ಚೆನ್ನೈ: ಅಮೆರಿಕದ ಲೆವೊನ್ ಅರೋನಿಯನ್ ಅವರು ಫ್ರಾನ್ಸ್‌ನ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಅವರನ್ನು ಮಣಿಸಿದರು. ಇದರಿಂದ ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಚೆಸ್ ಟೂರ್ನಿಯ ಐದನೇ ಸುತ್ತಿನ ಬಳಿಕ ಅರೋನಿಯನ್, ಅಗ್ರಸ್ಥಾನದಲ್ಲಿರುವ ಅರ್ಜುನ್ ಇರಿಗೇಶಿ ಬೆನ್ನತ್ತಿದ್ದು, ಅರ್ಧ ಪಾಯಿಂಟ್ ಅಂತರದಿಂದ ಎರಡನೇ ಸ್ಥಾನದಲ್ಲಿದ್ದಾರೆ.
ಭಾರತದ ಚೆಸ್ ತಾರೆ ಅರ್ಜುನ್ ಅವರು ಶನಿವಾರ ಇನ್ನೊಂದು ಪಂದ್ಯದಲ್ಲಿ ಇರಾನ್‌ನ ಪರ್ಹಾಮ್ ಮಘಸೂಡ್ಲೂ ಜೊತೆ ‘ಡ್ರಾ’ಕ್ಕೆ ಒಪ್ಪಬೇಕಾಯಿತು. ಅರ್ಜುನ್ ನಾಲ್ಕು ಪಾಯಿಂಟ್ಸ್ ಸಂಗ್ರಹಿಸಿದರೆ, ಅರೋನಿಯನ್ 3.5 ಪಾಯಿಂಟ್ಸ್ ಕಲೆಹಾಕಿದ್ದಾರೆ.
ಈ ಟೂರ್ನಿಯ ಮಾಸ್ಟರ್ಸ್ ವಿಭಾಗ ಪ್ರಬಲ ಆಟಗಾರರನ್ನು ಹೊಂದಿದೆ. ಸರಾಸರಿ ರೇಟಿಂಗ್ 2729. ಮೊದಲ ಬಾರಿ ಚಾಲೆಂಜರ್ ವಿಭಾಗವನ್ನು ಸೇರ್ಪಡೆ ಮಾಡಲಾಗಿದ್ದು, ಇದರಲ್ಲಿ ಭಾರತದ ಭರವಸೆಯ ಆಟಗಾರರಿಗೆ ಅವಕಾಶ ಮಾಡಿಕೊಡಲಾಗಿದೆ.
ವಿದಿತ್ ಗುಜರಾತಿ 57 ನಡೆಗಳ ನಂತರ ಇರಾನ್‌ನ ಅಮಿನ್ ತಬಾತಬೇಯಿ ಜೊತೆ ‘ಡ್ರಾ’ಕ್ಕೆ ಸಹಿಹಾಕಿದರು. ಅರವಿಂದ ಚಿದಂಬರಂ ಮತ್ತು ಸರ್ಬಿಯಾದ ಅಲೆಕ್ಸಿ ಸರನ ಕೂಡ ಪಾಯಿಂಟ್ ಹಂಚಿಕೊಂಡರು.
ಚಾಲೆಂಜರ್ಸ್ ವಿಭಾಗದಲ್ಲಿ ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ಗಳಾದ ವೈಶಾಲಿ ಆರ್. ಮತ್ತು ದ್ರೋಣವಲ್ಲಿ ಹಾರಿಕಾ ತಮ್ಮ ಪಂದ್ಯ ಡ್ರಾ ಮಾಡಿಕೊಂಡರು. ಸತತ ನಾಲ್ಕು ಜಯಗಳಿಸಿದ್ದ ವಿ.ಪ್ರಣವ್ ಅವರು ಐದನೇ ಸುತ್ತಿನಲ್ಲಿ ಸ್ವದೇಶದ ರೌನಕ್ ಸಾಧ್ವಾನಿ ಜೊತೆ 39 ನಡೆಗಳ ನಂತರ ಡ್ರಾ ಮಾಡಿಕೊಳ್ಳಬೇಕಾಯಿತು. ಮುರಳಿ ಕಾರ್ತಿಕೇಯನ್ ಸ್ವದೇಶದ ಅಭಿಮನ್ಯು ಪುರಾಣಿಕ್ ಅವರನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.