ADVERTISEMENT

ಮಕಾವು ಓಪನ್ ಬ್ಯಾಡ್ಮಿಂಟನ್‌: ಶ್ರೀಕಾಂತ್‌, ಆಯುಷ್‌ಗೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 14:02 IST
Last Updated 25 ಸೆಪ್ಟೆಂಬರ್ 2024, 14:02 IST
<div class="paragraphs"><p>ಬ್ಯಾಡ್ಮಿಂಟನ್‌ ತಾರೆ ಶ್ರೀಕಾಂತ್‌</p></div>

ಬ್ಯಾಡ್ಮಿಂಟನ್‌ ತಾರೆ ಶ್ರೀಕಾಂತ್‌

   

ಮಕಾವು (ಪಿಟಿಐ): ಭಾರತದ ಪ್ರಮುಖ ಆಟಗಾರ ಕಿದಂಬಿ ಶ್ರೀಕಾಂತ್ ಅವರು ಸ್ವದೇಶದ ಆಯುಷ್‌ ಶೆಟ್ಟಿ ಮತ್ತು ತಸ್ನಿಮ್‌ ಮಿರ್‌ ಜೊತೆ ಮಕಾವು ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಪುರುಷರ ಸಿಂಗಲ್ಸ್ ಎರಡನೇ ಸುತ್ತಿಗೆ ಮುನ್ನಡೆದರು.

2021ರ ವಿಶ್ವ ಚಾಂಪಿಯನ್‌ಷಿಪ್‌ ಬೆಳ್ಳಿ ವಿಜೇತರಾದ ಶ್ರೀಕಾಂತ್‌, ಮೇ ತಿಂಗಳಲ್ಲಿ ಗಾಯಾಳಾದ ನಂತರ ಭಾಗವಹಿಸುತ್ತಿರುವ ಮೊದಲ ಟೂರ್ನಿ ಇದಾಗಿದೆ. ಇಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಶ್ರೀಕಾಂತ್‌ ಮೊದಲ ಸುತ್ತಿನಲ್ಲಿ 21–14, 21–15 ರಿಂದ ಇಸ್ರೇಲ್‌ನ ಡಾನಿಲ್‌ ಡುವೊವೆಂಕೊ ಅವರನ್ನು ಸೋಲಿಸಿದರು.

ADVERTISEMENT

2023ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಆಯುಷ್‌ ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ 21–13, 21–5 ರಿಂದ ಸ್ವದೇಶದ ಆಲಾಪ್ ಮಿಶ್ರಾ ಮೇಲೆ ಜಯಗಳಿಸಲು ಅಷ್ಟೇನೂ ಕಷ್ಟಪಡಲಿಲ್ಲ.

ವಿಶ್ವ ಜೂನಿಯರ್ ಮಾಜಿ ಅಗ್ರಮಾನ್ಯ ಆಟಗಾರ್ತಿ ತಸ್ನಿಮ್ 15–21, 21–18, 22–20 ರಲ್ಲಿ ದೇವಿಕಾ ಶಿಹಾಗ್ ಮೇಲೆ ಜಯಗಳಿಸಿ ಮಹಿಳೆಯರ ಸಿಂಗಲ್ಸ್ ಎರಡನೇ ಸುತ್ತಿಗೆ ತಲುಪಿದರು.

ಎರಡನೇ ಸುತ್ತಿನಲ್ಲಿ ಭಾರತೀಯ ಆಟಗಾರರ ವ್ಯವಹಾರವಾಗಿರುವ ಪಂದ್ಯದಲ್ಲಿ ಶ್ರೀಕಾಂತ್‌, ಆಯುಷ್‌ ವಿರುದ್ಧ ಆಡಲಿದ್ದಾರೆ. ತಸ್ನಿಮ್‌, ನಾಲ್ಕನೇ ಶ್ರೇಯಾಂಕದ ಟೊಮೊಕಾ ಮಿಯಾಝಾಕಿ ಅವರನ್ನು ಎದುರಿಸಲಿದ್ದಾರೆ. ಜಪಾನ್‌ನ ಟೊಮೊಕಾ 2022ರ ವಿಶ್ವ ಜೂನಿಯರ್ ಚಾಂಪಿಯನ್‌ ಆಗಿದ್ದವರು.

ಮಿಶ್ರ ಡಬಲ್ಸ್‌ನಲ್ಲಿ ಭಾರತದ ಸತಿ–ಪತಿ ಜೋಡಿ ಸುಮೀತ‌್ ರೆಡ್ಡಿ– ಎನ್‌.ಸಿಕ್ಕಿ ರೆಡ್ಡಿ ಜೋಡಿ ತೀವ್ರ ಹೋರಾಟದ ನಂತರ ಮಲೇಷ್ಯಾದ ಕ್ವಾಲಿಫೈರ್‌ಗಳಾದ ಲೂ ಬಿಂಗ್ ಕುನ್‌– ಹೊ ಲೊ ಯಿ ಜೋಡಿಯನ್ನು ಮಣಿಸಿತು. ಭಾರತದ ಜೋಡಿ ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ವಾಂಗ್ ತಿಯೆನ್‌ ಸಿ–ಲಿಮ್‌ ಚಿಯು ಸಿಯೆನ್ ಜೋಡಿಯನ್ನು ಎದುರಿಸಲಿದೆ.

ಕೆಲವರ ನಿರ್ಗಮನ:

ಭಾರತದ ತಾನ್ಯಾ ಹೇಮಂತ್‌, ಅನುಪಮಾ ಉಪಾಧ್ಯಾಯ, ಇಶಾರಾಣಿ ಬರೂವಾ, ಚಿರಾಗ್‌ ಸೇನ್ ಮತ್ತು ಎಸ್‌.ಶಂಕರ್ ಮುತ್ತುಸ್ವಾಮಿ ಸುಬ್ರಮಣಿಯನ್, ಸಮೀರ್ ವರ್ಮಾ ಮತ್ತು ಮಿಥುನ್ ಮಂಜುನಾಥ್ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ತಾನ್ಯಾ 18–21, 19–21 ರಿಂದ ತೈವಾನ್‌ ಆಟಗಾರ್ತಿ ಲಿಯಾಂಗ್ ತಿಂಗ್ ಯು ಅವರಿಗೆ ಮಣಿದರು.

ಪುರುಷರ ಸಿಂಗಲ್ಸ್‌ನಲ್ಲಿ ಚಿರಾಗ್‌ ಸೇನ್ 12–21, 17–21 ರಲ್ಲಿ ಹಾಂಗ್‌ಕಾಂಗ್‌ನ ಎನ್ಜಿ ಕಾ ಲಾಂಗ್ ಆ್ಯಂಗಸ್ ಅವರಿಗೆ ಮಣಿದರೆ, ಸಮೀರ್‌ ವರ್ಮಾ 21–18, 11–21, 13–21 ರಲ್ಲಿ ಚೀನಾ ಝೆಂಗ್‌ ಷಿಂಗ್ ಎದುರು ಸೋಲನುಭವಿಸಿದರು. ಮಿಥುನ್ ಮಂಜುನಾಥ್ 12–21, 15–21 ರಲ್ಲಿ ಚೀನಾ ತೈಪಿಯ ಹುವಾಂಗ್‌ ಯು ಕೈ ಎದುರು ಸೋತರು.

ಕಳೆದ ವರ್ಷ ವಿಶ್ವ ಜೂನಿಯರ್ ಚಾಂಪಿನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದ ಶಂಕರ್‌ 14–21, 2–10, 12–21 ರಲ್ಲಿ ಥಾಯ್ಲೆಂಡ್‌ನ ಪಣಿತ್‌ಚಾಫೊನ್‌ ತೀರಾರ್‌ಸಕುಲ್ ಆಟದೆದುರು ನಿರುತ್ತರರಾದರು.

ಮಿಶ್ರ ಡಬಲ್ಸ್‌ನಲ್ಲಿ ರೋಹನ್ ಕಪೂರ್‌– ರುತ್ವಿಕಾ ಶಿವಾಣಿ ಗದ್ದೆ 21–23, 22–24 ರಲ್ಲಿ ಎಂಟನೇ ಶ್ರೇಯಾಂಕದ ರಿತ್ತನಾಪಕ್ ಔಪ್ತಾಂಗ್‌– ಜೆನಿಚಾ ಸುದ್‌ಸೈಪ್ರಪಾರತ್‌ ಎದುರು ಸೋಲನ್ನುಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.