ADVERTISEMENT

ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌: ಪಂಜಾಬ್‌ ತಂಡಕ್ಕೆ ಕಿರೀಟ

ಹಾಕಿ: ಕರ್ನಾಟಕ ತಂಡಕ್ಕೆ ನಾಲ್ಕನೇ ಸ್ಥಾನ

ಪಿಟಿಐ
Published 29 ನವೆಂಬರ್ 2023, 16:42 IST
Last Updated 29 ನವೆಂಬರ್ 2023, 16:42 IST
ಸೀನಿಯರ್ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಪಂಜಾಬ್ ತಂಡ –ಹಾಕಿ ಇಂಡಿಯಾ ‘ಎಕ್ಸ್‌’ ಚಿತ್ರ
ಸೀನಿಯರ್ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಪಂಜಾಬ್ ತಂಡ –ಹಾಕಿ ಇಂಡಿಯಾ ‘ಎಕ್ಸ್‌’ ಚಿತ್ರ   

ಚೆನ್ನೈ : ಪಂಜಾಬ್ ತಂಡವು ಸೀನಿಯರ್ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಹರಿಯಾಣ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 9–8ರಿಂದ ರೋಚಕವಾಗಿ ಮಣಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ನಿಗದಿತ ಸಮಯದಲ್ಲಿ ಪಂಜಾಬ್ ಮತ್ತು ಹರಿಯಾಣ ತಂಡಗಳು ತಲಾ ಎರಡು ಗೋಲುಗಳಿಂದ ಸಮಬಲ ಸಾಧಿಸಿದ್ದವು. ಬಳಿಕ ಶೂಟೌಟ್‌ನಲ್ಲಿ ಹಾಲಿ ಚಾಂಪಿಯನ್‌ ವಿರುದ್ಧ ಪಂಜಾಬ್‌ ತಂಡ ಗೆಲುವು ದಾಖಲಿಸಿತು.

ಪಂದ್ಯದ 13ನೇ ನಿಮಿಷದಲ್ಲಿ ಹರ್ಜೀತ್ ಸಿಂಗ್ ಪಂಜಾಬ್‌ ತಂಡಕ್ಕೆ ಮುನ್ನಡೆ ಒದಗಿಸಿದರು. ಆದರೆ, ಹರಿಯಾಣದ ಸಂಜಯ್ (25ನೇ) ಪೆನಾಲ್ಟಿ ಕಾರ್ನರ್‌ನಲ್ಲಿ ಚೆಂಡನ್ನು ಗುರಿ ಸೇರಿಸಿ ಗೋಲು ಸಮಬಲಗೊಳಿಸಿದರು.

ADVERTISEMENT

ಭಾರತ ತಂಡ ಆಟಗಾರ ಹಾಗೂ ಪಂಜಾಬ್‌ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ (42ನೇ) ಮತ್ತೆ ತಂಡಕ್ಕೆ ಮುನ್ನಡೆ ಕೊಟ್ಟರು. ಅದಾದ ಎಂಟೇ ನಿಮಿಷದಲ್ಲಿ ರಾಜಂತ್ (50ನೇ) ಹರಿಯಾಣದ ಗೋಲನ್ನು ಸಮಬಲ ಗೊಳಿಸಿದರು.

ಕರ್ನಾಟಕಕ್ಕೆ ನಾಲ್ಕನೇ ಸ್ಥಾನ: ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ತಮಿಳುನಾಡು ಮತ್ತು ಕರ್ನಾಟಕ ತಂಡಗಳು 3–3ರ ಸಮಬಲ ಸಾಧಿಸಿದವು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಆತಿಥೇಯ ತಂಡ 5–3ರಿಂದ ಗೆಲುವು ಸಾಧಿಸಿ ತೃತೀಯ ಸ್ಥಾನ ಪಡೆಯಿತು.

ಕರ್ನಾಟಕ ತಂಡದ ಪರ ನಾಯಕ ಶೇಷೇಗೌಡ (12ನೇ), ಹರೀಶ್ ಮುತಗರ್ (34ನೇ) ಮತ್ತು ಭಾರತದ ಫಾರ್ವರ್ಡ್ ಆಟಗಾರ ಮೊಹಮ್ಮದ್ ರಹೀಲ್ ಮೌಸೀನ್ (38ನೇ ತಲಾ ಒಂದು ಗೋಲು ಗಳಿಸಿದರು.

ಬಿ.ಪಿ. ಸೋಮಣ್ಣ (4ನೇ), ಸುಂದರಪಾಂಡಿ (40ನೇ) ಮತ್ತು ಭಾರತದ ಫಾರ್ವರ್ಡ್ ಆಟಗಾರ ಕಾರ್ತಿ ಸೆಲ್ವಂ (52ನೇ) ಅವರು ತಮಿಳುನಾಡು ಪರ ಚೆಂಡನ್ನು ಗುರಿ ಸೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.