ಚಾಂಗ್‌ಝೌ: ಭಾರತದ ಯುವ ಆಟಗಾರ್ತಿ ಮಾಳವಿಕಾ ಬನ್ಸೋಡ್ ಅವರು ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ತಮಗಿಂತ ಉನ್ನತ ಕ್ರಮಾಂಕದ ಕ್ರಿಸ್ಟಿ ಗಿಲ್ಮೊರ್ ಅವರನ್ನು ಮೂರು ಗೇಮ್‌ಗಳ ಹೋರಾಟದಲ್ಲಿ ಮಣಿಸಿ, ಕ್ವಾರ್ಟರ್ ಫೈನಲ್ ತಲುಪಿದರು.
ಗುರುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ವಿಶ್ವದ 43ನೇ ಕ್ರಮಾಂಕದ ಮಾಳವಿಕಾ ಅವರು 21-17, 19-21, 21-16ರಿಂದ 25ನೇ ರ‍್ಯಾಂಕಿಂಗ್‌ನ ಸ್ಕಾಟ್ಲೆಂಡ್‌ನ ಗಿಲ್ಮೊರ್ ಅವರನ್ನು ಹಿಮ್ಮೆಟ್ಟಿಸಿದರು.
‘ಸೂಪರ್ 1000 ಟೂರ್ನಿಯಲ್ಲಿ ಇದೇ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದೇನೆ. ಬಹುದಿನದ ಕನಸು ಇಂದು ನನಸಾಗಿದೆ. ವೃತ್ತಿಜೀವನದಲ್ಲಿ ಇದು ನನ್ನ ದೊಡ್ಡ ಸಾಧನೆಯಾಗಿದೆ’ ಎಂದು ಪಂದ್ಯ ಗೆದ್ದ ಬಳಿಕ 22 ವರ್ಷ ವಯಸ್ಸಿನ ಮಾಳವಿಕಾ ಹೇಳಿದರು.
ನಾಗ್ಪುರದ ಮಾಳವಿಕಾ ಆರಂಭಿಕ ಸುತ್ತಿನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಏಳನೇ ಕ್ರಮಾಂಕದ ಇಂಡೊನೇಷ್ಯಾದ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿದ್ದರು.
ಟೂರ್ನಿಯಲ್ಲಿ ಉಳಿದಿರುವ ಏಕೈಕ ಭಾರತದ ಆಟಗಾರ್ತಿಯಾಗಿರುವ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್, ನಾಲ್ಕನೇ ಶ್ರೇಯಾಂಕದ ಅಕಾನೆ ಯಮಗುಚಿ ಅವರನ್ನು ಎದುರಿಸಲಿದ್ದಾರೆ.
ಈ ಹಿಂದಿನ ಎರಡು ಮುಖಾಮುಖಿಯಲ್ಲೂ ಮಾಳವಿಕಾ ಅವರನ್ನು ಜಪಾನಿನ ಆಟಗಾರ್ತಿ ಸೋಲಿಸಿದ್ದಾರೆ. ಉತ್ತಮ ಲಯದಲ್ಲಿರುವ ಭಾರತದ ತಾರೆ ಈ ಬಾರಿ ಪ್ರಬಲ ಸ್ಪರ್ಧೆಯೊಡ್ಡುವ ಛಲದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.