ತಾಷ್ಕೆಂಟ್, ಉಜ್ಬೆಕಿಸ್ತಾನ: ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಆಕಾಶ್ ಸಂಗ್ವಾನ್ ಮತ್ತು ನಿಶಾಂತ್ ದೇವ್ ಅವರು ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಪ್ರೀಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 67 ಕೆಜಿ ವಿಭಾಗದ ಎರಡನೇ ಸುತ್ತಿನ ಬೌಟ್‌ನಲ್ಲಿ ಶನಿವಾರ ಆಕಾಶ್ 5–0ಯಿಂದ ಚೀನಾದ ಫು ಮಿಂಗ್‌ಕೆ ಅವರನ್ನು ಪರಾಭವಗೊಳಿಸಿದರು.
ಬೌಟ್‌ನ ಆರಂಭದಿಂದಲೇ ಆಕಾಶ್, ಎದುರಾಳಿಯ ಮೇಲೆ ಚುರುಕಿನ ದಾಳಿ ನಡೆಸಿದರು. ಸ್ವಲ್ಪ ದೂರದಿಂದಲೇ ಚೀನಾ ಬಾಕ್ಸರ್ ಮೇಲೆ ಪಂಚ್‌ಗಳನ್ನು ಪ್ರಯೋಗಿಸಿ ಯಶಸ್ವಿಯಾದರು.
16ರ ಘಟ್ಟದ ಬೌಟ್‌ನಲ್ಲಿ ಆಕಾಶ್ ಅವರಿಗೆ ಕಜಕಸ್ತಾನದ ದುಲಾತ್ ಬೆಕ್‌ಬವೊವ್ ಸವಾಲು ಎದುರಾಗಿದೆ.
71 ಕೆಜಿ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ನಿಶಾಂತ್ ದೇವ್ 5–0ಯಿಂದ ಕೊರಿಯಾದ ಲೀ ಸಾಂಗ್‌ಮಿನ್ ಅವರನ್ನು ಮಣಿಸಿದರು.
ಬೌಟ್‌ನಲ್ಲಿ ತಾಂತ್ರಿಕ ಶ್ರೇಷ್ಠತೆ ಮೆರೆದ ನಿಶಾಂತ್ ಎದುರಾಳಿಯನ್ನು ಗಲಿಬಿಲಿಗೊಳಿಸಿದರು. ಸ್ಪರ್ಧೆಯ ಮೊದಲ ಸುತ್ತಿನಲ್ಲಿ ಭಾರತದ ಬಾಕ್ಸರ್ ಸುಲಭ ಗೆಲುವು ಪಡೆದರು. ಎರಡು ಮತ್ತು ಮೂರನೇ ಸುತ್ತುಗಳಲ್ಲಿ ಇಬ್ಬರ ಮಧ್ಯೆ ಬಿರುಸಿನ ಪಂಚ್‌ಗಳ ವಿನಿಮಯ ನಡೆಯಿತು. ಆದರೆ ನಿಶಾಂತ್ ಹೊಡೆತಗಳಲ್ಲಿ ಹೆಚ್ಚು ನಿಖರತೆ ಇತ್ತು.
ಮುಂದಿನ ಸುತ್ತಿನಲ್ಲಿ ನಿಶಾಂತ್, ಪ್ಯಾಲೆಸ್ಟೀನ್‌ನ ಫೊಕಹಾ ನಿದಾಲ್ ಎದುರು ಸೆಣಸುವರು.
ಭಾನುವಾರ ನಡೆಯಲಿರುವ ವಿವಿಧ ಬೌಟ್‌ಗಳಲ್ಲಿ ದೀಪಕ್ (51 ಕೆಜಿ), ಮೊಹಮ್ಮದ್ ಹುಸಾಮುದ್ದೀನ್ (57 ಕೆಜಿ), ಸುಮಿತ್ (75 ಕೆಜಿ) ಮತ್ತು ನರೇಂದರ್ (92+ ಕೆಜಿ) ಅಂಗಣಕ್ಕಿಳಿಯುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.