ಭೋಪಾಲ್: ಒಲಿಂಪಿಯನ್ ಶೂಟರ್ ಮನು ಭಾಕರ್ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ ಶೂಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡರು.
ಶನಿವಾರ ನಡೆದ ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಗೆದ್ದ ಪದಕಗಳ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.
ಮನು ಅವರು ಶುಕ್ರವಾರ ನಡೆದಿದ್ದ ಪ್ರಿಸಿಷನ್ ಸುತ್ತಿನಲ್ಲಿ 290 ಸ್ಕೋರ್‌ಗಳನ್ನು ಗಳಿಸಿ ರ್‍ಯಾಪಿಡ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದ್ದರು. ಶನಿವಾರ ನಡೆದ ರ್‍ಯಾಪಿಡ್ ಹಂತದ ಮೂರು ಸುತ್ತುಗಳಲ್ಲಿ ಕ್ರಮವಾಗಿ 98, 99 ಮತ್ತು 97 ಪಾಯಿಂಟ್ಸ್‌ಗಳೊಂದಿಗೆ ಒಟ್ಟು 294 ಸ್ಕೋರ್ ಗಳಿಸಿ ರ‍್ಯಾಂಕಿಂಗ್ ಸುತ್ತಿಗೆ ಪ್ರವೇಶ ಗಿಟ್ಟಿಸಿಕೊಂಡರು.
ರ್‍ಯಾಂಕಿಂಗ್ ಸುತ್ತಿನಲ್ಲಿ ಸರಾಸರಿ 14 ಪಾಯಿಂಟ್ಸ್ ಕಲೆಹಾಕಿ ಮೂರನೆಯವರಾಗಿ ಪದಕ ಸುತ್ತಿಗೆ ಅರ್ಹತೆ ಗಳಿಸಿದರು. ಕಣದಲ್ಲಿದ್ದ ಭಾರತದ ಇನ್ನೊಬ್ಬ ಶೂಟರ್ ಇಶಾ ಸಿಂಗ್ ಅವರು ರ‍್ಯಾಂಕಿಂಗ್ ಸುತ್ತಿನಲ್ಲಿ ಹೊರಬಿದ್ದರು.
ಪದಕ ಸುತ್ತಿನಲ್ಲಿ ಮನು ಅವರು ಜರ್ಮನಿಯ ಡೊರೀನ್ ವೆನೆಕ್ಯಾಂಪ್, ಚೀನಾದ ಜಿಯು ದು ಮತ್ತು ಯಕ್ಸುವಾನ್ ಕ್ಸಿಯೊಂಗ್ ಜತೆ ಪೈಪೋಟಿ ನಡೆಸಿದರು.
ಕ್ರಮವಾಗಿ 30 ಮತ್ತು 29ರ ಸರಾಸರಿಯಲ್ಲಿ ಪಾಯಿಂಟ್ಸ್ ಗಳಿಸಿದ ಡೊರೀನ್ ಹಾಗೂ ಜಿಯು ದು ಅವರು ಚಿನ್ನ ಹಾಗೂ ಬೆಳ್ಳಿ ತಮ್ಮದಾಗಿಸಿಕೊಂಡರು. ಎದುರಾಳಿಗಳಿಗೆ ಸರಿಸಾಟಿಯಾಗಿ ನಿಲ್ಲಲು ವಿಫಲರಾದ ಮನು ಮೂರನೇ ಸ್ಥಾನ ಗಳಿಸಿದರು.
ಈ ಚಾಂಪಿಯನ್‌ಷಿಪ್‌ನಲ್ಲಿ ಮನು ಅವರಿಗೆ ದೊರೆತ ಮೊದಲ ಪದಕ ಇದು. ತಮ್ಮ ನೆಚ್ಚಿನ ಏರ್ ಪಿಸ್ತೂಲ್ ವಿಭಾಗದಲ್ಲಿ 16ನೇ ಸ್ಥಾನ ಪಡೆದು ನಿರಾಶೆ ಅನುಭವಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.