ಮಾಂಟ್‌ಪೆಲೀರ್, ಫ್ರಾನ್ಸ್: ಭಾರತದ ಮಣಿಕಾ ಬಾತ್ರಾ ಅವರು ಡಬ್ಲ್ಯುಟಿಟಿ ಚಾಂಪಿಯನ್ಸ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.
ಬುಧವಾರ ನಡೆದ ಪಂದ್ಯದಲ್ಲಿ ಮಣಿಕಾ 3–0ಯಿಂದ ಅಮೆರಿಕದ ಲಿಲಿ ಝಾಂಗ್ ವಿರುದ್ಧ ಗೆದ್ದರು. ಮಣಿಕಾ ಅವರು ಈಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಿಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದರು. ಆ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.
ಇಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಣಿಕಾ ಅವರು 22 ನಿಮಿಷಗಳಲ್ಲಿ ಗೆದ್ದರು. ಅವರು 11–4, 11–8, 12–10ರಿಂದ ಅಮೆರಿಕದ ಆಟಗಾರ್ತಿಯನ್ನು ಸೋಲಿಸಿದರು. ನಾಲ್ಕು ಒಲಿಂಪಿಕ್ ಕೂಟಗಳಲ್ಲಿ ಆಡಿರುವ ಅನುಭವಿ ಝಾಂಗ್ ಅವರು ಕೂಡ ಪ್ಯಾರಿಸ್ ಕೂಟದಲ್ಲಿ ಪ್ರಿ ಕ್ವಾರ್ಟರ್ ತಲುಪಿದ್ದರು.
ಇಲ್ಲಿ ಮೊದಲ ಎರಡು ಗೇಮ್‌ಗಳಲ್ಲಿ ಮಣಿಕಾ ಗೆದ್ದರು. ಆದರೆ ಮೂರನೇ ಗೇಮ್ ಬಹಳ ಕಠಿಣವಾಗಿತ್ತು. ಟೈ ಬ್ರೇಕರ್‌ನಲ್ಲಿ ಅವರು ಎದುರಾಳಿಯನ್ನು ಮಣಿಸಿದರು. ಪಂದ್ಯದಲ್ಲಿ ಮಣಿಕಾ ಒಟ್ಟು 34 ಅಂಕಗಳನ್ನು ಗಳಿಸಿದರು. ಅದರಲ್ಲಿ 14 ಅಂಕಗಳು ಸರ್ವ್‌ಗಳಲ್ಲಿ ಗಳಿಕೆಯಾದವು. ಝಾಂಗ್ 22 ಪಾಯಿಂಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.