ಬೆಳಗಾವಿ: ಏಷ್ಯನ್ ಕ್ರೀಡಾಕೂಟದ ಕುರಾಶ್ ಆಟದಲ್ಲಿ ಕಂಚಿನ ಪದಕ ಗೆದ್ದ ಬೆಳಗಾವಿ ಜಿಲ್ಲೆಯ ತುರಮುರಿ ಗ್ರಾಮದ ಮಲಪ್ರಭಾ ಜಾಧವ್ ಅವರ ಭಾವಚಿತ್ರವಿರುವ ಅಂಚೆ ಚೀಟಿ ಮುದ್ರಿಸುವ ಮೂಲಕ ಇಲ್ಲಿನ ಅಂಚೆ ಇಲಾಖೆ ಗೌರವ ಅರ್ಪಿಸಿದೆ.
‘ಮೈ ಸ್ಟ್ಯಾಂಪ್’ ಯೋಜನೆಯಡಿ ಇಲಾಖೆಯು ಸ್ವಯಂ ಪ್ರೇರಿತವಾಗಿ ಮಲಪ್ರಭಾ ಅವರ ಅಂಚೆ ಚೀಟಿಯನ್ನು ಮುದ್ರಿಸಿದೆ. ಇಂಡೋನೇಷ್ಯಾದ ಜಕಾರ್ತಾದಲ್ಲಿ ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ಮಲಪ್ರಭಾ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು. ಆ ಕ್ಷಣದ ಭಾವಚಿತ್ರವನ್ನು ಮುದ್ರಿಸಲಾಗಿದೆ. ಇದು ₹ 5 ಮುಖಬೆಲೆ ಹೊಂದಿದೆ.
ಇತ್ತೀಚೆಗೆ ಮಲಪ್ರಭಾ ಅವರನ್ನು ಸ್ವಗ್ರಾಮದಲ್ಲಿ ಸನ್ಮಾನಿಸಿದ ಅಂಚೆ ಇಲಾಖೆಯ ಅಧಿಕಾರಿಗಳು, ಈ ಅಂಚೆ ಚೀಟಿಗಳನ್ನು ಅವರಿಗೆ ನೀಡಿದ್ದರು.
ಏನಿದು ‘ಮೈ ಸ್ಟ್ಯಾಂಪ್ ಯೋಜನೆ?’:
ತಮ್ಮ ಭಾವಚಿತ್ರ ಅಥವಾ ತಮಗೆ ಇಷ್ಟವಾದವರ ಭಾವಚಿತ್ರವುಳ್ಳ ಅಂಚೆ ಚೀಟಿ ಮುದ್ರಿಸುವಂತಹ ಯೋಜನೆ ಇದಾಗಿದೆ. ಯಾರು ಬೇಕಾದವರೂ ಇಂತಹ ಅಂಚೆ ಚೀಟಿಗಳನ್ನು ಮಾಡಿಸಿಕೊಳ್ಳಬಹುದಾಗಿದೆ. ಒಂದು ಶೀಟ್‌ಗಾಗಿ ₹ 300 ಶುಲ್ಕವಿದೆ. ಒಂದು ಶೀಟ್‌ನಲ್ಲಿ 12 ಅಂಚೆ ಚೀಟಿಗಳಿರುತ್ತವೆ. ₹ 5 ಮುಖಬೆಲೆ ಹೊಂದಿರುತ್ತವೆ. ಇವುಗಳನ್ನು ವ್ಯಾವಹಾರಿಕವಾಗಿಯೂ ಬಳಸಬಹುದಾಗಿದೆ ಎಂದು ಇಲ್ಲಿನ ಕೇಂದ್ರ ಅಂಚೆ ಕಚೇರಿಯ ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಶ್ರೀನಿವಾಸ ಚವಾಣ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.