ಉಪ್ಪಿನಂಗಡಿ (ದಕ್ಷಿಣ ಕನ್ನಡ): ಆತಿಥೇಯ ಮಂಗಳೂರು ವಿವಿ ಮತ್ತು ಹಾಲಿ ಚಾಂಪಿಯನ್ ತಮಿಳುನಾಡಿನ ಎಸ್‌ಆರ್‌ಎಂ ವಿಜ್ಞಾನ–ತಂತ್ರಜ್ಞಾನ ಸಂಸ್ಥೆ ತಂಡಗಳು ಮಂಗಳೂರು ವಿವಿ ಆಶ್ರಯದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ಪುರುಷರ ಅಖಿಲ ಭಾರತ ಅಂತರ ವಿವಿ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಲೀಗ್ ಹಂತ ಪ್ರವೇಶಿಸಿವೆ.
ಸೋಮವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಳಿಗಳನ್ನು ನೇರ ಗೇಮ್‌ಗಳಿಂದ ಮಣಿಸಿದ ಉಭಯ ತಂಡಗಳು ಲೀಗ್ ಹಂತದ ತಮ್ಮ ಮೊದಲ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಕಳೆದ ಬಾರಿಯ ರನ್ನರ್ ಅಪ್, ಚೆನ್ನೈನ ಬಿ.ಎಸ್. ಅಬ್ದುರಹಮಾನ್ ಕ್ರೆಸೆಂಟ್ ವಿಜ್ಞಾನ–ತಂತ್ರಜ್ಞಾನ ಸಂಸ್ಥೆ ಕ್ವಾರ್ಟರ್ ಫೈನಲ್‌ನಲ್ಲಿ ಮುಗ್ಗರಿಸಿ ಹೊರಬಿದ್ದಿತು.
ಕಳೆದ ಬಾರಿ ಮೂರನೇ ಸ್ಥಾನ ಗಳಿಸಿದ್ದರಿಂದ ಮಂಗಳೂರು ವಿವಿಗೆ ನೇರವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಆಡುವ ಅವಕಾಶ ಲಭಿಸಿತ್ತು. ಬೆಳಿಗ್ಗೆ ನಡೆದ ಎಂಟರ ಘಟ್ಟದ ಹಣಾಹಣಿಯಲ್ಲಿ ತಮಿಳುನಾಡಿನ ಚಿದಂಬರಂನ ಅಣ್ಣಾಮಲೈ ವಿವಿ ವಿರುದ್ಧ ತಂಡ ಅಮೋಘ ಜಯ ಸಾಧಿಸಿತು. ನಾಕೌಟ್ ಹಂತದ ಎರಡೂ ಪಂದ್ಯಗಳಲ್ಲಿ ಏಕಪಕ್ಷೀಯ ಜಯ ಸಾಧಿಸಿದ್ದ ಅಣ್ಣಾಮಲೈ ತಂಡವನ್ನು 35–21, 35–30ರಲ್ಲಿ ಮಂಗಳೂರು ವಿವಿ ಆಟಗಾರರು ಮಣಿಸಿದರು. ಈ ಮೂಲಕ ಒಟ್ಟಾರೆ 11ನೇ ಬಾರಿ ಲೀಗ್ ಪ್ರವೇಶಿಸಿದ ಸಾಧನೆ ಮಾಡಿದರು. ಎಸ್‌ಆರ್‌ಎಂ ಸಂಸ್ಥೆ ಕೊಯಮತ್ತೂರಿನ ಭಾರತಿಯಾರ್ ವಿವಿಯನ್ನು 37–35, 35–19ರಲ್ಲಿ ಮಣಿಸಿತು. ಆಂಧ್ರ ವಿವಿ ಮತ್ತು ಚೆನ್ನೈನ ಅಣ್ಣಾ ವಿವಿ ಕೂಡ ಲೀಗ್ ಹಂತಕ್ಕೆ ಲಗ್ಗೆ ಇರಿಸಿತು.
ಮೊದಲ ಲೀಗ್‌ನಲ್ಲಿ ಎಸ್‌ಆರ್‌ಎಂ ಸಂಸ್ಥೆ 35-15, 35-27ರಲ್ಲಿ ಅಣ್ಣಾ ವಿವಿಯನ್ನು ಮತ್ತು ಎರಡನೇ ಲೀಗ್‌ನಲ್ಲಿ ಮಂಗಳೂರು ವಿವಿ 35-29, 35-25ರಲ್ಲಿ ಆಂಧ್ರ ವಿವಿ ವಿರುದ್ಧ ಜಯ ಸಾಧಿಸಿತು.
ಅಣ್ಣಾ ವಿವಿ ಜಯಭೇರಿ: ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಬಿ.ಎಸ್.ಅಬ್ದುರಹಮಾನ್ ಕ್ರೆಸೆಂಟ್ ವಿಜ್ಞಾನ–ತಂತ್ರಜ್ಞಾನ ಸಂಸ್ಥೆ ಚೆನ್ನೈನ ಅಣ್ಣಾ ವಿವಿಗೆ ಮಣಿಯಿತು. ಮೊದಲ ಗೇಮ್‌ನಲ್ಲಿ ಹೋರಾಟ ಪ್ರದರ್ಶಿಸಿ ಸೋತ ಕ್ರೆಸೆಂಟ್ ತಂಡ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿತು. ಮೂರನೇ ಗೇಮ್‌ನಲ್ಲಿ ಭರ್ಜರಿ ಆಟವಾಡಿದ ಅಣ್ಣಾ ವಿವಿ 35–28, 32–35, 35–19ರಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಕಳೆದ ಬಾರಿ ನಾಲ್ಕನೇ ಸ್ಥಾನ ಗಳಿಸಿದ್ದ ಆಂಧ್ರ ವಿವಿ 20–35, 35–29, 35–21ರಲ್ಲಿ ಮದ್ರಾಸ್ ವಿವಿಯನ್ನು ಸೋಲಿಸಿತು.
ಸೋಮವಾರದ ಪ್ರೀ ಕ್ವಾರ್ಟರ್ ಫೈನಲ್ ಫಲಿತಾಂಶಗಳು: ಅಣ್ಣಾ ವಿವಿಗೆ ಕೇರಳ ವಿವಿ ವಿರುದ್ಧ 32-35, 35-24, 35-23ರಲ್ಲಿ ಜಯ; ಅಣ್ಣಾಮಲೈ ವಿವಿಗೆ ಆಂಧ್ರಪ್ರದೇಶದ ಅಚಾರ್ಯ ನಾಗಾರ್ಜುನ ವಿವಿ ಎದುರು 35-28, 35-17ರಲ್ಲಿ ಜಯ; ತಿರುಚಿರಾಪಳ್ಳಿಯ ಭಾರತೀದಾಸನ್ ವಿವಿ ಎದುರು ಮದ್ರಾಸ್ ವಿವಿಗೆ 35-28, 27-35, 35-30ರಲ್ಲಿ ಜಯ; ಸೇಲಂನ ಪೆರಿಯಾರ್ ವಿವಿ ವಿರುದ್ಧ ಭಾರತಿಯಾರ್ ವಿವಿಗೆ 35-26, 35-29ರಲ್ಲಿ ಗೆಲುವು.
ಇಂದಿನ ಪಂದ್ಯಗಳು: ಬೆಳಿಗ್ಗೆ 8ರಿಂದ ಲೀಗ್ ಹಣಾಹಣಿ
2.30ಕ್ಕೆ ಮೂರನೇ ಸ್ಥಾನಕ್ಕಾಗಿ ಪಂದ್ಯ
ಸಂಜೆ 4 ಗಂಟೆಗೆ ಅಂತಿಮ ಲೀಗ್ ಪಂದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.