡು), 38. ಕಾರ್ತಿಕೇಯನ್‌ ಮುರಳಿ (2015, ತಮಿಳುನಾಡು), 39. ಅಶ್ವಿನ್‌ ಜಯರಾಂ (2015, ತಮಿಳುನಾಡು), 40. ಸ್ವಪ್ನಿಲ್‌ ಧೋಪಡೆ (2015, ಮಹಾರಾಷ್ಟ್ರ).

41. ಎಸ್‌.ಎಲ್.ನಾರಾಯಣನ್‌ (2015, ಕೇರಳ), 42. ಶಾರ್ದೂಲ್‌ ಗಾಗರೆ (2016, ಮಹಾರಾಷ್ಟ್ರ), 43. ದೀಪ್ತಾಯನ ಘೋಷ್‌ (2016, ಪಶ್ಚಿಮ ಬಂಗಾಳ), 44. ಕೆ.ಪ್ರಿಯದರ್ಶನ್‌ (2016, ತಮಿಳುನಾಡು), 45. ಆರ್ಯನ್‌ ಚೋಪ್ರಾ (2017, ದೆಹಲಿ), 46. ಶ್ರೀನಾಥ್‌ ನಾರಾಯಣನ್‌ (2017, ತಮಿಳುನಾಡು), 47. ಹಿಮಾಂಶು ಶರ್ಮಾ (2017, ಹರಿಯಾಣ), 48. ಅನುರಾಗ್‌ ಮಾಮ್ಹಲ್‌ (2017, ಗೋವಾ), 49. ಅಭಿಮನ್ಯು ಪುರಾಣಿಕ್‌ (2017, ಮಹಾರಾಷ್ಟ್ರ), 50. ಎಂ.ಎಸ್‌.ತೇಜಕುಮಾರ್‌ (2017, ಕರ್ನಾಟಕ).

51) ಸಪ್ತರ್ಷಿ ರಾಯ್‌ (2018, ಪಶ್ಚಿಮ ಬಂಗಾಳ), 52. ಆರ್‌.ಪ್ರಗ್ನಾನಂದ (2018, ತಮಿಳುನಾಡು), 53. ನಿಹಾಲ್‌ ಸರೀನ್‌ (2018, ಕೇರಳ), 54. ಅರ್ಜುನ್‌ ಎರಿಗೈಸಿ (2018, ತೆಲಂಗಾಣ), 55. ಕಾರ್ತಿಕ್‌ ವೆಂಕಟರಮಣನ್‌ (2018, ತಮಿಳುನಾಡು), 56. ಹರ್ಷ ಭರತಕೋಟಿ (2018, ತೆಲಂಗಾಣ), 57. ಪಿ. ಕಾರ್ತಿಕೇಯನ್‌ (2018,ತಮಿಳುನಾಡು), 58. ಜಿ.ಎ.ಸ್ಟ್ಯಾನಿ (2018, ಕರ್ನಾಟಕ), 59. ಎನ್‌.ಆರ್‌.ವಿಶಾಖ (2019, ತಮಿಳುನಾಡು), 60. ಡಿ.ಗುಕೇಶ್‌ (2019, ತಮಿಳುನಾಡು).

61. ಪಿ.ಇನಿಯನ್‌ (2019, ತಮಿಳುನಾಡು), 62. ಸ್ವಯಾಂಶು ಮಿಶ್ರಾ (2019, ಒಡಿಶಾ), 63. ಗಿರೀಶ್‌ ಕೌಶಿಕ್‌ (2019, ಕರ್ನಾಟಕ), 64. ಪ್ರೀತು ಗುಪ್ತಾ (2019, ದೆಹಲಿ) 65. ರೋನಕ್‌ ಸಾಧ್ವಾನಿ (2020, ಮಹಾರಾಷ್ಟ್ರ), 66, ಜಿ.ಆಕಾಶ್‌ (2020, ತಮಿಳುನಾಡು), 67 ಲಿಯೋನ್‌ ಮೆಂಡೋನ್ಕಾ (2020, ಗೋವಾ).

ಜಿಎಂ ಆಟಗಾರರ ರಾಜ್ಯವಾರು ಸಂಖ್ಯೆ:ತಮಿಳುನಾಡು 24, ಪಶ್ಚಿಮ ಬಂಗಾಳ 8, ಮಹಾರಾಷ್ಟ್ರ 8, ದೆಹಲಿ 6, ಆಂಧ್ರಪ್ರದೇಶ 4, ಕೇರಳ 3, ತೆಲಂಗಾಣ 3, ಕರ್ನಾಟಕ 3, ಒಡಿಶಾ 2, ಗುಜರಾತ್‌ 2, ಗೋವಾ 2, ರಾಜಸ್ಥಾನ 1, ಹರಿಯಾಣ 1.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.