ನವದೆಹಲಿ:ವಿಶ್ವ ಮಹಿಳಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಪಿ.ವಿ. ಸಿಂಧು ಚಿನ್ನದ ಪದಕ ಗೆದಿದ್ದು ಭಾನುವಾರ. ಇದಕ್ಕಿಂತ ಒಂದು ದಿನ ಮುಂಚೆ ಅಂದರೆ ಶನಿವಾರ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಾನಸಿ ನಯನ ಜೋಷಿ ಚಿನ್ನದಗೆದ್ದಿರುವುದು ಹೆಚ್ಚು ಸುದ್ದಿಯಾಗಲೇ ಇಲ್ಲ.
ಇದನ್ನೂ ಓದಿ:ಪ್ಯಾರಾ ಬ್ಯಾಡ್ಮಿಂಟನ್ ವಿಜೇತರಿಗೆ ₹ 1.82 ಕೋಟಿ
ಆಗಸ್ಟ್ 24 ರಂದು ಸ್ವಿಜರ್‌ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಪಾರೂಲ್ ಪರ್ಮರ್ ಎಂಬವರನ್ನು ಮಣಿಸಿ ಮಾನಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.ವಿಶ್ವ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತದ 12 ಆಟಗಾರರು ಪದಕ ಗೆದ್ದಿದ್ದಾರೆ.
ಚಿನ್ನದ ಪದಕ ಗೆದ್ದ ನಂತರ ನಾನು ಇದನ್ನು ಗಿಟ್ಟಿಸಿಕೊಂಡೆ. ಅದಕ್ಕಾಗಿ ಪರಿಶ್ರಮ ಪಟ್ಟಿದ್ದೆ ಎಂದು ಟ್ವೀಟಿಸಿದ್ದರು ಮಾನಸಿ.
ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಪರ್ಮರ್ ಅವರ ಜತೆ ಹಲವು ಬಾರಿ ಮುಖಾಮುಖಿಯಾಗಿದ್ದರೂ ಅಲ್ಲಿ ಮಾನಸಿಗೆ ಗೆಲುವು ಒಲಿದು ಬರಲಿಲ್ಲ. ಆದರೆ ಫೈನಲ್ ಪಂದ್ಯದಲ್ಲಿ ಮಾನಸಿ,ಪರ್ಮರ್ ಅವರನ್ನು21-12, 21-7 ಅಂಕಗಳಿಂದ ಮಣಿಸಿ ಗೆಲುವು ತಮ್ಮದಾಗಿಸಿಕೊಂಡರು.
ಆರಂಭಿಕ ಪಂದ್ಯದಲ್ಲಿ ಮಾನಸಿಯ ಪ್ರದರ್ಶನ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಫೈನಲ್‌ಗೇರಿದ ಮಾನಸಿ, ಅಲ್ಲಿ ಚಿನ್ನ ಗೆಲ್ಲುವ ನಿರೀಕ್ಷೆಯನ್ನು ಹುಟ್ಟು ಹಾಕಿದ್ದರು.
ಗೋಪಿಚಂದ್ ಶಿಷ್ಯೆ
ಪಿ.ವಿ. ಸಿಂಧು ಅವರ ಗುರು ಆಗಿರುವಗೋಪಿಚಂದ್ ಅವರ ಶಿಷ್ಯೆ ಮಾನಸಿ. ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಪಡೆದ ತರಬೇತಿಯಿಂದಾಗಿಯೇಈ ಸಾಧನೆ ಮಾಡಲು ಸಾಧ್ಯವಾಯಿತು ಅಂತಾರೆ ಈ ಛಲಗಾತಿ.
ನನಗೆ ತುಂಬಾ ತರಬೇತಿ ನೀಡಲಾಗಿತ್ತು. ದಿನದಲ್ಲಿ ಮೂರು ಹೊತ್ತು ತರಬೇತಿ ನೀಡುತ್ತಿದ್ದರು. ನನ್ನ ಫಿಟ್‌ನೆಸ್ ಬಗ್ಗೆಹೆಚ್ಚು ಗಮನ ಕೊಡಲಾಗುತ್ತಿತ್ತು. ಅಂದರೆ ನಾನು ತೂಕ ಇಳಿಸಿ ಫಿಟ್ ಆಗಬೇಕಾಗಿತ್ತು. ನಾನು ಹೆಚ್ಚು ಕಾಲ ಜಿಮ್‌ನಲ್ಲಿ ಕಳೆದೆ. ವಾರದಲ್ಲಿ ಆರು ಬಾರಿ ಜಿಮ್‌ನಲ್ಲಿರುತ್ತಿದ್ದೆ. ನನ್ನ ಸ್ಟ್ರೋಕ್ಸ್ ಉತ್ತಮಗೊಳಿಸುವುದಕ್ಕಾಗಿ ಅಕಾಡೆಮಿಯಲ್ಲಿ ನಾನು ಪ್ರತಿ ದಿನ ಅಭ್ಯಾಸ ಮಾಡುತ್ತಿದ್ದೆ. ನನ್ನ ಆಟದಲ್ಲುಂಟಾದ ಪ್ರಗತಿ ಈಗಾಗಲೇ ಕಾಣಿಸುತ್ತಿದೆ ಎಂದು ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ ಜತೆ ಮಾತನಾಡಿದ ಮೂವತ್ತರ ಹರೆಯದ ಮಾನಸಿ ಹೇಳಿದ್ದಾರೆ.
2015ರಿಂದಲೇ ನಾನು ಪ್ಯಾರಾ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಬೇಕು ಎಂಬ ನನ್ನ ಕನಸು ಈಗ ನನಸಾಗಿದೆ. ಹೊಸ ಕೃತಕ ಕಾಲು ಬಳಸಿದ್ದರಿಂದ ಹೆಚ್ಚು ವೇಗವಾಗಿ ವರ್ಕೌಟ್ ಮಾಡಲು ಸಾಧ್ಯವಾಯಿತು. ಕಳೆದ ಐದು ವರ್ಷದಿಂದ ನಾನು ಬಳಸುತ್ತಿದ್ದ ಕೃತಕ ಕಾಲಿನಿಂದ ಅಷ್ಟೊಂದು ವೇಗವಾಗಿ ವರ್ಕೌಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಜರ್ಮನಿಯ ಟೆನ್ನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್‌ನ್ನು ನೋಡಿ ಬೆಳೆದವಳು ನಾನು. ಏಷ್ಯನ್ ಚಾಂಪಿಯನ್‌ಶಿಪ್ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂಬುದು ನನ್ನ ಆಸೆ.ಮುಂಬರುವ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ನಮ್ಮ ಆಟವನ್ನು ಪ್ಯಾರಾ ಸ್ಫೋರ್ಟ್ಸ್‌ನಲ್ಲಿ ಸೇರಿಸುತ್ತಾರೆ ಎಂಬ ನಿರೀಕ್ಷೆ ನನ್ನದು ಅಂತಾರೆ ಮಾನಸಿ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಈಕೆ2010ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದ ಸೋಮಿಯಾ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದಾರೆ. ಅಪಘಾತವೊಂದರಲ್ಲಿಎಡಕಾಲುಕಳೆದುಕೊಂಡರೂ ಬ್ಯಾಡ್ಮಿಂಟನ್ ಆಟ ಮುಂದುವರಿಸಿದ ಈಕೆ ಹಲವಾರು ಪದಕಗಳ್ನು ಗೆದ್ದಿದ್ದಾರೆ.
2015 ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಿಕ್ಸ್‌ಡ್ ಡಬಲ್ಸ್ ಪಂದ್ಯದಲ್ಲಿ ಮಾನಸಿ ಬೆಳ್ಳಿ ಪದಕ ಗೆದ್ದಿದ್ದರು. 2018 ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾ, ಜಕಾರ್ತದಲ್ಲಿ ನಡೆದ ಏಷ್ಯನ್ ಪಾರಾ ಗೇಮ್ಸ್‌ನಲ್ಲಿ ಅವರು ಕಂಚು ಪದಕ ಗೆದ್ದಿದ್ದರು.
ಸಿಂಧು ಗೆಲುವಿಗೆ ಟ್ವೀಟ್ ಅಭಿನಂದನೆ
ಪಿ.ವಿ.ಸಿಂಧು ವಿಶ್ವ ಚಾಂಪಿಯನ್‌ಶಿಪ್ ಗೆದ್ದಾಗ ಮಾನಸಿ ಜೋಷಿ ಟ್ವೀಟ್ ಮೂಲಕ ಸಿಂಧುಗೆ ಅಭಿನಂದನೆ ಸಲ್ಲಿಸಿದ್ದರು.
ಮಾನಸಿ ಜೋಷಿಯನ್ನು ಕಡೆಗಣಿಸಿದ್ದೇಕೆ?
ಸಿಂಧು ಗೆದ್ದಾಗ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದರು. ಆದರೆ ಸಿಂಧುವಿಗಿಂತ ಮುನ್ನ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ರಚಿಸಿದ ಮಾನಸಿ ಜೋಷಿಗೆ ಯಾಕೆ ಅಭಿನಂದನೆ ಸಲ್ಲಿಸಿಲ್ಲ ಎಂದು ಟ್ವೀಟಿಗರು ಮೋದಿಯನ್ನು ಪ್ರಶ್ನಿಸಿದ್ದರು. ಇದಾದನಂತರ ಮೋದಿ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಪದಕ ಗೆದ್ದವರಿಗೆ ಅಭಿನಂದನೆ ಸಲ್ಲಿಸಿ ಟ್ವೀಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.