ADVERTISEMENT

ಥಾಯ್ಲೆಂಡ್ ಓಪನ್: 8ರ ಘಟಕ್ಕೆ ಮೀರಬಾ: ಡಬಲ್ಸ್‌ನಲ್ಲಿ ಸಾತ್ವಿಕ್–ಚಿರಾಗ್‌ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 13:39 IST
Last Updated 16 ಮೇ 2024, 13:39 IST
<div class="paragraphs"><p>ಮೈಸ್ನಮ್‌ ಮೀರಬಾ </p></div>

ಮೈಸ್ನಮ್‌ ಮೀರಬಾ

   

(ಪ್ರಜಾವಾಣಿ ಚಿತ್ರ

ಬ್ಯಾಂಕಾಕ್‌: ಯಶಸ್ಸಿನ ಓಟದಲ್ಲಿರುವ ಯುವ ಷಟ್ಲರ್‌ ಮೀರಬಾ ಲುವಾಂಗ್ ಮೈಸ್ನಂ ಅವರು ಥಾಯ್ಲೆಂಡ್‌ ಓಪನ್ ಸೂಪರ್ 500 ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಎಂಟರ ಘಟ್ಟ ತಲುಪಿದರು. ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ ಜೋಡಿ ಕೂಡ ಗುರುವಾರ  ಕ್ವಾರ್ಟರ್‌ಫೈನಲ್ ಪ್ರವೇಶಿಸಿತು.

ADVERTISEMENT

ಐದನೇ ಶ್ರೇಯಾಂಕದ ಎಚ್‌.ಎಸ್‌.ಪ್ರಣಯ್ ಅವರನ್ನು ಬುಧವಾರ ಅನಿರೀಕ್ಷಿತವಾಗಿ ಸೋಲಿಸಿದ್ದ 21 ವರ್ಷದ ಮೀರಬಾ ಎರಡನೇ ಸುತ್ತಿನ ಪಂದ್ಯದಲ್ಲಿ 21–14, 22–20ರಲ್ಲಿ ಡೆನ್ಮಾರ್ಕ್‌ನ ಮಾಡ್ಸ್‌ ಕ್ರಿಸ್ಟೋಫರ್‌ಸನ್ ಅವರನ್ನು ಸೋಲಿಸಿದರು. ಈ ಪಂದ್ಯ 50 ನಿಮಿಷ ನಡೆಯಿತು.

ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಮೀರಬಾ ಅವರಿಗೆ ಕ್ವಾರ್ಟರ್‌ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಹಾಗೂ ಸ್ಥಳೀಯ ಆಟಗಾರ ಕುನ್ಲಾವುತ್ ವಿಟಿಡ್‌ಸರ್ನ್‌ ಅವರು ಎದುರಾಳಿಯಾಗಿದ್ದು, ಸತ್ವ ಪರೀಕ್ಷೆ ಎದುರಾಗಿದೆ. 2022ರಲ್ಲಿ ಇರಾನ್‌ನಲ್ಲಿ ಫಜರ್‌ ಇಂಟರ್‌ನ್ಯಾಷನಲ್ ಹಾಗೂ ಇಂಡಿಯಾ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಮೀರಬಾ ಚಾಂಪಿಯನ್ ಆಗಿದ್ದರು.

ಡಬಲ್ಸ್‌ನಲ್ಲಿ ವಿಶ್ವದ ಮೂರನೇ ನಂಬರ್ ಆಟಗಾರರಾದ ಸಾತ್ವಿಕ್– ಚಿರಾಗ್ ಜೋಡಿ ಎರಡನೇ ಸುತ್ತಿನಲ್ಲಿ 21–16, 21–11 ರಿಂದ ಚೀನಾದ ಷಿ ಸಾವೊ ನಾನ್– ಝೆಂಗ್‌ ವೀ ಹಾನ್ ಜೋಡಿಯನ್ನು ಸೋಲಿಸಿತು. ಚೀನಾ ಜೋಡಿ ವಿಶ್ವ ಕ್ರಮಾಂಕದಲ್ಲಿ 69ನೇ ಸ್ಥಾನದಲ್ಲಿದೆ.‌‌

ಏಷ್ಯನ್ ಗೇಮ್ಸ್‌ ಸ್ವರ್ಣಪದಕ ವಿಜೇತ ಭಾರತದ ಜೋಡಿ ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಜುನೈದಿ ಆರಿಫ್‌– ರಾಯ್ ಕಿಂಗ್ ಯಾಪ್ ಜೋಡಿಯನ್ನು ಎದುರಿಸಲಿದೆ.

ಇಬ್ಬರಿಗೆ ಸೋಲು:

ಭಾರತದ ಅಶ್ಮಿತಾ ಚಾಲಿಹಾ ಮಹಿಳಾ ಸಿಂಗಲ್ಸ್ ಎರಡನೇ ಸುತ್ತಿನಲ್ಲಿ ಅಗ್ರ ಶ್ರೇಯಾಂಕದ ಆಟಗಾರ್ತಿ ಹಾನ್‌ ಯುಯೆ (ಚೀನಾ ಅವರಿಗೆ ಹೋರಾಟ ನೀಡಿದರೂ ಅಂತಿಮವಾಗಿ 15–21, 21–12, 12–21 ರಲ್ಲಿ ಸೋತರು.

ಮಿಶ್ರ ಡಬಲ್ಸ್‌ ಎರಡನೇ ಸುತ್ತಿನಲ್ಲಿ ಭಾರತದ ಸತೀಶ್ ಕರುಣಾಕರನ್– ಆದ್ಯಾ ವರಿಯತ್ ಜೋಡಿ 10–21, 17–21ರಲ್ಲಿ ರಿನೊಯ್ ರಿವಾಲ್ಡಿ– ಪಿತಾ ಹನಿಂಗ್‌ಟ್ಯಾಸ್‌ ಮೆಂಟಾರಿ ಅವರಿಗೆ ಶರಣಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.