ನವದೆಹಲಿ: ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಅವರು ‘ಇಂಜುರಿ ಮ್ಯಾನೇಜ್‌ಮೆಂಟ್’ ವಿಷಯದ ಕುರಿತು ಸುಮಾರು 300 ಬಾಕ್ಸರ್‌ಗಳಿಗೆ ಆನ್‌ಲೈನ್ ಪಾಠ ಮಾಡಿದ್ದಾರೆ.
ಲಾಕ್‌ಡೌನ್‌ನ ಕಾರಣ ಭಾರತ ಬಾಕ್ಸಿಂಗ್ ಫೆಡರೇಷನ್ (ಬಿಎಫ್‌ಐ) ಆನ್‌ಲೈನ್ ಶಿಕ್ಷಣ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ ಅಂಗವಾಗಿ ಮಂಗಳವಾರ ನಡೆದ ಸೆಷನ್‌ನಲ್ಲಿ ಭಾರತ ಬಾಕ್ಸಿಂಗ್ ತಂಡದ ವೈದ್ಯರು ಹಾಗೂ ಫಿಸಿಯೊಗಳ ಜೊತೆ ಮೇರಿ ಕೋಮ್ ಸಂವಾದ ನಡೆಸಿದರು. ಜೊತೆಗೆ ಯುವ ಬಾಕ್ಸರ್‌ಗಳಿಗೆ ಹಲವು ಸಲಹೆಗಳನ್ನೂ ನೀಡಿದರು.
‘ವೈದ್ಯರು ಹಾಗೂ ಫಿಸಿಯೊಗಳ ಜೊತೆ ನಡೆಸಿದ ಸಂವಾದದಿಂದಾಗಿ ಹಲವು ಮಹತ್ವದ ವಿಷಯಗಳು ಅರಿವಿಗೆ ಬಂದವು. ಎಲ್ಲಾ ಬಗೆಯ ಗಾಯಗಳಿಗೂ ಶಸ್ತ್ರಚಿಕಿತ್ಸೆಯೇ ಮದ್ದಲ್ಲ ಎಂಬುದೂ ತಿಳಿಯಿತು’ ಎಂದು ಮೇರಿ ತಿಳಿಸಿದ್ದಾರೆ.
‘ಗಾಯದಿಂದ ಪಾರಾಗಬೇಕಾದರೆ ನಿತ್ಯವೂ ಒಂದಷ್ಟು ಹೊತ್ತು ಸರಳ ವ್ಯಾಯಾಮಗಳನ್ನು ಮಾಡಬೇಕು. ನನಗೆ ತುಂಬಾ ದಿನಗಳಿಂದ ಬೆನ್ನು ನೋವು ಕಾಡುತ್ತಿತ್ತು. ಫಿಸಿಯೊಗಳು ನೀಡಿದ ಸಲಹೆಯನ್ನು ಪಾಲಿಸಿದ ಬಳಿಕ ನೋವೆಲ್ಲಾ ಮಾಯವಾಯಿತು. ಹೀಗಾಗಿ ಎಲ್ಲರೂ ಫಿಸಿಯೊಗಳ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸಿ’ ಎಂದು ಕಿವಿಮಾತು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.