ನ್ಯೂಯಾರ್ಕ್: ಪ್ರಶಸ್ತಿ ಗೆಲ್ಲುವ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿರುವ ಡ್ಯಾನಿಯಲ್ ಮೆಡ್ವೆಡೆವ್ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.
ಸೋಮವಾರ ರಾತ್ರಿ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನ ಹಣಾಹಣಿಯಲ್ಲಿ ಎರಡನೇ ಶ್ರೇಯಾಂಕದ ಮೆಡ್ವೆಡೆವ್ 6-4 6-3 6-1ರಿಂದ ರಷ್ಯಾದ ರಿಚರ್ಡ್ ಗ್ಯಾಸ್ಕೆಟ್ ಅವರನ್ನು ಮಣಿಸಿದರು. 25 ವರ್ಷದ ರಷ್ಯಾ ಆಟಗಾರನಿಗೆ ವೃತ್ತಿಜೀವನದ 200ನೇ ಗೆಲುವಾಗಿತ್ತು.
2019ರ ಅಮೆರಿಕ ಓಪನ್ ಫೈನಲಿಸ್ಟ್ ಮೆಡ್ವೆಡೆವ್ ಅವರು ಬೇಸ್‌ಲೈನ್ ಹೊಡೆತಗಳಿಂದ ಎದುರಾಳಿಯನ್ನು ಕಂಗೆಡಿಸಿದರು. ಈ ವರ್ಷದ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಅವರು ಪ್ರಶಸ್ತಿ ಸುತ್ತೂ ತಲುಪಿದ್ದರು.
ಎರಡನೇ ಸುತ್ತಿನ ಪಂದ್ಯದಲ್ಲಿ ಮೆಡ್ವೆಡೆವ್ ಅವರು ಜರ್ಮನಿಯ ಡಾಮಿನಿಕ್ ಕೋಫರ್ ಅವರಿಗೆ ಮುಖಾಮುಖಿಯಾಗಲಿದ್ದಾರೆ.
ಸೋಮವಾರ ರಾತ್ರಿ ನಡೆದ ಪುರುಷರ ವಿಭಾಗದ ಮೊದಲ ಸುತ್ತಿನ ಇತರ ಪಂದ್ಯಗಳಲ್ಲಿ ರಷ್ಯಾದ ಆ್ಯಂಡ್ರೆ ರುಬ್ಲೆವ್ 6-3, 7-6 (7/3), 6-3ರಿಂದ ಕ್ರೊವೇಷ್ಯಾದ ಇವೊ ಕಾರ್ಲೊವಿಚ್ ಎದುರು, ಗ್ರೀಸ್‌ನ ಸ್ಟೆಫನೊಸ್ ಸಿಟ್ಸಿಪಾಸ್ 2-6, 7-6 (9/7), 3-6, 6-3, 6-4ರಿಂದ ಬ್ರಿಟನ್ ಆ್ಯಂಡಿ ಮರ್ರೆ ಎದುರು, ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್ 4-6, 4-6, 7-6 (9/7), 6-2, 6-2ರಿಂದ ಆಸ್ಟ್ರೇಲಿಯಾದ ಜೇಮ್ಸ್ ಡಕ್ವರ್ತ್ ಎದುರು ಜಯ ಸಾಧಿಸಿ ಮುನ್ನಡೆದರು.
ಮಹಿಳೆಯರ ವಿಭಾಗದ ಮೊದಲ ಸುತ್ತಿನ ಪಂದ್ಯಗಳಲ್ಲಿಜಪಾನ್‌ನ ನವೊಮಿ ಒಸಾಕ 6-4, 6-1ರಿಂದ ಜೆಕ್ ಗಣರಾಜ್ಯದ ಮರಿಯಾ ಬೌಜ್‌ಕೊವಾ ಎದುರು, ಉಕ್ರೇನ್‌ನ ಎಲಿನಾ ಸ್ವಿಟೋಲಿನಾ 6-2, 6-3ರಿಂದ ಕೆನಡಾದ ರೆಬೆಕ್ಕಾ ಮರಿನೊ ಎದುರು, ಜರ್ಮನಿಯ ಎಂಜೆಲಿಕ್ ಕೆರ್ಬರ್ 3-6, 6-4, 7-6 (7/3)ರಿಂದ ಉಕ್ರೇನ್‌ನ ಡಯಾನಾ ಯಸ್ತಮಸ್ಕಾ ವಿರುದ್ಧ, ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಸಿಕೊವಾ 6-0, 6-4ರಿಂದ ಅಮೆರಿಕದ ಆಸ್ತ್ರಾ ಶರ್ಮಾ ವಿರುದ್ಧ ಗೆಲುವು ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.