ADVERTISEMENT

ಇಂದಿನಿಂದ ಮಿನಿ ಒಲಿಂಪಿಕ್ ಕೂಟ

ನಗರದ ವಿವಿಧೆಡೆ 24 ವಿವಿಧ ಕ್ರೀಡೆಗಳ ಆಯೋಜನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 23:30 IST
Last Updated 13 ನವೆಂಬರ್ 2024, 23:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 4,000 ಕ್ರೀಡಾಪಟುಗಳು, ಗುರುವಾರ ನಗರದಲ್ಲಿ ಆರಂಭವಾಗುವ ಏಳು ದಿನಗಳ ಮೂರನೇ ಮಿನಿ ಒಲಿಂಪಿಕ್‌ (14 ವರ್ಷದೊಳಗಿನವರ) ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್‌, ಬಾಕ್ಸಿಂಗ್‌, ಫೆನ್ಸಿಂಗ್, ಫುಟ್‌ಬಾಲ್‌, ಜಿಮ್ನಾಸ್ಟಿಕ್ಸ್, ಹಾಕಿ, ಕೊಕ್ಕೊ, ಕಬಡ್ಡಿ, ವಾಲಿಬಾಲ್, ಈಜು ಸೇರಿದಂತೆ 24 ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ರಾಜ್ಯ ಸರ್ಕಾರ ಈ ಕ್ರೀಡೆಗಳಿಗೆ ₹3 ಕೋಟಿ ಮಂಜೂರು ಮಾಡಿದೆ ಎಂದು ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ) ಅಧ್ಯಕ್ಷ ಕೆ.ಗೋವಿಂದರಾಜ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.

ADVERTISEMENT

ಕೆಒಎ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಈ ಕೂಟವನ್ನು ನಡೆಸುತ್ತಿದೆ.

ಕಂಠೀರವ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ, ವೈಟ್‌ ಫೀಲ್ಡ್‌ನ ಗೋಪಾಲನ್ ಸ್ಪೋರ್ಟ್ಸ್‌ ಸೆಂಟರ್ (ಜಿಮ್ನಾಸ್ಟಿಕ್ಸ್‌), ಬಳ್ಳಾರಿ ರಸ್ತೆ ವಿದ್ಯಾನಗರದ ಜಯಪ್ರಕಾಶ ನಾರಾಯಣ ನ್ಯಾಷನಲ್ ಯೂತ್ ಸೆಂಟರ್‌, ಕೆಎಸ್‌ಎಲ್‌ಟಿಎ ಕೋರ್ಟ್ಸ್‌ (ಟೆನಿಸ್‌), ನೈಸ್‌ ರಸ್ತೆ (ಸೈಕ್ಲಿಂಗ್‌), ಶಾಂತಿನಗರದ ಹಾಕಿ ಕ್ರೀಡಾಂಗಣ, ಬಸವನಗುಡಿಯ ಈಜು ಕೇಂದ್ರದಲ್ಲಿ ಸ್ಪರ್ಧೆಗಳು ನಿಗದಿಯಾಗಿವೆ.

ಕ್ರೀಡಾಕೂಟವನ್ನು ಕಂಠೀರವ ಒಳಾಂಗಣ ಕ್ರಿಡಾಂಗಣದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅತಿಥಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಕೆಒಎ ಮಹಾ ಕಾರ್ಯದರ್ಶಿ ಟಿ.ಅನಂತರಾಜು ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ಡಿ.ರಣದೀಪ್ ಅವರೂ ಹಾಜರಿದ್ದರು.

ಎಳೆಯ ಪ್ರತಿಭಾನ್ವಿತರಿಗೆ ಬಹುಮಾನ, ಉತ್ತೇಜನ...

ಈ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 15 ಮಂದಿ ಅಥ್ಲೀಟುಗಳಿಗೆ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಸೈನ್ಸ್‌ನಿಂದ (ಸಿಒಎಸ್‌) ತಲಾ ₹5000 ನಗದು ಬಹುಮಾನ ನೀಡಲಾಗುವುದು. ಈ ಸ್ಪರ್ಧಿಗಳನ್ನು ಕೆಒಎ ಆಯ್ಕೆ ಮಾಡಲಿದೆ ಎಂದು ಸಿಒಎಸ್‌ನ ನಿರ್ದೇಶಕ ಅಂಥೋನಿ ಚಾಕೊ ತಿಳಿಸಿದರು.

ಇದರ ಜೊತೆಗೆ 200 ಅತ್ಯುತ್ತಮ ಅಥ್ಲೀಟುಗಳನ್ನು ಗುರುತಿಸಿ ಒಂದು ತಿಂಗಳ ತರಬೇತಿ ನೀಡಲಾಗುವುದು. ಅವರ ಕ್ರೀಡಾ ವಿಜ್ಞಾನ ಮೌಲ್ಯಮಾಪನ ನಡೆಸಲಾಗುವುದು. ಮೊದಲ ಸಲ ಇಂಥ ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಡ್ರೀಮ್‌ ಸ್ಪೋರ್ಟ್ಸ್ ಫೌಂಡೇಷನ್ ಇದರ ಪ್ರಾಯೋಜಕತ್ವ ವಹಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.