ADVERTISEMENT

ಪೆಡಲಿಂಗ್ ಚಾಂಪಿಯನ್‌ಷಿಪ್‌: ಆಕಾಶ್‌ ಜೂನಿಯರ್‌ ವಿಭಾಗದ ಚಾಂಪಿಯನ್

ಅಂತರರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲಿಂಗ್ ಚಾಂಪಿಯನ್‌ಷಿಪ್‌: ರವಿ ಪೂಜಾರ ರನ್ನರ್ ಅಪ್‌

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 15:56 IST
Last Updated 8 ಮಾರ್ಚ್ 2024, 15:56 IST
ಜೂನಿಯರ್ ವಿಭಾಗದ ಚಾಂಪಿಯನ್ ಪಟ್ಟ ಅಲಂಕರಿಸಿದ ಆಕಾಶ್ ಪೂಜಾರ ಅವರನ್ನು ಗೆಳೆಯರು ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡಿದರು
ಜೂನಿಯರ್ ವಿಭಾಗದ ಚಾಂಪಿಯನ್ ಪಟ್ಟ ಅಲಂಕರಿಸಿದ ಆಕಾಶ್ ಪೂಜಾರ ಅವರನ್ನು ಗೆಳೆಯರು ಹೆಗಲ ಮೇಲೆ ಹೊತ್ತುಕೊಂಡು ಕುಣಿದಾಡಿದರು   

ಮಂಗಳೂರು: ಅಮೋಘ ಸಾಮರ್ಥ್ಯ ತೋರಿದ ಸ್ಥಳೀಯ ಸರ್ಫರ್‌ ಆಕಾಶ್‌ ಪೂಜಾರ ಅವರು ಅಸೋಸಿಯೇಷನ್ ಆಫ್‌ ಪೆಡಲ್‌ ಸರ್ಫ್ ಪ್ರೊಫೆಷನಲ್ಸ್‌ (ಎಎಪಿ) ಆಶ್ರಯದ ಅಂತರರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪೆಡಲಿಂಗ್ ಚಾಂಪಿಯನ್‌ಷಿಪ್‌ನ ಜೂನಿಯರ್ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಸಸಿಹಿತ್ಲು ಬೀಚ್‌ನಲ್ಲಿ ಶುಕ್ರವಾರ ಆರಂಭಗೊಂಡ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರಿನ ರವಿ ಪೂಜಾರ ರನ್ನರ್ ಅಪ್ ಪ್ರಶಸ್ತಿ ಗಳಿಸಿದರೆ ದಕ್ಷಿಣ ಕೊರಿಯಾದ ಜಿಹು ಹುವಾಂಗ್‌ ಮೂರನೇ ಸ್ಥಾನ ಗಳಿಸಿದರು.

ನೆತ್ತಿ ಸುಡುತ್ತಿದ್ದ ಸೂರ್ಯನ ಝಳದ ನಡುವೆ ನಡೆದ ಸ್ಪರ್ಧೆಯಲ್ಲಿ ಆಕಾಶ್ ಮತ್ತು ಸೋದರ ಸಂಬಂಧಿ ರವಿ ನಡುವೆ ತೀವ್ರ ಪೈಪೋಟಿ ಕಂಡುಬಂತು. ಅಂತಿಮ ಕ್ಷಣಗಳಲ್ಲಿ ಉತ್ತಮ ವೇಗ ಪಡೆದುಕೊಂಡ ಆಕಾಶ್‌ 43 ನಿಮಿಷ 4 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು, ರವಿ ಸ್ಪರ್ಧೆ ಮುಗಿಸಲು 47 ನಿಮಿಷ 24 ಸೆಕೆಂಡು ತೆಗೆದುಕೊಂಡರು. ಕೊರಿಯಾ ಅಥ್ಲೀಟ್‌ 52 ನಿಮಿಷ 52 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. 

ADVERTISEMENT

ಪ್ರಶಸ್ತಿ ಗೆದ್ದ ನಂತರ ಮಾತನಾಡಿದ 10ನೇ ತರಗತಿ ವಿದ್ಯಾರ್ಥಿ ಆಕಾಶ್‌ ‘ಕಲಿಕೆಯ ಒತ್ತಡದ ನಡುವೆಯೂ ಈ ಚಾಂಪಿಯನ್‌ಷಿಪ್‌ಗಾಗಿ 6 ತಿಂಗಳಿಂದ ಕಠಿಣ ಪರಿಶ್ರಮಪಟ್ಟಿದ್ದೆ. ಅದಕ್ಕೆ ತಕ್ಕ ಪ್ರತಿಫಲ ಇವತ್ತು ಸಿಕ್ಕಿರುವುದು ಖುಷಿ ತಂದಿದೆ’ ಎಂದರು. ಶನಿವಾರ ನಡೆಯುವ ಪುರುಷರ ವಿಭಾಗದ ಸ್ಪರ್ಧೆಯಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.  

‘ಮೊದಲ ಬಾರಿ ಭಾರತಕ್ಕೆ ಬಂದಿದ್ದೇನೆ. ಕೊರಿಯಾಗೆ ಹೋಲಿಸಿದರೆ ಭಾರತದಲ್ಲಿ ಸವಾಲಿನ ವಾತಾವರಣ ಇದೆ. ಆದರೂ ಸ್ಪರ್ಧೆಯಲ್ಲಿ ಖುಷಿಯಿಂದ ಭಾಗವಹಿಸಲು ಸಾಧ್ಯವಾಗಿದೆ. ಅಲೆಗಳು ಉತ್ತಮವಾಗಿದ್ದವು’ ಎಂದು ಜಿಹು ಹುವಾಂಗ್‌ ಅಭಿಪ್ರಾಯಪಟ್ಟರು.

ಜೂನಿಯರ್ ವಿಭಾಗದಲ್ಲಿ ರನ್ನರ್‌ ಅಪ್‌ ಆದ  ರವಿ ಪೂಜಾರ ಗೆಳೆಯರೊಂದಿಗೆ ಸಂಭ್ರಮಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.