ADVERTISEMENT

ಮಂಗಳೂರು ವಿವಿಗೆ ಚಾಂಪಿಯನ್ ಪಟ್ಟ

ಅಖಿಲ ಭಾರತ ಅಂತರ ವಿವಿ ಪುರುಷರ ಕ್ರಾಸ್ ಕಂಟ್ರಿ: ಮುಂಬೈ ವಿವಿಯ ರಾಜ್‌ ತಿವಾರಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:27 IST
Last Updated 19 ನವೆಂಬರ್ 2024, 16:27 IST
<div class="paragraphs"><p>ಚಾಂಪಿಯನ್ ಪಟ್ಟ ಗಳಿಸಿದ ಮಂಗಳೂರು ವಿವಿ ತಂಡ. </p></div>

ಚಾಂಪಿಯನ್ ಪಟ್ಟ ಗಳಿಸಿದ ಮಂಗಳೂರು ವಿವಿ ತಂಡ.

   

ಉಪ್ಪಿನಂಗಡಿ: ಆತಿಥೇಯ ಮಂಗಳೂರು ವಿಶ್ವವಿದ್ಯಾನಿಲಯ ತಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ಕ್ರಾಸ್ ಕಂಟ್ರಿ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಭಾರತೀಯ ವಿಶ್ವವಿದ್ಯಾಲಯಗಳ ಸಂಘ ಮತ್ತು ಮಂಗಳೂರು ವಿವಿ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳವಾರ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿವಿ 69 ಪಾಯಿಂಟ್ಸ್ ಕಲೆ ಹಾಕಿತು. ಮುಂಬೈ ವಿವಿ ರನ್ನರ್ ಅಪ್ ಆದರೆ ಜೈಪುರದ ರಾಜಸ್ತಾನ ವಿವಿ 3ನೇ ಸ್ಥಾನ ಮತ್ತು ಚಂಡೀಗಢದ ಲುಮ್ರಿನ್ ತಾಂತ್ರಿಕ ವಿವಿ 4ನೇ ಸ್ಥಾನ ಗಳಿಸಿತು.

ADVERTISEMENT

ಕಳೆದ ಬಾರಿ ಚಾಂಪಿಯನ್‌ ಅಗಿದ್ದ ಮಂಗಳೂರು ವಿವಿ ಪ‍ರವಾಗಿ ಆಳ್ವಾಸ್ ಕಾಲೇಜಿನ ನವರತನ್‌, ಸಾಹಿಲ್ ಕಾಂಬೋಜ್, ಅಮನ್ ಕುಮಾರ್, ರೋಹಿತ್ ಜಾ, ಚಂದನ್ ಯಾದವ್‌ ಮತ್ತು ಗಗನ್ ಸಿಂಗ್‌ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ನವರತನ್ 8ನೇ ಸ್ಥಾನ ಗಳಿಸಿ ವಿಶ್ವವಿದ್ಯಾಲಯದ ಉತ್ತಮ ಓಟಗಾರ ಎನಿಸಿಕೊಂಡರು. ಗಗನ್‌ ಮತ್ತು ರೋಹಿತ್ ಝಾ ಕ್ರಮವಾಗಿ 17 ಮತ್ತು 18ನೇ ಸ್ಥಾನ ಗಳಿಸಿದರೆ ಅಮನ್ ಕುಮಾರ್ 26ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಕಳೆದ ಬಾರಿಯ ಬೆಳ್ಳಿ ಪದಕ ವಿಜೇತ ಚಂದನ್‌ ಯಾದವ್ ಓಟ ಪೂರ್ತಿಗೊಳಿಸದೆ ನಿರಾಸೆ ಅನುಭವಿಸಿದರು. ಸಾಹಿಲ್ ಕೂಡ ವೈಫಲ್ಯ ಕಂಡರು.

ಚಿನ್ನಕ್ಕೆ ಮುತ್ತಿಟ್ಟ ರಾಜ್ ತಿವಾರಿ

ಮುಸ್ಸಂಜೆಯ ಹಿತವಾದ ವಾತಾವರಣದಲ್ಲಿ ಅಮೋಘ ಓಟ ಪ್ರದರ್ಶಿಸಿದ ಮುಂಬೈ ವಿವಿಯ ರಾಜ್ ತಿವಾರಿ ಪ್ರತಿಸ್ಪರ್ಧಿಯನ್ನು ಅರ್ಧ ನಿಮಿಷದ ಅಂತರದಲ್ಲಿ ಹಿಂದಿಕ್ಕಿ ಚಿನ್ನಕ್ಕೆ ಮುತ್ತಿಕ್ಕಿದರು. 30 ನಿ 59 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು. ಬೆಳ್ಳಿ ಪದಕಕ್ಕೆ ಕೊಲ್ಹಾಪುರದ ಶಿವಾಜಿ ವಿವಿಯ ಪ್ರಧಾನ್‌ ಕಿರೂಳ್ಕರ್ ಮತ್ತು ಅಭಿಷೇಕ್ ದೇವಕಾತೆ ನಡುವೆ ಜಿದ್ದಾಜಿದ್ದಿಯ ಹಣಾಹಣಿ ಏರ್ಪಟ್ಟಿತು. ಪ್ರಧಾನ್‌ 31 ನಿ 28 ಸೆಕೆಂಡು ಮತ್ತು ಅಭಿಷೇಕ್‌ 31 ನಿ 30 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಫಲಿತಾಂಶಗಳು: ರಾಜ್ ತಿವಾರಿ (ಮುಂಬೈ ವಿವಿ)–1. ಕಾಲ: 30ನಿ 59 ಸೆ, ಪ್ರಧಾನ್ ಕಿರೂಳ್ಕರ್ (ಶಿವಾಜಿ ವಿವಿ, ಕೊಲ್ಹಾಪುರ)–2. (31.28), ಅಭಿಷೇಕ್ ದೇವಕಾತೆ (ಶಿವಾಜಿ ವಿವಿ, ಕೊಲ್ಹಾಪುರ)–3. (31.30); ದಿನೇಶ್ ಕುಮಾರ್‌ (ದೀನ್‌ ದಯಾಳ್ ಉಪಾಧ್ಯಾಯ ವಿವಿ, ಗೋರಖ್‌ಪುರ)–4, ನಬೀಲ್ ಸಾಹಿ (ಕ್ಯಾಲಿಕಟ್‌ ವಿವಿ)–5, ಶುಭಂ ಬಲಿಯನ್‌ (ಲುಮ್ರಿನ್ ತಾಂತ್ರಿಕ ವಿವಿ)–6, ಮೃಣಾಲ್ ಸರೋದೆ (ಮುಂಬೈ ವಿವಿ)–7, ನವರತನ್ (ಮಂಗಳೂರು ವಿವಿ)–8, ಸೌರವ್ ತಿವಾರಿ (ಆರ್‌ಟಿಎಂ ವಿವಿ ನಾಗ್ಪುರ)–9, ಬಿಟ್ಟು (ರಾಜಸ್ತಾನ ವಿವಿ)–10.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.