ADVERTISEMENT

ಶೂಟರ್ ಮನು ಭಾಕರ್ ಕುದುರೆ ಸವಾರಿ, ಟ್ರ್ಯಾಕ್ಟರ್‌ ಚಾಲನೆ

ಪಿಟಿಐ
Published 24 ಜೂನ್ 2020, 16:12 IST
Last Updated 24 ಜೂನ್ 2020, 16:12 IST
ಕುದುರೆ ಸವಾರಿ ಮಾಡುತ್ತಿರುವ ಮನು ಭಾಕರ್  –ಟ್ವಿಟರ್ ಚಿತ್ರ
ಕುದುರೆ ಸವಾರಿ ಮಾಡುತ್ತಿರುವ ಮನು ಭಾಕರ್  –ಟ್ವಿಟರ್ ಚಿತ್ರ   

ಚಂಡೀಗಡ: ಈ ವರ್ಷ ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಶೂಟಿಂಗ್‌ನಲ್ಲಿ ಪದಕ ಗೆದ್ದು ಬರುವ ಕನಸು ಕಂಡಿದ್ದರು ಮನು ಭಾಕರ್. ಆದರೆ ಕೊರೊನಾದಿಂದಾಗಿ ಒಲಿಂಪಿಕ್ ಕೂಟವನ್ನು ಮುಂದಿನ ವರ್ಷಕ್ಕೆ ಮುಂದೂಡಲಾಯಿತು.

ಅದಕ್ಕೆ ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿರುವ ಅವಕಾಶವನ್ನು ಭರ್ತಿ ಬಳಸಿಕೊಂಡಿರುವ ಮನು ಭಾಕರ್ ಈಗ ಶೂಟಿಂಗ್ ಅಷ್ಟೇ ಅಲ್ಲ, ಬಹುವಿದ್ಯಾಪ್ರವೀಣೆಯಾಗುತ್ತ ಹೆಜ್ಜೆ ಇಟ್ಟಿದ್ದಾರೆ.

ಅವರು ಈ ಅವಧಿಯಲ್ಲಿ ಕುದುರೆ ಸವಾರಿ, ಟ್ರ್ಯಾಕ್ಟರ್‌ ಚಾಲನೆ, ಹಗ್ಗದ ಮೇಲೆ ಕಸರತ್ತು, ಬ್ರೇಕ್‌ ಡ್ಯಾನ್ಸ್‌ ಮತ್ತು ಕಸೂತಿ ಕಲೆಯನ್ನು ಕಲಿಯುತ್ತಿದ್ದಾರೆ. ಹರಿಯಾಣದ ಜಾಜರ್ ಜಿಲ್ಲೆಯ ಗೊರಿಯಾ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ಮನು ಇದ್ದಾರೆ. 18 ವರ್ಷದ ಮನು ತಮ್ಮ ಶೂಟಿಂಗ್ ಕ್ರೀಡೆಯನ್ನು ಮನೆಯ ಅಂಗಳದಲ್ಲಿರುವ ರೇಂಜ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಉಳಿದ ಸಮಯದಲ್ಲಿ ತಮ್ಮ ನೆಚ್ಚಿನ ಹವ್ಯಾಸಗಳಲ್ಲಿ ತಲ್ಲೀನರಾಗಿದ್ದಾರೆ.

ADVERTISEMENT

‘ಇಂತಹ ಸಮಯ ಮತ್ತೆ ಸಿಗಲ್ಲ. ಮನೆಯಲ್ಲಿ ಇಷ್ಟು ಕಾಲ ಇದ್ದಿದ್ದು ಇದೇ ಮೊದಲು. ಈ ಅವಧಿಯಲ್ಲಿ ಚಿತ್ರಕಲೆ, ವರ್ಣಕಲೆ ಕಲಿಯುತ್ತಿದ್ದೇನೆ. ಕುದುರೆ ಸವಾರಿ ಮಾಡುವುದನ್ನೂ ಕಲಿತಿದ್ದೇನೆ. ಬಹಳ ಆನಂದ ನೀಡುವ ವಿಷಯ ಅದು. ಈಚೆಗೆ ಹೊಲದಲ್ಲಿ ಟ್ರ್ಯಾಕ್ಟರ್‌ ಕೂಡ ಚಾಲನೆ ಮಾಡಿದ್ದೆ’ ಎಂದು ಮನು ಹೇಳಿದ್ದಾರೆ.

‘ಈ ಬಿಡುವಿನಲ್ಲಿ ಚಿತ್ತ ಚಂಚಲವಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸ. ಪ್ರತಿದಿನ ಶೂಟಿಂಗ್ ಅಭ್ಯಾಸ ಮಾಡುವುದನ್ನು ತಪ್ಪಿಸುವುದಿಲ್ಲ. ದೈಹಿಕ ಮತ್ತು ಮಾನಸಿಕವಾಗಿ ಸಬಲವಾಗಿರಲು ಯೋಗ ಮತ್ತು ಧ್ಯಾನ ಸಹಕಾರಿ. ಅದಕ್ಕಾಗಿ ಸಮಯವನ್ನು ಮೀಸಲಿಟ್ಟಿದ್ದೇನೆ. ಧ್ಯಾನ ಮಾಡುವುದರಿಂದ ಅಪಾರ ಮನೋಬಲ ಸಿದ್ಧಿಸುತ್ತದೆ. ಆಗ ಉಳಿದೆಲ್ಲ ಕೆಲಸಗಳಲ್ಲಿ ಮಗ್ನತೆ ಕಾಪಾಡಿಕೊಳ್ಳುವುದು ಸುಲಭ’ ಎಂದು ಮನು ಹೇಳಿದ್ದಾರೆ.

‘ಲಾಕ್‌ಡೌನ್ ನಂತರ ತರಬೇತಿ ಶಿಬಿರಗಳನ್ನು ಆರಂಭಿಸಲಿದ್ದಾರೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಯಾವುದೇ ಸ್ಪರ್ಧೆ ಮತ್ತು ಶಿಬಿರಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ಒಮ್ಮೆ ಚಟುವಟಿಕೆಗಳು ಆರಂಭವಾದಾಗ ನಾವು ಸಕಲ ರೀತಿಯಲ್ಲಿ ಸಿದ್ಧವಾಗಿರಬೇಕು. ಆದ್ದರಿಂದ ಈಗ ಮಾಡುತ್ತಿರುವ ಈ ಎಲ್ಲ ಚಟುವಟಿಕೆಗಳು ಸಹಕಾರಿಯಾಗುತ್ತವೆ’ ಎಂದರು.

‘ನಮ್ಮ ಮನಸ್ಸಿನ ಮೇಲೆ ಹೆಚ್ಚು ಒತ್ತಡ ಹಾಕಬಾರದು. ಆದ್ದರಿಂದ ಕುಟುಂಬದೊಂದಿಗೆ ಉತ್ತಮವಾಗಿ ಕಾಲ ಕಳೆಯಬೇಕು. ಹವ್ಯಾಸಗಳನ್ನು ರೂಢಿಸಿಕೊಂಡರೆ ಮನೋಲ್ಲಾಸ ಸಾಧ್ಯ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.