ಉಲನ್ ಉಡೆ: ‘ರಿಂಗ್‌ನ ರಾಣಿ’ ಎಂ.ಸಿ. ಮೇರಿ ಕೋಮ್ ಅವರು ಗುರುವಾರ ಚಾರಿತ್ರಿಕ ಸಾಧನೆ ಮಾಡಿದರು.
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಎಂಟನೇ ಪದಕ ಖಚಿತಪಡಿಸಿಕೊಂಡಿರುವ ಅವರು ಈ ಸಾಧನೆ ಮಾಡಿದ ವಿಶ್ವದ ಏಕೈಕ ಬಾಕ್ಸರ್ ಎಂಬ ಹಿರಿಮೆಗೆ ಪಾತ್ರರಾದರು. 51.ಕೆ.ಜಿ.ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ಈ ಮೈಲುಗಲ್ಲು ಸ್ಥಾಪಿಸಿದರು.
ಇದಕ್ಕೂ ಮುನ್ನ ಆರು ಚಿನ್ನ ಮತ್ತು ಒಂದು ಬೆಳ್ಳಿಯ ಪದಕ ಜಯಿಸಿದ್ದ ಅವರು ಕ್ಯೂಬಾದ ಫೆಲಿಕ್ಸ್ ಸೇವೊನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಮಣಿಪುರದ ಅನುಭವಿ ಬಾಕ್ಸರ್, 51 ಕೆ.ಜಿ. ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದು ಇದೇ ಮೊದಲು.
ಕ್ವಾರ್ಟರ್ ಫೈನಲ್‌ನಲ್ಲಿ 36ರ ಹರೆಯದ ಮೇರಿ 5–0 ಪಾಯಿಂಟ್ಸ್‌ನಿಂದ ಕೊಲಂಬಿಯಾದ ವಲೆನ್ಸಿಯಾ ವಿಕ್ಟೋರಿಯಾ ಅವರನ್ನು ಮಣಿಸಿದರು.
ಶನಿವಾರ ನಡೆಯುವ ಸೆಮಿಫೈನಲ್‌ನಲ್ಲಿ ಮೇರಿ ಅವರು ಟರ್ಕಿಯ ಬುಸೆನಾಜ್ ಕಾಕಿರೊಗ್ಲು ವಿರುದ್ಧ ಸೆಣಸಲಿದ್ದಾರೆ. ಈ ಹಣಾಹಣಿಯಲ್ಲಿ ಸೋತರೂ ಭಾರತದ ಬಾಕ್ಸರ್‌ಗೆ ಕಂಚಿನ ಪದಕ ಸಿಗಲಿದೆ.
ಯುರೋಪಿಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ ಹಿರಿಮೆ ಹೊಂದಿರುವ ಬುಸೆನಾಜ್, ಎಂಟರ ಘಟ್ಟದ ಇನ್ನೊಂದು ಹಣಾಹಣಿಯಲ್ಲಿ ಚೀನಾದ ಕಾಯ್ ಜೊಂಗ್‌ಜು ಅವರನ್ನು ಸೋಲಿಸಿದರು.
ಅನುಭವಿಗಳ ನಡುವಣ ಕ್ವಾರ್ಟರ್ ಫೈನಲ್ ಪೈಪೋಟಿಯಲ್ಲಿ ಮೂರು ಮಕ್ಕಳ ತಾಯಿ ಮೇರಿ, ಏಕಪಕ್ಷೀಯವಾಗಿ ಗೆದ್ದರು.
31ರ ಹರೆಯದ ವಲೆನ್ಸಿಯಾ, ಮೊದಲ ಸುತ್ತಿನಲ್ಲಿ ಆಕ್ರಮಣಕಾರಿಯಾಗಿ ಆಡಿದರು. ಇದರಿಂದ ಕಿಂಚಿತ್ತೂ ವಿಚಲಿತರಾಗದ ಮೇರಿ, ರಕ್ಷಣೆಗೆ ಒತ್ತು ನೀಡಿದರು. ಅವಕಾಶ ಸಿಕ್ಕಾಗಲೆಲ್ಲಾ ಎದುರಾಳಿಯ ಮುಖ ಮತ್ತು ದವಡೆಗೆ ಪಂಚ್ ಮಾಡುವುದನ್ನು ಅವರು ಮರೆಯಲಿಲ್ಲ.
ಎರಡನೇ ಅವಧಿಯಲ್ಲಿ ಮೇರಿ, ಪಾರಮ್ಯ ಮೆರೆದರು. ಭಾರತದ ಬಾಕ್ಸರ್, ಬಲಗೈಯಿಂದ ಮಾಡುತ್ತಿದ್ದ ರಭಸದ ಹುಕ್‌ಗಳಿಗೆ ವಲೆನ್ಸಿಯಾ ನಿರುತ್ತರರಾದರು. ನೇರ ಮತ್ತು ನಿಖರ ಪಂಚ್‌ಗಳ ಮೂಲಕವೂ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದ ‘ಮ್ಯಾಗ್ನಿಫಿಸೆಂಟ್ ಮೇರಿ’ ಸುಲಭವಾಗಿ ಪಾಯಿಂಟ್ಸ್ ಬುಟ್ಟಿಗೆ ಹಾಕಿಕೊಂಡು ಸಂಭ್ರಮಿಸಿದರು.
‘ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಎಂಟನೇ ಪದಕ ಖಚಿತಪಡಿಸಿಕೊಂಡಿದ್ದರಿಂದ ಅತೀವ ಖುಷಿಯಾಗಿದೆ. ಸೆಮಿಫೈನಲ್ ಮತ್ತು ಫೈನಲ್‌ನಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿ ಚಿನ್ನದ ಪದಕ ಗೆಲ್ಲುವುದು ನನ್ನ ಗುರಿ. ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ಮೇರಿ, ಪಂದ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಮಂಜು ಮತ್ತು ಜಮುನಾ ಸೆಮಿಗೆ: ಮಂಜು ರಾಣಿ ಮತ್ತು ಜಮುನಾ ಬೊರೊ ಅವರೂ ಸೆಮಿಫೈನಲ್ ಪ್ರವೇಶಿಸಿ ಪದಕಗಳನ್ನು ಖಚಿತಪಡಿಸಿಕೊಂಡಿದ್ದಾರೆ.
48 ಕೆ.ಜಿ.ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮಂಜು 4–1 ಪಾಯಿಂಟ್ಸ್‌ನಿಂದ ದಕ್ಷಿಣ ಕೊರಿಯಾದ ಕಿಮ್ ಹ್ಯಾಂಗ್ ಮಿ ಅವರಿಗೆ ಆಘಾತ ನೀಡಿದರು. ಕಿಮ್ ಅವರು ಈ ವಿಭಾಗದಲ್ಲಿ ಅಗ್ರಶ್ರೇಯಾಂಕ ಹೊಂದಿದ್ದರು. ಹಿಂದಿನ ಆವೃತ್ತಿಯಲ್ಲಿ ಕಂಚಿನ ಪದಕ ಗೆದ್ದಿದ್ದರು.
ಮುಂದಿನ ಸುತ್ತಿನಲ್ಲಿ ಮಂಜು, ಥಾಯ್ಲೆಂಡ್‌ನ ಚುಟಾಮಟ್ ರಕ್ಸಟ್ ಎದುರು ಪೈಪೋಟಿ ನಡೆಸಲಿದ್ದಾರೆ.
54 ಕೆ.ಜಿ.ವಿಭಾಗದ ಎಂಟರ ಘಟ್ಟದ ಪೈಪೋಟಿಯಲ್ಲಿ ಜಮುನಾ 4–1 ಪಾಯಿಂಟ್ಸ್‌ನಿಂದ ಜರ್ಮನಿಯ ಉರ್ಸುಲು ಗೊಟ್ಟಾಲೊಬ್ ಅವರನ್ನು ಪರಾಭವಗೊಳಿಸಿದರು.
ನಾಲ್ಕರ ಘಟ್ಟದಲ್ಲಿ ಜಮುನಾ, ಅಗ್ರಶ್ರೇಯಾಂಕದ ಬಾಕ್ಸರ್ ಹುವಾಂಗ್ ಹಿಸಿಯೊ ವೆನ್ ಎದುರು ಸೆಣಸಲಿದ್ದಾರೆ.
ಕವಿತಾಗೆ ನಿರಾಸೆ: +81 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸಿದ್ದ ಕವಿತಾ ಚಾಹಲ್, ಕ್ವಾರ್ಟರ್ ಫೈನಲ್‌ನಲ್ಲಿ ನಿರಾಸೆ ಕಂಡರು.
ಬೆಲಾರಸ್‌ನ ಕತ್ಸಿಯರಿನಾ ಕವಲೆವಾ 5–0 ಪಾಯಿಂಟ್ಸ್‌ನಿಂದ ಭಾರತದ ಬಾಕ್ಸರ್‌ನನ್ನು ಮಣಿಸಿದರು. ಕವಿತಾ ಅವರು ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು.
*
ಕ್ವಾರ್ಟರ್ ಫೈನಲ್‌ನಲ್ಲಿ ಎದುರಾಳಿಯಿಂದ ಕಠಿಣ ಪೈಪೋಟಿ ಎದುರಾಗಲಿಲ್ಲ. ಇಲ್ಲಿ ಚಿನ್ನ ಗೆಲ್ಲುವುದು ನನ್ನ ಗುರಿ. ಅದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುವೆ.
-ಮೇರಿ ಕೋಮ್, ಭಾರತದ ಬಾಕ್ಸರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.