ADVERTISEMENT

ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ | ಗ್ರೆಗೋರಿಯಾಗೆ ಬನ್ಸೋಡ್‌ ಆಘಾತ

ಪಿಟಿಐ
Published 18 ಸೆಪ್ಟೆಂಬರ್ 2024, 13:04 IST
Last Updated 18 ಸೆಪ್ಟೆಂಬರ್ 2024, 13:04 IST
ಮಾಳವಿಕಾ ಬನ್ಸೋಡ್‌
ಮಾಳವಿಕಾ ಬನ್ಸೋಡ್‌    

ಚಾಂಗ್‌ಝೌ: ಭಾರತದ ಉದಯೋನ್ಮುಖ ತಾರೆ ಮಾಳವಿಕಾ ಬನ್ಸೋಡ್ ಅವರು ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ನ ಕಂಚಿನ ಪದಕ ವಿಜೇತೆ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ ಅವರಿಗೆ ಆಘಾತ ನೀಡಿದರು.

ಬುಧವಾರ ನಡೆದ 32ರ ಘಟ್ಟದ ಪಂದ್ಯದಲ್ಲಿ 22 ವರ್ಷ ವಯಸ್ಸಿನ ಬನ್ಸೋಡ್‌ 26-24, 21-19ರಿಂದ ಇಂಡೊನೇಷ್ಯಾದ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿ, ಎರಡನೇ ಸುತ್ತಿಗೆ ಮುನ್ನಡೆದರು.

ವಿಶ್ವದ ಏಳನೇ ಕ್ರಮಾಂಕದ ಗ್ರೆಗೋರಿಯಾ ಅವರನ್ನು 43ನೇ ರ‍್ಯಾಂಕ್‌ನ ಭಾರತದ ಆಟಗಾರ್ತಿ 46 ನಿಮಿಷದಲ್ಲಿ ಸದೆಬಡಿದರು. ಇದು ಬನ್ಸೋಡ್‌ ಅವರಿಗೆ ವೃತ್ತಿಜೀವನದಲ್ಲಿ ಬಹು ದೊಡ್ಡ ಗೆಲುವಾಗಿದೆ.

ADVERTISEMENT

ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬನ್ಸೋಡ್‌ ಎರಡು ಬಾರಿ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಕ್ರಿಸ್ಟಿ ಗಿಲ್ಮೊರ್ (ಸ್ಕಾಟ್ಲೆಂಡ್‌) ಅವರನ್ನು ಎದುರಿಸಲಿದ್ದಾರೆ. ಅವರು ಟೂರ್ನಿಯಲ್ಲಿ ಉಳಿದಿರುವ ಭಾರತದ ಏಕೈಕ ಭರವಸೆಯಾಗಿದ್ದಾರೆ. 

ಮಹಿಳಾ ಸಿಂಗಲ್ಸ್‌ನ ಆರಂಭಿಕ ಸುತ್ತಿನಲ್ಲೇ ಆಕರ್ಷಿ ಕಶ್ಯಪ್ ಮತ್ತು ಸಮಿಯಾ ಇಮಾದ್ ಫಾರೂಕಿ ನಿರಾಸೆ ಅನುಭವಿಸಿದರು. ಆಕರ್ಷಿ 15-21 19-21ರಿಂದ ಚೀನಾ ತೈಪೆಯ ಚಿಯು ಪಿನ್-ಚಿಯಾನ್ ವಿರುದ್ಧ; ಸಮಿಯಾ 9-21 7-21ರಿಂದ ಗಿಲ್ಮೊರ್ ವಿರುದ್ಧ ಪರಾಭವಗೊಂಡರು.

ಪುರುಷರ ಸಿಂಗಲ್ಸ್‌ನಲ್ಲಿ 40ನೇ ಕ್ರಮಾಂಕದ ಕಿರಣ್‌ ಜಾರ್ಜ್‌ 21–4, 10–21, 21–23ರಿಂದ ಜಪಾನ್‌ನ ಕೆಂಟಾ ನಿಶಿಮೊಟೊ ಅವರ ವಿರುದ್ಧ ಮುಗ್ಗರಿಸಿದರು.

ಮಹಿಳೆಯರ ಡಬಲ್ಸ್‌ನ ಮೊದಲ ಸುತ್ತಿನಲ್ಲಿ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್‌ ಜೋಡಿಯು 21-16, 15-21, 17-21ರಿಂದ ಚೀನಾ ತೈಪೆಯ ಹ್ಸೀಹ್ ಪೀ ಶಾನ್ ಮತ್ತು ಹಂಗ್ ಎನ್-ತ್ಸು ಅವರಿಗೆ ಶರಣಾಯಿತು. ಮಿಶ್ರ ಡಬಲ್ಸ್‌ನಲ್ಲಿ ಬಿ.ಸುಮೀತ್‌ ರೆಡ್ಡಿ ಮತ್ತು ಎನ್‌.ಸಿಕ್ಕಿ ರೆಡ್ಡಿ ಜೋಡಿಯೂ ಆರಂಭಿಕ ಸುತ್ತಿನಲ್ಲೇ ಹೊರಬಿತ್ತು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.