ಉಲಾನ್ ಉಡೆ, ರಷ್ಯಾ: ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚೊಚ್ಚಲ ಚಿನ್ನದ ಪದಕಕ್ಕೆ ಕೊರಳೊಡ್ಡಲು ಕಾತರರಾಗಿರುವ ಮಂಜು ರಾಣಿ, ಇದಕ್ಕಾಗಿ ಇನ್ನೊಂದು ‘ಪಂಚ್’ ಮಾಡಬೇಕಿದೆ.
48 ಕೆ.ಜಿ.ವಿಭಾಗದಲ್ಲಿ ರಿಂಗ್‌ಗೆ ಇಳಿದಿದ್ದ ಮಂಜು, ಚಾಂಪಿಯನ್‌ಷಿಪ್‌ನಲ್ಲಿ ಫೈನಲ್ ಪ್ರವೇಶಿಸಿ ದಾಖಲೆ ನಿರ್ಮಿಸಿದ್ದಾರೆ. ಚೊಚ್ಚಲ ವಿಶ್ವ ಚಾಂಪಿಯನ್‌ಷಿಪ್‌ನಲ್ಲೇ ಅಂತಿಮ ಘಟ್ಟ ತಲುಪಿದ ಭಾರತದ ಎರಡನೇ ಬಾಕ್ಸರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಎಂ.ಸಿ. ಮೇರಿ ಕೋಮ್ (2001ರಲ್ಲಿ) ಮೊದಲು ಈ ಸಾಧನೆ ಮಾಡಿದ್ದರು.
ಈ ಬಾರಿ 51 ಕೆ.ಜಿ.ವಿಭಾಗದಲ್ಲಿ ಕಣಕ್ಕಿಳಿದಿದ್ದ ಮೇರಿ, ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಲವ್ಲಿನಾ ಬೊರ್ಗೊಹೈನ್ ಮತ್ತು ಜಮುನಾ ಬೊರೊ ಅವರೂ ಕಂಚಿನ ಪದಕಗಳನ್ನು ಪಡೆದರು.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಹರಿಯಾಣದ ಮಂಜು 4–1 ಪಾಯಿಂಟ್ಸ್‌ನಿಂದ ಥಾಯ್ಲೆಂಡ್‌ನ ಚುಟಾಮಟ್ ರಕ್ಸಟ್ ಅವರನ್ನು ಪರಾಭವಗೊಳಿಸಿದರು.
ಭಾನುವಾರ ನಡೆಯುವ ಫೈನಲ್‌ನಲ್ಲಿ ಭಾರತದ ಬಾಕ್ಸರ್‌ಗೆ ರಷ್ಯಾದ ಎರಡನೇ ಶ್ರೇಯಾಂಕದ ಬಾಕ್ಸರ್ ಏಕ್ತರಿನಾ ಪಾಲ್ಟಸೆವ ಅವರ ಸವಾಲು ಎದುರಾಗಲಿದೆ.
ಈ ವರ್ಷ ಮೊದಲ ಬಾರಿ ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿದ್ದ ಮಂಜು, ತನಗಿಂತಲೂ ಬಲಿಷ್ಠರಾಗಿದ್ದ ಚುಟಾಮಟ್ ವಿರುದ್ಧ ಛಲದಿಂದ ಹೋರಾಡಿ ಗಮನ ಸೆಳೆದರು.
ಮೊದಲ ಸುತ್ತಿನಲ್ಲಿ ಉಭಯ ಬಾಕ್ಸರ್‌ಗಳು ಜಿದ್ದಾಜಿದ್ದಿನಿಂದ ಸೆಣಸಿದರು. ಆದರೆ ಎರಡನೇ ಸುತ್ತಿನಲ್ಲಿ ರಕ್ಸಟ್ ಆಕ್ರಮಣಕಾರಿಯಾದರು. ಭಾರತದ ಬಾಕ್ಸರ್‌ನ ಮೈಗೆ ಸತತವಾಗಿ ಪಂಚ್‌ಗಳನ್ನು ಮಾಡಿದರು.
ಇದರಿಂದ ಮಂಜು ವಿಚಲಿತರಾಗಲಿಲ್ಲ. ಚಾಂಪಿಯನ್‌ಷಿಪ್‌ನಲ್ಲಿ ಆರನೇ ಶ್ರೇಯಾಂಕ ಹೊಂದಿರುವ ಅವರು ಮೂರನೇ ಸುತ್ತಿನಲ್ಲಿ ಮೋಡಿ ಮಾಡಿದರು. ನೇರ ಮತ್ತು ನಿಖರ ಪಂಚ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಮಂಜು ಅವರ ಪ್ರಹಾರದಿಂದ ನಲುಗಿದ ರುಕ್ಸಟ್, ಸುಲಭವಾಗಿ ಸೋಲೊಪ್ಪಿಕೊಂಡರು.
ಬೊರೊ, ಲವ್ಲಿನಾಗೆ ಕಂಚು: 54 ಕೆ.ಜಿ.ವಿಭಾಗದ ಸೆಮಿಫೈನಲ್‌ನಲ್ಲಿ ಜಮುನಾ ಬೊರೊ 0–5 ಪಾಯಿಂಟ್ಸ್‌ನಿಂದ ಚೀನಾ ತೈಪೆಯ ಹುವಾಂಗ್ ಹಿಸಿಯಾವೊ ವೆನ್ ಎದುರು ಸೋತರು.
ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿರುವ ಹುವಾಂಗ್, ಚಾಂಪಿಯನ್‌ಷಿಪ್‌ನಲ್ಲಿ ಅಗ್ರಶ್ರೇಯಾಂಕ ಹೊಂದಿದ್ದರು.
‘ಸೆಮಿಫೈನಲ್‌ನಲ್ಲಿ ಹಲವು ತಪ್ಪುಗಳನ್ನು ಮಾಡಿದೆ. ಹೀಗಾಗಿ ಸೋಲು ಎದುರಾಯಿತು. ಮುಂದೆ ಈ ತಪ್ಪುಗಳು ಆಗದಂತೆ ಎಚ್ಚರವಹಿಸುತ್ತೇನೆ. ಇಲ್ಲಿ ಕಂಚಿನ ಪದಕ ಗೆದ್ದಿದ್ದು ಖುಷಿ ನೀಡಿದೆ’ ಎಂದು ಜಮುನಾ ತಿಳಿಸಿದ್ದಾರೆ.
69 ಕೆ.ಜಿ.ವಿಭಾಗದ ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಲವ್ಲಿನಾ ಬೊರ್ಗೊಹೈನ್ 2–3 ಪಾಯಿಂಟ್ಸ್‌ನಿಂದ ಚೀನಾದ ಯಾಂಗ್ ಲಿಯು ಎದುರು ಮಣಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.