ಹರಪನಹಳ್ಳಿ (ವಿಜಯನಗರ ಜಿಲ್ಲೆ): ಕ್ರೊಯೇಶಿಯಾದಲ್ಲಿ ಅಕ್ಟೋಬರ್ 6ರಿಂದ ನಡೆಯುವ ಮಿನಿ ಫುಟ್‌ಬಾಲ್ ವಿಶ್ವಕಪ್‌ಗೆ ಭಾರತ ತಂಡದ ಆಯ್ಕೆ ಆಗಿದ್ದು, ಹರಪನಹಳ್ಳಿಯ ನಟರಾಜ ಬಡಾವಣೆ ನಿವಾಸಿ ನಮಿತ್ ಪಿ. ಜೈನ್ ಸ್ಥಾನ ಪಡೆದಿದ್ದಾರೆ.
‘ವರ್ಲ್ಡ್ ಮಿನಿ ಫುಟ್‌ಬಾಲ್ ಫೆಡರೇಷನ್ (ಡಬ್ಲ್ಯುಎಂಎಫ್) ಈ ವಿಶ್ವಕಪ್ ಆಯೋಜಿಸಿದೆ. ಬೆಂಗಳೂರಿನ ಡಾನ್ ಬಾಸ್ಕೊ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿ ನಮಿತ್ ಅವರು ಜುಲೈ 26ರಿಂದ ಅಹಮದಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ, ಆಯ್ಕೆಯಾಗಿದ್ದಾರೆ’ ಎಂದು ಇಂಡಿಯಾ ಮಿನಿ ಫುಟ್‌ಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ ಚಿಂದಾರಕರ್ ತಿಳಿಸಿದ್ದಾರೆ.
ಪ್ರಸನ್ನಕುಮಾರ್ ಜೈನ್ ಮತ್ತು ಸ್ವರೂಪಾ ಜೈನ್ ದಂಪತಿಯ ಪುತ್ರ ನಮಿತ್, ಮಂಗಳೂರಿನ ತನ್ವೀರ್ ಬಳಿ ತರಬೇತಿ ಪಡೆದಿದ್ದಾರೆ. ಬೆಂಗಳೂರಿನ ಬ್ಲ್ಯೂ ಸ್ಟಾರ್ ಫುಟ್‌ಬಾಲ್ ಕ್ಲಬ್‌ನಲ್ಲಿ ಸದಸ್ಯತ್ವ ಪಡೆದಿದ್ದಾರೆ.
‘ನಮಿತ್‌ಗೆ ಶಿಕ್ಷಣದ ಜೊತೆ ಫುಟ್‌ಬಾಲ್ ಆಡಲು ಪ್ರೋತ್ಸಾಹಿಸಿದೆವು. ಈಗ ಭಾರತದ ತಂಡದಲ್ಲಿ ಸ್ಥಾನ ಪಡೆದಿದ್ದು ಸಂತಸ ತಂದಿದೆ’ ಎಂದು ತಂದೆ ಪ್ರಸನ್ನಕುಮಾರ್ ಜೈನ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.