ಬೆಂಗಳೂರು: ‘ಮಿಲ್ಖಾಸಿಂಗ್ ಅವರು ಸಾರ್ವಕಾಲಿಕ ಶ್ರೇಷ್ಠ ಅಥ್ಲೀಟ್. ಅವರಿಗೆ ಭಾರತರತ್ನ ಗೌರವಕ್ಕೆ ಅತ್ಯಂತ ಸೂಕ್ತವಾದ ವ್ಯಕ್ತಿ. ದುರದೃಷ್ಟವಶಾತ್ ಅವರಿಗೆ ಆ ಗೌರವ ಸಿಗಲಿಲ್ಲ...’
1964ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮಿಲ್ಖಾಸಿಂಗ್ ಜೊತೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಸ್ಪ್ರಿಂಟರ್ ಕೆನೆತ್ ಪೊವೆಲ್ ಅವರ ಬೇಸರದ ನುಡಿಗಳಿವು. ಕೋವಿಡ್ ಸೋಂಕಿನಿಂದಾಗಿ ಶುಕ್ರವಾರ ತಡರಾತ್ರಿ ನಿಧನರಾದ ಕ್ರೀಡಾಲೋಕದ ದಂತಕಥೆ ಮಿಲ್ಖಾ ಸಿಂಗ್ ಅವರೊಂದಿಗಿನ ತಮ್ಮ ಒಡನಾಟವನ್ನು ಕೆನೆತ್ ‘ಪ್ರಜಾವಾಣಿ’ ಯೊಂದಿಗೆ ಹಂಚಿಕೊಂಡಿದ್ದಾರೆ.
‘ಆ ಕಾಲದಲ್ಲಿ ಇನ್ನೂ ಅರ್ಜುನ ಪ್ರಶಸ್ತಿ ಆರಂಭವಾಗಿರಲಿಲ್ಲ. ಆದರೆ ಭಾರತ ಸರ್ಕಾರವು ಪದ್ಮಶ್ರೀ ಪುರ ಸ್ಕಾರ ನೀಡಿ ಗೌರವಿಸಿತ್ತು. ಅವರು ಸ್ಪರ್ಧೆಗಳಿಂದ ದೂರ ಸರಿದು ಹಲವು ವರ್ಷಗಳ ನಂತರ ಜೀವಮಾನ ಸಾಧನೆ ನೀಡುವುದಾಗಿ ಘೋಷಿಸಲಾಗಿತ್ತು. ಆಗ ಮಿಲ್ಖಾ, ಈಗಾಗಲೇ ಯುನಿವರ್ಸಿಟಿ ಪದವಿ ಪಡೆದವರಿಗೆ ಹೈಸ್ಕೂಲಿನ ಪ್ರಮಾಣಪತ್ರ ಕೊಡುವಂತಹ ಕ್ರಮ ಇದು. ಪದ್ಮ ಪುರಸ್ಕಾರ ಪಡೆದ ಮೇಲೆ ಈ ಪ್ರಶಸ್ತಿ ಬೇಕಿಲ್ಲವೆಂದು ತಿರಸ್ಕರಿಸಿದ್ದರು‘ ಎಂದು ಕೆನೆತ್ ನೆನಪಿಸಿಕೊಂಡರು.
‘60ರ ದಶಕದಲ್ಲಿ ಅವರೊಂದಿಗಿನ ನನ್ನ ಒಡನಾಟ ಶುರುವಾಗಿತ್ತು. 1962ರಲ್ಲಿ ಬೆಂಗಳೂರಿನಲ್ಲಿ ನಡೆದ ಶಿಬಿರದಲ್ಲಿ ಜೊತೆಯಾಗಿದ್ದೆವು. ನಾವಿಬ್ಬರೂ ಸ್ಪ್ರಿಂಟರ್ ಆದ ಕಾರಣ ಹೆಚ್ಚು ಆಪ್ತರಾಗಿದ್ದೆವು. 1963ರಲ್ಲಿ ಅಲಹಾಬಾದ್‌ನಲ್ಲಿ ನಡೆದಿದ್ದ ಅಂತರರಾಜ್ಯ ಅಥ್ಲೆಟಿಕ್ಸ್‌ನಲ್ಲಿ ನಾನು ಅವರಿಗಿ ಸರಿಸಾಟಿಯಾಗಿ ಓಡಿದ್ದೆ. ಬೆನ್ನು ತಟ್ಟಿ, ಎಷ್ಟು ಸರಳ ಮತ್ತು ಸುಲಭವಾಗಿ ಓಡುತ್ತಿದ್ದೀರಿ ನೀವು ಎಂದಿದ್ದರು. ಅದೇ ಕೂಟದ 200 ಮೀಟರ್ಸ್‌ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಅವರು ಯುವಕರಿಗೆ ಅವಕಾಶ ಬಿಟ್ಟುಕೊಟ್ಟಿದ್ದರು. ಅವರೊಂದಿಗೆ 1964ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೆ. ನಿವೃತ್ತಿಯ ನಂತರವೂ ಬಹಳಷ್ಟು ಸಲ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇವೆ. ಯಾವಾಗಲೂ ಆಪ್ತವಾಗಿರುತ್ತಿದ್ದರು‘ ಎಂದರು ಕೆನೆತ್.
‘ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗ ದಲ್ಲಿ ಭಾರತದ ಅಥ್ಲೀಟ್‌ವೊಬ್ಬರು ಪದಕ ಗೆಲ್ಲುವುದನ್ನು ನೋಡುವುದೇ ತಮ್ಮ ಜೀವನದ ಕೊನೆಯ ಆಸೆ ಎನ್ನುತ್ತಿದ್ದರು. ಆದರೆ ದುರದೃಷ್ಟವಶಾತ್ ಇಲ್ಲಿಯವರೆಗೂ ಅದು ನನಸಾಗಲಿಲ್ಲ. ಮುಂಬರಲಿರುವ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಪದಕ ಜಯಿಸುವ ಭರವಸೆ ಇದೆ. ಆ ಮೂಲಕ ಮಿಲ್ಖಾಗೆ ಗೌರವ ಸಂದರೆ ಚೆನ್ನ‘ ಎಂದರು ಕೆನೆತ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.